“ಸಿನಿಮಾ ಅಂದರೆ ಕ್ರಿಕೆಟ್ ಥರ. ಎರಡೂ ಟೀಮ್ ವರ್ಕ್. ಕ್ರಿಕೆಟ್ಟಲ್ಲಿ ಒಬ್ಬ ಸೆಂಚುರಿ ಹೊಡೆದರೆ ಮ್ಯಾಚ್ ಗೆಲ್ಲೋದಕ್ಕಾಗೋಲ್ಲ. ಎಲ್ಲರೂ ಚೆನ್ನಾಗಿ ಆಡಬೇಕು. ಸಿನಿಮಾದಲ್ಲೂ ಅಷ್ಟೆ, ಇಡೀ ಟೀಮ್ ಒಗ್ಗಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸಿನಿಮಾ ಗೆಲ್ಲುತ್ತದೆ...”
ವಿಷ್ಣುವರ್ಧನ್ ಅಮೋಘ ಇಪ್ಪತ್ತೊಂದನೇ ಸಾರಿ ಈ ಮಾತನ್ನು ಹೇಳಿದರು. ಹೊಸದಾಗಿ ಫೀಲ್ಡ್ ಗೆ ಬಂದ ಪತ್ರಕರ್ತರು ಶ್ರದ್ಧೆಯಿಂದ ಬರೆದುಕೊಂಡರು. ನನ್ನಂಥ ಹಳಬರು ಹಳೇ ಕಾಪಿಯನ್ನೇ ಮತ್ತೆ ಪ್ರಿಂಟ್ ಮಾಡಿದರಾಯಿತು ಅಂತ ಸುಮ್ಮನಿದ್ದೆವು.
“..ಯಶಸ್ಸು ಅನ್ನುವುದು ನಮ್ಮ ಕೈಯಲ್ಲಿಲ್ಲ. ಇಟ್ ಜಸ್ಟ್ ಹ್ಯಾಪನ್ಸ್. ಅದು ತಾನಾಗಿ ಸಂಭವಿಸಬೇಕು. ಹಾಗಾಗಿ ತೆರೆಕಾಣುವುದಕ್ಕೆ ಮುಂಚೆಯೇ ಈ ಚಿತ್ರ ಯಶಸ್ಸು ಕಾಣುತ್ತದೆ ಎಂದು ಹೇಳುವುದು ತಪ್ಪಾಗುತ್ತದೆ. ಪ್ರೇಕ್ಷಕನ ಮನಸ್ಸು ಮತ್ತು ಭಗವಂತನ ಇಚ್ಚೆಯನ್ನು ಅರಿಯುವುದಕ್ಕಾಗೋದಿಲ್ಲ…”
ವಿಷ್ಣುವರ್ಧನ್ ತಲೆಯೆತ್ತಿ ಆಕಾಶ ನೋಡಿದರು. ಹೊಸ ಪತ್ರಕರ್ತರು ತಲೆತಗ್ಗಿಸಿ ನೋಟ್ಸ್ ಮಾಡಿಕೊಂಡರು, ಹಳಬರು ಯಥಾಪ್ರಕಾರ ಸುಮ್ಮನಿದ್ದರು. ಅವರಿಗೆ ಈ ಮಾತು ಕಂಠಪಾಠವಾಗಿತ್ತು.
ಆಗಷ್ಟೇ ವಿಷ್ಣು ನಟಿಸಿದ್ದ ಚಿತ್ರವೊಂದು ಬಿಡುಗಡೆಯಾಗಿತ್ತು, ಅದರ ಬಗ್ಗೆ ಕೊಂಚ ಕಟುವಾಗ ವಿಮರ್ಶೆಗಳೇ ಬಂದಿದ್ದವು. ಅದಾಗಿ ಒಂದು ವಾರದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಷ್ಣು ಒಂದು ಬಾಂಬ್ ಎಸೆದರುಃ “ಸಿನಿಮಾ ಮಾಡೋರ್ಯಾರೋ..ನೋಡೋರ್ಯಾರೋ...ಮಾತಾಡೋರ್ಯಾರೋ..”. ಅವರ ಮಾತಲ್ಲಿದ್ದ ವ್ಯಂಗ್ಯ ಎಲ್ಲರಿಗೂ ಅರ್ಥವಾಗಿತ್ತು. ನೀವೇನೇ ಬರೆದರೂ ಸಿನಿಮಾ ನೋಡೋರು ನೋಡೇ ನೋಡುತ್ತಾರೆ ಅನ್ನೋದನ್ನು ಮೂರು ಪದಗಳಲ್ಲಿ ವಿಷ್ಣು ಹೇಳಿದ್ದರು. ನಾವು ಅದನ್ನೂ ಅನಿವಾರ್ಯ ಕರ್ಮ ಅನ್ನುವಂತೆ ಬರೆದವು.
