ಚಿತ್ರಮಂದಿರಗಳು ಹಾಗೂ ಚಿತ್ರರಂಗಕ್ಕೆ ಹಿಡಿದ ಕೊರೊನಾ ಗ್ರಹಣ ಮುಗಿಯುವ ಸಮಯವೇನೋ ಬಂತು. ಆದರೆ.. ಗ್ರಹಣ ಕಳೆದ ಕೂಡಲೇ ಚಿತ್ರರಂಗ ಸಾಣೆ ಹಿಡಿದ ವಜ್ರದಂತೆ ಪಳಪಳನೆ ಹೊಳೆಯುತ್ತಾ..? ಚಿತ್ರಮಂದಿರಗಳ ಬಾಗಿಲು ತೆರೆದರೆ ಚಿತ್ರರಂಗ ದಿಢೀರನೆ ಚೇತರಿಸಿಕೊಳ್ಳುತ್ತಾ..? ಇಷ್ಟಕ್ಕೂ ಥಿಯೇಟರ್ ಬಾಗಿಲು ತೆರೆದ ಕೂಡಲೇ ದೊಡ್ಡ ದೊಡ್ಡ ಚಿತ್ರಗಳು ತೆರೆಗೆ ಬರುತ್ತವಾ..? ಈ ಎಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರ.. ಇಲ್ಲ. ಸಾಧ್ಯವಿಲ್ಲ.
ಅಕ್ಟೋಬರ್ 15ರಿಂದ ಚಿತ್ರಮಂದಿರ ಓಪನ್ ಮಾಡೋಕೆ ಅನುಮತಿ ಕೊಟ್ಟರೂ, ಅವು ಕಾರ್ಯಾರಂಭ ಮಾಡೋಕೆ ಇನ್ನೂ 15 ದಿನ ಸಮಯ ಬೇಕೇ ಬೇಕು. ಕಾರಣ ಇಷ್ಟೆ, 7 ತಿಂಗಳಿಂದ ತುಕ್ಕು ಹಿಡಿದಿರುವ ಮೆಷಿನರಿಗಳನ್ನು ಮೊದಲು ಸರಿಪಡಿಸಿಕೊಳ್ಳಬೇಕು. ಥಿಯೇಟರುಗಳಲ್ಲಿ ಬಿದ್ದಿರುವ ದೂಳು ಹೊಡೆಯಬೇಕು. ಕೆಲವು ಕಡೆ ಸಂಬಳ, ಸವಲತ್ತು ನಿರ್ವಹಣೆ ಮಾಡಲಾಗದೆ ಕೆಲಸಗಾರರನ್ನು ಮನೆಗೆ ಕಳಿಸಲಾಗಿದೆ. ಈಗ ಅವರನ್ನು ಹುಡುಕಬೇಕು. ಅದೂ ಕಡಿಮೆ ಸಂಬಳಕ್ಕೆ. ಕಾರಣ, ಸರ್ಕಾರ ಅನುಮತಿ ಕೊಟ್ಟಿರೋದೇ 50:50 ಪ್ರದರ್ಶನಕ್ಕೆ. 7 ತಿಂಗಳು ಸೈಲೆಂಟ್ ಆಗಿದ್ದ ಚಿತ್ರಮಂದಿರಗಳ ಬಾಗಿಲನ್ನು ದಿಢೀರನೆ ತೆರೆಯೋಕೆ ಸಾಧ್ಯವಿಲ್ಲ. ಇನ್ನು 50:50 ಪ್ರದರ್ಶನಕ್ಕಷ್ಟೇ ಅವಕಾಶ ಕೊಟ್ಟಿರೋದ್ರಿಂದ ಮೊದಲಿನ ಮಾದರಿಯಲ್ಲಿ ಸಿನಿಮಾ ಪ್ರದರ್ಶನ ಸಾಧ್ಯವಿಲ್ಲ. ಹೀಗಾಗಿ ಬಾಡಿಗೆ ಕಟ್ಟಿ ಸಿನಿಮಾ ಪ್ರದರ್ಶನದ ಲಾಭ ಪಡೆಯುತ್ತಿದ್ದ ನಿರ್ಮಾಪಕರು ಅನಿವಾರ್ಯವಾಗಿ ಪರ್ಸೆಂಟೇಜ್ ಲೆಕ್ಕಕ್ಕೆ ಬರುತ್ತಾರೆ. 50:50ಯೋ.. 60:40ನೋ.. ಏನೋ ಒಂದು ಆಗುತ್ತದೆ. ಲಾಭವಂತೂ ಮೊದಲಿನಂತೆ ಇರೋದಿಲ್ಲ.
