` 200ರ ಗಡಿ ದಾಟದ್ದೇವೆ.. ಸಂಭ್ರಮಿಸೋಣ.. ಸಂಕಟದ ಮಾತೇಕೆ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
double century for kannada films this year
Editor KM Veeresh

ಕನ್ನಡ ಚಿತ್ರಗಳ ಸಂಖ್ಯೆ ಈ ವರ್ಷ 200ರ ಗಡಿ ದಾಟಿದೆ. ವರ್ಷದ ಕೊನೆಗೆ 220ರ ಗಡಿ ದಾಟುವುದು ಬಹುತೇಕ ಖಚಿತ. ಇದು ಕನ್ನಡ ಚಿತ್ರರಂಗದಲ್ಲೇ ದಾಖಲೆ. 8 ದಶಕಗಳಲ್ಲಿ ಕನ್ನಡ ಚಿತ್ರರಂಗ ಈ ಗಡಿಯನ್ನು ಮುಟ್ಟಿರಲಿಲ್ಲ. ಒಂದಾನೊಂದು ಕಾಲದಲ್ಲಿ.. ಚಿತ್ರರಂಗ ಶುರುವಾದ ಆರಂಭದ ದಿನಗಳಲ್ಲಿ ವರ್ಷಕ್ಕೆ ಮೂರೋ ನಾಲ್ಕು ಚಿತ್ರಗಳು ಬಂದರೆ.. ಅದೇ ದೊಡ್ಡದು. ಒಂದೆರಡು ವರ್ಷ ಒಂದು ಸಿನಿಮಾ ಕೂಡಾ ಬಂದಿಲ್ಲದ ಇತಿಹಾಸ ಕನ್ನಡ ಚಿತ್ರರಂಗಕ್ಕಿದೆ. ಕನ್ನಡದಲ್ಲಿ ಸಿನಿಮಾಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಇಂಡಸ್ಟ್ರಿ ಕರ್ನಾಟಕದಲ್ಲಿ ನೆಲೆಯೂರಿದ ನಂತರ.

ಡಾ.ರಾಜ್, ಲೀಲಾವತಿ, ಬಾಲಕೃಷ್ಣ, ನರಸಿಂಹರಾಜು, ಎಂ.ವಿ.ರಾಜಮ್ಮ ಜೊತೆಗೂಡಿ, ಕರ್ನಾಟಕದಲ್ಲಿಯೇ ಸಂಪೂರ್ಣವಾಗಿ ನಿರ್ಮಿಸಿದ ಚಿತ್ರ ರಣಧೀರ ಕಂಠೀರವ. ಒಂದು ಲೆಕ್ಕದಲ್ಲಿ ಕನ್ನಡ ಚಿತ್ರಗಳ ಸಂಖ್ಯೆ ಹೆಚ್ಚಲು ಶುರುವಾಗಿದ್ದು ಆನಂತರವೇ. ಸುಮ್ಮನೆ ನೋಡಿ.. ರಣಧೀರ ಕಂಠೀರವದ ಆ ಕಾನ್ಸೆಪ್ಟ್, ಕಲಾವಿದರು ತಂತ್ರಜ್ಞರೇ ನಿರ್ಮಾಪಕರಾಗುವ ಆ ಯೋಜನೆಯೇ ಈಗ ದೊಡ್ಡ ಮಟ್ಟದಲ್ಲಿ ಚಾಲ್ತಿಯಲ್ಲಿರೋದು. ಕನ್ನಡ ಚಿತ್ರಗಳ ಸಂಖ್ಯೆ 200ರ ಗಡಿ ದಾಟಿ ಮುನ್ನುಗ್ಗುತ್ತಿರುವುದಕ್ಕೆ ಕಾರಣ.

ಸಂಭ್ರಮಿಸೋಕೆ ಇನ್ನೂ ಒಂದು ಕಾರಣವಿದೆ. ಇಡೀ ವರ್ಷದಲ್ಲಿ ಇದುವರೆಗೆ ಪುನೀತ್, ದರ್ಶನ್, ಯಶ್, ಗಣೇಶ್, ರಕ್ಷಿತ್ ಶೆಟ್ಟಿ ಸಿನಿಮಾಗಳು ಬಂದಿಲ್ಲ. ಶಿವಣ್ಣ ಮತ್ತು ಸುದೀಪ್ ಬಿಟ್ಟರೆ ದೊಡ್ಡ ಸ್ಟಾರ್‍ಗಳ ಚಿತ್ರಗಳು ಇಲ್ಲವೇ ಇಲ್ಲ. ಹೀಗಿದ್ದರೂ ಚಿತ್ರರಂಗ 200ರ ಗಡಿ ದಾಟಿದೆ. ಈ ಕಾರಣಕ್ಕೂ ನಾವು ಸಂಭ್ರಮಿಸಬೇಕು. ಹೊಸಬರ ಹೊಸ ಹೊಸ ಪ್ರಯತ್ನಗಳಿಗೆ ಕನ್ನಡದ ಪ್ರತಿಯೊಬ್ಬ ಸ್ಟಾರ್‍ನಟರೂ ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಪ್ರೋತ್ಸಾಹಿಸುತ್ತಿದ್ದಾರೆ. ಇಷ್ಟವಾದರೆ, ತಾವೇ ಪ್ರಚಾರಕ್ಕಿಳಿಯುತ್ತಿದ್ದಾರೆ. 200ರ ಗಡಿ ದಾಟಿದ ಈ ಹೊತ್ತು ಸಂಭ್ರಮಿಸೋಕೆ ಕಾರಣಗಳಲ್ಲಿ ಇದೂ ಒಂದು.

