` ಚಿತ್ರರಂಗದ ಒಗ್ಗಟ್ಟಿಗೆ ಮಣಿದ ಸರ್ಕಾರ : ಥಿಯೇಟರ್ 100% ಓಪನ್ - Editorial - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಚಿತ್ರರಂಗದ ಒಗ್ಗಟ್ಟಿಗೆ ಮಣಿದ ಸರ್ಕಾರ : ಥಿಯೇಟರ್ 100% ಓಪನ್
Film Industry Stands United, Government Allows 100% Capacity

ಇದು ಚಿತ್ರರಂಗದ ಒಗ್ಗಟ್ಟಿನ ಗೆಲುವು. ಬಹುಶಃ ಇತ್ತೀಚೆಗೆ ಯಾವುದೇ ವಿಷಯಕ್ಕೆ ಚಿತ್ರರಂಗ ಈ ಮಟ್ಟಿಗೆ ಒಗ್ಗಟ್ಟಿನ ಪ್ರದರ್ಶನ ಮಾಡಿರಲೇ ಇಲ್ಲ. ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋದನ್ನು ಸಾಬೀತು ಮಾಡಿದ ಗೆಲುವು ಇದು.

ಮಾರುಕಟ್ಟೆ ಓಪನ್ ಇದೆ.. ಬಸ್ ರಶ್ ಇದೆ. ದೇವಸ್ಥಾನ, ಪ್ರವಾಸಿ ಸ್ಥಳ ಎಲ್ಲವೂ ಮುಕ್ತವಾಗಿವೆ. ಮಾಲ್ಗಳಲ್ಲಿ ನಿರ್ಬಂಧ ಇಲ್ಲ. ನಮಗೆ ಮಾತ್ರ ಯಾಕೆ ಈ ನಿರ್ಬಂಧ ಎಂದು ಮೊದಲು ಟ್ವೀಟ್ ಮಾಡಿದ್ದು  ಧ್ರುವ ಸರ್ಜಾ. ಅವರ ಪೊಗರು ಫೆಬ್ರವರಿ 19ಕ್ಕೆ ರಿಲೀಸ್ ಆಗುತ್ತಿದೆ. ಈ ವರ್ಷದ ಮೊದಲ ಸ್ಟಾರ್ ಸಿನಿಮಾ ಪೊಗರು. ಆದರೆ, ಧ್ರುವ ಸರ್ಜಾ ಟ್ವೀಟ್ ಮಾಡಿದ ಬೆನ್ನಲ್ಲೇ ಚಿತ್ರರಂಗದ ಎಲ್ಲರೂ ಒಟ್ಟುಗೂಡಿ ಬಂದಿದ್ದು ಈ ಬಾರಿಯ ವಿಶೇಷ.

ಅಷ್ಟೇ ಅಲ್ಲ, ಚಿತ್ರರಂಗದ ಸಾಂಸ್ಥಿಕ ಶಕ್ತಿಯೂ ಆಗಿರುವ ಫಿಲಂ ಚೇಂಬರ್ ಚಿತ್ರರಂಗದ ಒಕ್ಕೊರಲ ನಾಯಕರೂ ಆಗಿರುವ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸರ್ಕಾರದ ಎದುರು ಪ್ರಬಲವಾಗಿ ವಾದ ಮಂಡಿಸಿ ಗೆದ್ದಿದ್ದು ಈ ಬಾರಿಯ ಚಿತ್ರರಂಗದ ಒಗ್ಗಟ್ಟು.

ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಎರಡೂ ಆಗಿರುವ ಡಿ.ಸುಧಾಕರ್, ಸಿಎಂ ಯಡಿಯೂರಪ್ಪ ಸೂಚನೆ ಮೇರೆಗೆ ಸಭೆ ನಡೆಸಿ ಚಿತ್ರರಂಗಕ್ಕೆ ಅನುಕೂಲವಾಗುವ ರೀತಿಯ ತೀರ್ಮಾನ ಹೊರಡಿಸಿದರು. ಈ ಹೋರಾಟದಲ್ಲಿ ಚಿತ್ರರಂಗವನ್ನು ಸರ್ಕಾರದಲ್ಲಿ ಪ್ರತಿನಿಧಿಸುತ್ತಿರುವ ಸಚಿವ ಬಿ.ಸಿ.ಪಾಟೀಲ್ ಕೂಡಾ ಚಿತ್ರರಂಗದೊಟ್ಟಿಗೇ ಇದ್ದರು.

ಆ ಎಲ್ಲದರ ಪ್ರತಿಫಲ ಥಿಯೇಟರ್ 100% ಓಪನ್ ಮಾಡಲು ಆದೇಶ ಸಿಕ್ಕಿದ್ದು. ಗುರುವಾರವೇ ಆದೇಶ ಹೊರಬೀಳುವ ಸಾಧ್ಯತೆ ಇದೆ. ಶುಕ್ರವಾರದಿಂದ ಥಿಯೇಟರ್ 100% ಓಪನ್ ಆಗೋಕೆ ಯಾವುದೇ ಸಮಸ್ಯೆಗಳಿರೋದಿಲ್ಲ. ಅಫ್ಕೋರ್ಸ್.. ಥಿಯೇಟರ್ ಮಾಲೀಕರು ಮತ್ತು ಪ್ರೇಕ್ಷಕರು ಕಡ್ಡಾಯವಾಗಿ ಕೆಲವು ಕಠಿಣ ಸೂತ್ರಗಳನ್ನು ಪಾಲಿಸಲೇಬೇಕಿದೆ. ಪಾಲಿಸಿದರೆ ಆಯಿತು.

ಥಿಯೇಟರ್ 100% ಓಪನ್ ಆಗಿದ್ದಕ್ಕಿಂತಲೂ ಹೆಚ್ಚಿನ ದೊಡ್ಡ ಖುಷಿ, ಚಿತ್ರರಂಗದ ಒಗ್ಗಟ್ಟು. ಈ ಒಗ್ಗಟ್ಟು ಹೀಗೆಯೇ ಇರಲಿ.

ಕೆ.ಎಂ.ವೀರೇಶ್

ಚಿತ್ರಲೋಕ ಸಂಪಾದಕರು