ಇದೆಲ್ಲ ಥಿಯೇಟರುಗಳ ವಿಷಯವೇ ಆಯಿತು. ಇನ್ನು ರೆಡಿಯಾಗಿರೋ ಸಿನಿಮಾಗಳ ಲೆಕ್ಕಕ್ಕೆ ಬಂದರೆ ದರ್ಶನ್‍ರ ರಾಬರ್ಟ್, ಸುದೀಪ್ ಅವರ ಕೋಟಿಗೊಬ್ಬ-3, ದುನಿಯಾ ವಿಜಯ್ ಅವರ ಸಲಗ.. ಬಿಡುಗಡೆಗೆ ಕ್ಯೂನಲ್ಲಿರೋ ಸ್ಟಾರ್ ಸಿನಿಮಾಗಳು. ಇನ್ನು ಕೆಲವು ಹೊಸಬರ ಚಿತ್ರಗಳು ಹಾಗೂ ಸಣ್ಣ ಬಜೆಟ್ಟಿನ ಚಿತ್ರಗಳೂ ರೆಡಿ ಇವೆ. ಆ ಚಿತ್ರಗಳು ಈಗಿನ 50:50 ಪ್ರದರ್ಶನದ ವೇಳೆ ಬಿಡುಗಡೆಯಾಗುತ್ತವಾ ಅನ್ನೋದು ಪ್ರಶ್ನೆ. ರಿಸ್ಕ್ ತೆಗೆದುಕೊಳ್ಳೋಕೆ ಯಾರು ರೆಡಿ ಇರುತ್ತಾರೆ.
ಹಾಗಂತ ನಿರ್ಮಾಪಕರ ಕಷ್ಟವೇನೂ ಕಡಿಮೆಯಾಗಿಲ್ಲ. ಬಿಡುಗಡೆ ಮಾಡಲೇಬೇಕು ಎಂದರೆ ಅವರು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲೇಬೇಕು. ಕಾರಣ ಸಿಂಪಲ್, ಥಿಯೇಟರುಗಳಿಗೆ ಪ್ರೇಕ್ಷಕರು ಬರುವುದೇ ಕಡಿಮೆ, ಇಂತಹ ಹೊತ್ತಿನಲ್ಲಿ ಬರುವ ಪ್ರೇಕ್ಷಕರನ್ನು ಹೇಗಾದರೂ ಮಾಡಿ ಸೆಳೆಯಲೇಬೇಕು. ಹೀಗಾಗಿ ನಿರ್ಮಾಪಕರು ಜಾಹೀರಾತುಗಳಿಗೆ ಹೆಚ್ಚು ಖರ್ಚು ಮಾಡಲೇಬೇಕು.
ಇಷ್ಟೆಲ್ಲ ಆಗಿಯೂ ಚಿತ್ರಗಳು ಲಾಭ ಗಳಿಸುತ್ತವೆ ಎಂಬ ಗ್ಯಾರಂಟಿ ಇದೆಯಾ..? ಹೌದು ಎನ್ನುವ ಧೈರ್ಯ ಯಾರಿಗೂ ಇಲ್ಲ. ಏಕೆಂದರೆ ಈಗ ಬಾಗಿಲು ಮುಚ್ಚಿ ಓಪನ್ ಆಗಿರುವ, ಗ್ರಾಹಕರ ಸಂಖ್ಯೆಯನ್ನೇ ನಂಬಿಕೊಂಡಿರುವ ಹೋಟೆಲ್, ಸೆಲೂನ್, ಜಿಮ್, ಮಾಲ್‍ಗಳು ಏದುಸಿರು ಬಿಡುತ್ತಿವೆ.
ಹಾಗಾದರೆ ಇವೆಲ್ಲದರ ನಡುವೆ ಮುನ್ನುಗ್ಗಿ ಬರುವ ಎಂಟೆದೆ ಬಂಟ, ಧೈರ್ಯವಂತ ಯಾರಾಗಬಹುದು..? ಒಂದಂತೂ ಸತ್ಯ, 2020ನೇ ವರ್ಷ ಸಿನಿಮಾಗಳಿಗೆ ಅಲ್ಲವೇ ಅಲ್ಲ.
ಕೆ.ಎಂ.ವೀರೇಶ್
ಸಂಪಾದಕರು, ಚಿತ್ರಲೋಕ ಡಾಟ್ ಕಾಮ್