ಇಡೀ ಚಿತ್ರರಂಗ ಒಂದು ಮನೆಯಿದ್ದಂತೆ ಎನ್ನುವುದು ಮಾತಾಗಿತ್ತು. ಈ ಬಾರಿ.. ಅದು ಮನೆಯಂತೆ ಹೊರಗಿನವರಿಗೂ ಕಾಣಿಸಿದೆ. ಕೆಸಿಸಿ ಕ್ರಿಕೆಟ್ ಟೂರ್ನಿಗಿಂತ ದೊಡ್ಡ ಉದಾಹರಣೆ ಬೇಕಿಲ್ಲ. ದಿ ವಿಲನ್ ದಾಖಲೆ ಬರೆದಿಟ್ಟಿದೆ. ಕೆಜಿಎಫ್ ಅನ್ನೋ ಸಿನಿಮಾ, ದೇಶಾದ್ಯಂತ ಸಂಚಲನ ಮೂಡಿಸುತ್ತಿದೆ. ಪೈಲ್ವಾನ್, ಕೋಟಿಗೊಬ್ಬ3, ಅವನೇ ಶ್ರೀಮನ್ನಾರಾಯಣ, ನಟಸಾರ್ವಭೌಮ, ಕುರುಕ್ಷೇತ್ರ.. ಹೀಗೆ ಹಲವು ಚಿತ್ರಗಳು ಹಂಗಾಮ ಸೃಷ್ಟಿಸುವ ಮುನ್ಸೂಚನೆ ಕೊಟ್ಟಿವೆ. ಸಂಭ್ರಮಿಸಬೇಡವೇ...

``ಅಯ್ಯೋ.. 200 ಆದ್ರೇನ್ರೀ.. ಹಿಟ್ ಆಗಿದ್ದು ಎಷ್ಟು ಹೇಳಿ..? ಅದಾಗದೇ ಇದ್ರೆ ಏನಾದ್ರೇನು..? ಕನ್ನಡದವ್ರಿಗೆ ಸಿನಿಮಾ ಮಾಡೋಕ್ ಬರಲ್ಲ ಕಣ್ರಿ.. ತಮಿಳು, ತೆಲುಗು ನೋಡಿ ಕಲೀಬೇಕು.. '' ತೀರಾ ಬೇಸರವಾಗುವುದು 200ರ ಗಡಿ ದಾಟಿದ ಈ ಹೊತ್ತಿನಲ್ಲಿ ಇಂತಹ ಕೊಂಕುಗಳು ಕೇಳಿ ಬಂದಾಗ. ಒಂದಂತೂ ಸತ್ಯ.. ಕನ್ನಡದಲ್ಲಿ ಈ ವರ್ಷ ಕಮರ್ಷಿಯಲ್ ಮತ್ತು ಪ್ರಯೋಗಾತ್ಮಕ ಚಿತ್ರಗಳ ಸರಮಾಲೆಯೇ ಇದೆ. ಬೇರೆ ಭಾಷೆಗೆ ಹೋಲಿಸಿದರೆ, ಈ ವರ್ಷ ಪ್ರಯೋಗಾತ್ಮಕ ಚಿತ್ರಗಳ ಸಂಖ್ಯೆ ಹೆಚ್ಚು. ಸಕ್ಸಸ್ ರೇಟ್ ಕೂಡಾ ಜಾಸ್ತಿಯೇ ಇದೆ. ಇದಾವುದನ್ನೂ ವಾಸ್ತವವಾಗಿ ನೋಡದ ಕೆಲವು ಮನಸ್ಥಿತಿಗಳು ಒಂದು ವಿಷಾದ ಗೀತೆಯನ್ನು ಹಾಡುತ್ತಲೇ ಇರುತ್ತವೆ. 

ನಿಜವಾಗಿ ಹೇಳಬೇಕೆಂದರೆ, 2018ನೇ ಇಸವಿ, ಕನ್ನಡ ಚಿತ್ರರಂಗದ ಪಾಲಿಗೆ ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ಅಲ್ಲಿ ನಗು, ನೋವು, ನಲಿವು, ಶೃಂಗಾರ, ವಿವಾದ, ಸಂಭ್ರಮ, ಸಡಗರ, ಸಾಧನೆ, ವೈಭವ, ಅದ್ಧೂರಿತನ, ಸಾಹಸ, ಹೊಡೆದಾಟ, ಆಟ, ಹೀನಾಯ ಸೋಲು, ಭರ್ಜರಿ ಗೆಲುವು, ಅನಿರೀಕ್ಷಿತ ಅಚ್ಚರಿ, ನಿರೀಕ್ಷಿತ ಸರ್ಜರಿ.. ಎಲ್ಲವೂ ಇದೆ. ಕ್ಲೈಮಾಕ್ಸ್‍ಗೆ ಭರ್ಜರಿಯಾಗಿ ಕೆಜಿಎಫ್ ಇದೆ. ಸಂಭ್ರಮಿಸಬೇಕು.. ಸಂಭ್ರಮಿಸಲೇಬೇಕು. 

ಕೆ.ಎಂ.ವೀರೇಶ್

ಸಂಪಾದಕರು

ಚಿತ್ರಲೋಕ ಡಾಟ್ ಕಾಮ್

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery