40 ದಿನಗಳ ಸುದೀರ್ಘ ತಪಸ್ಸಿನ ನಂತರ ವೈಕುಂಠದ ಬಾಗಿಲು ತೆರೆಯುವಂತೆ ಮದ್ಯದಂಗಡಿಗಳೆಲ್ಲ ಬಾಗಿಲು ತೆರೆದವು. ಅಬ್ಬಬ್ಬಾ.. ಅದೇನು ಸಂಭ್ರಮ.. ಬಿಸಿಲು ನೆತ್ತಿ ಸುಡುತ್ತಿದ್ದರೂ, ಹೊಟ್ಟೆ ಕುಯ್ಯೋ ಮರ್ರೋ ಎನ್ನುತ್ತಿದ್ದರೂ.. ಜನ ಕದಲಲಿಲ್ಲ. ನಿಂತು.. ನಿಂತೂ.. ತಾಸುಗಟ್ಟಲೆ ನಿಂತು.. `ಎಣ್ಣೆ' ಖರೀದಿಸಿದರು.
ಅಷ್ಟೇನಾ..? ನೋ ವೇ.. ಎಣ್ಣೆ ಖರೀದಿಸಿದ ಎಷ್ಟೋ ಜನ ರಸ್ತೆಯಲ್ಲೇ ಕುಡಿದರು. ಎಂದಿನಂತೆ ಬಿದ್ದರು. ಎದ್ದರು. ಚರಂಡಿಯನ್ನೇ ಹಾಸಿಗೆ ಮಾಡಿಕೊಂಡರು. ಅದು ಒಂದು ಕಥೆಯಾದರೆ.. ಖರೀದಿ ವೇಳೆ ಸೋಷಿಯಲ್ ಡಿಸ್ಟೆನ್ಸ್ ಮಾಡಿ ಎಂಬ ನಿಯಮ ಜನರಿಗೆ ಅರ್ಥವೇ ಆಗಲಿಲ್ಲ. ಒಬ್ಬರ ಮೈಮೇಲೊಬ್ಬರು ಬಿದ್ದು.. ನೂಕುನುಗ್ಗಲಿನಲ್ಲಿ ಗುಂಡು ಖರೀದಿಸಿ ಗುಂಡಣ್ಣರಾದರು. ಮೊದಲ ದಿನ 45 ಕೋಟಿ ಬಿಸಿನೆಸ್ ಎಂದು ಅಬಕಾರಿ ಇಲಾಖೆ ಎದೆಯುಬ್ಬಿಸಿ ಹೇಳಿತು.
ಈಗ ಚಿತ್ರರಂಗದವರು ಕೇಳೋದ್ರಲ್ಲಿ ತಪ್ಪೇನಿದೆ. ಥಿಯೇಟರು, ಮಾಲ್‍ಗಳನ್ನೂ ಓಪನ್ ಮಾಡಿ. ಅನುಮಾನವೇ ಬೇಡ. ಪೊಲೀಸರ ಅಗತ್ಯವೇ ಇಲ್ಲದಂತೆ ಚಿತ್ರಮಂದಿರದವರು, ಮಲ್ಟಿಪ್ಲೆಕ್ಸಿನವರು ಸೋಷಿಯಲ್ ಡಿಸ್ಟೆನ್ಸಿಂಗ್ ಮೈಂಟೇನ್ ಮಾಡ್ತಾರೆ. ಇಡೀ ಚಿತ್ರಮಂದಿರಕ್ಕೆ ಸ್ಯಾನಿಟೈಸರ್ ಮಾಡೋಕೆ ಪಕ್ಕಾ ವ್ಯವಸ್ಥೆಯನ್ನೂ ಮಾಡಿಕೊಳ್ತಾರೆ. ಕೊರೊನಾ ತಡೆಗಟ್ಟಲು ಇರುವ ಕಾನೂನು, ನಿಯಮಗಳನ್ನು ಶಿರಸಾವಹಿಸಿ ಚಾಚೂತಪ್ಪದಂತೆ ಪಾಲಿಸುತ್ತಾರೆ. ದಯವಿಟ್ಟು ಚಿತ್ರಮಂದಿರಗಳೂ.. ಮಾಲ್‍ಗಳೂ ಓಪನ್ ಆಗಲಿ.
ಚಿತ್ರರಂಗವನ್ನು ನಂಬಿಕೊಂಡು ಬದುಕಿರುವ ಸಾವಿರಾರು ಕುಟುಂಬಗಳಿವೆ. ಹೆಂಡ ಮಾರದೇ ಇದ್ದರೆ ಸರ್ಕಾರ ನಡೆಯಲ್ಲ ಎನ್ನುವುದು ಎಷ್ಟು ಸತ್ಯವೋ.. ಸಿನಿಮಾಗಳು ರನ್ ಆಗದೇ ಇದ್ದರೆ ಕಾರ್ಮಿಕರು ಬದುಕಲ್ಲ ಎನ್ನುವುದೂ ಅಷ್ಟೇ ಸತ್ಯ. ಸರ್ಕಾರಕ್ಕೇ ಸಿಗದ ಹಣ ಕಾರ್ಮಿಕರಿಗೆ ಸಿಗುವುದಾದರೂ ಹೇಗೆ..? ಸರ್ಕಾರ ನಡೆಯೋಕೆ ಅಬಕಾರಿ ಎಷ್ಟು ಮುಖ್ಯವೋ, ಚಿತ್ರರಂಗ ನಡೆಯೋಕೆ ಚಿತ್ರಮಂದಿರಗಳು ನಡೆಯುವುದು, ಶೂಟಿಂಗ್ ನಡೆಯುವುದೂ ಅಷ್ಟೇ ಮುಖ್ಯ. ಅಲ್ಲವೇ..
2 ತಿಂಗಳ ಆರ್ಥಿಕ ಹೊಡೆತವನ್ನು ಸರ್ಕಾರವೇ ತಡೆದುಕೊಳ್ಳೋಕೆ ಅಸಾಧ್ಯವಾಗಿರುವಾಗ ಯಾವುದೇ ಉದ್ಯಮ, ಉದ್ಯಮಿ, ಕಾರ್ಮಿಕ ತಡೆದುಕೊಂಡಾನೇ..? ಮುಖ್ಯಮಂತ್ರಿಗಳೇ.. ದಯವಿಟ್ಟು ಚಿತ್ರಮಂದಿರಗಳನ್ನು ತೆರೆಯಿರಿ. ಚಿತ್ರರಂಗ ಕೆಲಸ ಮಾಡಲು ಅವಕಾಶ ಕೊಡಿ. ಮತ್ತೊಮ್ಮೆ ನೆನಪಿಸಬೇಕೆಂದರೆ ಮದ್ಯ ಮಾರಾಟದ ವೇಳೆ ಆದಂತಹ ಅನಾಹುತಗಳು ಖಂಡಿತಾ ಚಿತ್ರಮಂದಿರಗಳಲ್ಲಿ ಆಗಲ್ಲ ಎನ್ನುವ ನಂಬಿಕೆ ನಮ್ಮದು.
ಕೆ.ಎಂ.ವೀರೇಶ್
ಸಂಪಾದಕರು, ಚಿತ್ರಲೋಕ ಡಾಟ್ ಕಾಮ್