ಇಷ್ಟಾದರೂ ಪತ್ರಕರ್ತರಿಗೆ ವಿಷ್ಣುವರ್ಧನ್ ಅವರನ್ನು ಕಂಡರೆ ಅಪಾರ ಗೌರವವೂ, ಅಷ್ಟೇ ಪ್ರೀತಿಯೂ ಇತ್ತು. ವಿಷ್ಣು ಮತ್ತು ಪತ್ರಕರ್ತರ ಸಂಬಂಧ ಗಂಡಹೆಂಡ್ತಿ ಸಂಬಂಧದ ಥರಾನೇ ಇತ್ತು. ಹೆಂಡತಿಯ ಪಾತ್ರವನ್ನು ಬಹಳ ಸಾರಿ ಪತ್ರಕರ್ತರೇ ನಿರ್ವಹಿಸುತ್ತಿದ್ದರು ಅನ್ನುವುದು ವಾಸ್ತವ. ವಿಷ್ಣು ಅವರಲ್ಲಿ ಹೇಳುವುದಕ್ಕೆ ಬಹಳ ಇತ್ತು. ಆದರೆ ಅವರು ಹೇಳಿದ್ದು ಕಡಿಮೆ. ಪತ್ರಕರ್ತರಲ್ಲಿ ಕೇಳುವುದಕ್ಕೆ ಬಹಳ ಇತ್ತು, ಆದರೆ ಯಾರೂ ಕೇಳಿದ್ದು ಕಡಿಮೆ. ಯಾಕೆಂದರೆ ಎಲ್ಲರಿಗೂ ವಿಷ್ಣುವರ್ಧನ್ ಮೂಡ್ ಬಗ್ಗೆ ವಿಚಿತ್ರ ಭಯವಿತ್ತು. ಪ್ರಶ್ನೆ ಕೇಳುವಾಗ ಏನಾದರೂ ಎಡವಟ್ಟಾದರೆ ವಿಷ್ಣು ಜಾಡಿಸುತ್ತಿದ್ದರು. ನಿರ್ಮಾಪಕರಿಗೂ ವಿಷ್ಣು ಪತ್ರಿಕಾಗೋಷ್ಠಿ ಅಂದರೆ ಆತಂಕ, ದಯವಿಟ್ಟು ವಿಷ್ಣು ಸಾರ್ ಅವರ ಮೂಡ್ ಕೆಡಿಸುವ ಪ್ರಶ್ನೆ ಕೇಳಬೇಡಿ ಅನ್ನುವ ದೈನ್ಯತಾ ಭಾವ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.
ವಿಷ್ಣುವರ್ಧನ್ ಮೂಡ್ ಬಗ್ಗೆ ಪ್ರಕಟವಾದಷ್ಟು ಲೇಖನಗಳು ಇನ್ಯಾವ ಕಲಾವಿದನ ಬಗ್ಗೆಯೂ ಬಂದಿರಲಿಕ್ಕಿಲ್ಲ. ವಿಷ್ಣು ಮೂಡ್ ಅನ್ನುವುದು ಋತುಗಳು ಇದ್ದಹಾಗೆ, ಕ್ಷಣಕ್ಷಣಕ್ಕೆ ಬದಲಾಗುತ್ತಿತ್ತು. ಕ್ರಿಕೆಟ್ ಬಗ್ಗೆ ಮಾತಾಡಿದರೆ ಅವರು ಮೂಡಿಗೆ ಬಂದರು ಅಂತಾನೇ ಲೆಕ್ಕ. ಟೆಸ್ಟ್ ನಿಂದ ಒನ್ ಡೇ ಮ್ಯಾಚ್ ತನಕ ಅವರ ಲಹರಿ ಹರಿಯುತ್ತಿತ್ತು. ಸಚಿನ್ ಬ್ಯಾಟಿಂಗ್ ಬಗ್ಗೆ ಮಾತಾಡುತ್ತಲೇ ಆಧ್ಯಾತ್ಮಕ್ಕೆ ಜಿಗಿಯುತ್ತಿದ್ದ ಅವರ ಮಾತಿನ ವರಸೆ ನಮ್ಮನ್ನು ಕಂಗಾಲಾಗಿಸುತ್ತಿತ್ತು. ಕೋಕ್ ಟೇಲ್ ಪಾರ್ಟಿಯಲ್ಲಿ ಇಂಥಾದ್ದೊಂದು ವೈರಾಗ್ಯ ಆವರಿಸಿಕೊಂಡರೆ ಅದಕ್ಕಿಂತ ದುರಂತ ಇನ್ನೇನಿದೆ ಹೇಳಿ. ಆದರೆ ಲಹರಿಗೆ ಬಂದರೆ ವಿಷ್ಣುವರ್ಧನ್ ಗೆ ಅವರೇ ಸಾಟಿ. ನಿರ್ಮಾಪಕರು, ಸಹನಟರು, ಪತ್ರಕರ್ತರು, ಹೀಗೆ ಎದುರಿಗಿದ್ದವರೆಲ್ಲಾ ಅವರ ತಮಾಷೆಗೆ ವಸ್ತುವಾಗುತ್ತಿದ್ದರು. ಮುಂದಿನ ಶುಕ್ರವಾರದ ಸಿನಿಮಾ ಪುರವಣಿಗೆ ನಮಗೆ ಅದೇ ವಸ್ತು.
ನನ್ನ ಮಟ್ಟಿಗೆ ಕನ್ನಡ ಚಿತ್ರರಂಗ ಕಂಡ ಅತ್ಯಂತ ಸುಂದರಾಂಗ ನಟನೆಂದರೆ ವಿಷ್ಣು. ಎರಡನೇ ಸ್ಥಾನ ಅನಂತನಾಗ್ ಅವರಿಗೂ, ಮೂರನೇ ಸ್ಥಾನ ಶಶಿಕುಮಾರ್ ಅವರಿಗೂ ಸಲ್ಲುತ್ತದೆ. ಶಶಿ ತಮ್ಮದೇ ಸ್ವಯಂಕೃತಾಪರಾಧದಿಂದ ತನ್ನ ಮುಖ ಕೆಡಿಸಿಕೊಂಡರು ಅನ್ನೋದು ಬೇರೆ ಮಾತು. ಆದರೆ ಅನಂತನಾಗ್ ವಯಸ್ಸಾಗುತ್ತಿದ್ದ ಹಾಗೇ ತಮ್ಮ ಪಾತ್ರಗಳ ಆಯ್ಕೆಯಲ್ಲಿ ವಹಿಸಿದ ಎಚ್ಚರವನ್ನು ವಿಷ್ಣು ವಹಿಸಲಿಲ್ಲ. ಆ ಕಾರಣಕ್ಕೇ ಲಾಲಿ, ವೀರಪ್ಪನಾಯ್ಕ, ಸುಪ್ರಭಾತದಂಥ ನಾಲ್ಕೈದು ಚಿತ್ರಗಳ ಹೊರತಾಗಿ ಅಂಥಾ ಪ್ರಬುದ್ಧ ನಟನೆ ಅವರಿಂದ ಬರಲಿಲ್ಲ ಅನ್ನುವುದು ವಿಷ್ಣುಪ್ರಿಯರ ದೂರು. ಅದಕ್ಕೆ ಕಾರಣ ಅವರ ಅಭಿಮಾನಿಗಳೋ, ನಿರ್ದೇಶಕರೋ ಅಥವಾ ಸ್ವತಃ ವಿಷ್ಣುವರ್ಧನ್ ಅವರೋ ಅನ್ನುವುದು ವಿಚಾರಸಂಕಿರಣಕ್ಕೆ ಅರ್ಹವಾದ ವಸ್ತು. ಉದಾಹರಣೆಗೆ ವಿಷ್ಣು ತಮ್ಮ ಕೊನೆಯ ದಿನಗಳಲ್ಲಿ ನಟಿಸಿದ ಒಂದು ಚಿತ್ರದ ಹೆಸರು ಬಳ್ಳಾರಿ ನಾಗ.
ರಾಜ್ ಕುಮಾರ್ ಅವರ ಹೊರತಾಗಿ ಕನ್ನಡ ಕಂಡ ಒರಿಜಿನಲ್ ನಟನೆಂದರೆ ವಿಷ್ಣುವರ್ಧನ್. ನಾಗರಹಾವು ಚಿತ್ರ ನೋಡಿದರೆ ಇದು ಸ್ಪಷ್ಟವಾಗುತ್ತದೆ. ಆಂಗ್ರಿ ಯಂಗ್ ಮ್ಯಾನ್ ಅನ್ನುವ ಪದ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದೇ ಅವರಿಂದ. ಆದರೆ ಅನಂತರದ ದಿನಗಳಲ್ಲಿ ಅವರು ಭಾವನಾತ್ಮಕ ಪಾತ್ರಗಳತ್ತ ಹೊರಳಿದರು. ಬಂಧನ ಚಿತ್ರ ಅದಕ್ಕೆ ಸಾಕ್ಷಿ. ವಿಪರ್ಯಾಸವೆಂದರೆ ಅಭಿಮಾನಿಗಳು ಅವರಿಗೆ ನೀಡಿದ್ದು ಸಾಹಸಸಿಂಹ ಎಂಬ ಬಿರುದು. ಶಂಕರ್ ನಾಗ್ ಕರಾಟೆ ಕಿಂಗ್ ಆದಷ್ಟೇ ದುರಂತವಿದು. ಅದಕ್ಕೆ ಕಾರಣ ಜೋಸೈಮನ್ ಅಥವಾ ಎಟಿ. ರಘು ಅವರಿರಬಹುದು ಅನ್ನೋದು ನನ್ನ ಗುಮಾನಿ. ಬಿರುದು ಅಂಟಿಕೊಂಡ ಬೆನ್ನಿಗೇ ವಿಷ್ಣು ಎಡಗೈಗೆ ಕಡಗ ಬಂತು. ಆಮೇಲೆ ನಾರಾಯಣ್ ಅವರಂಥ ನಿರ್ದೇಶಕರು ವಿಷ್ಣು ಅವರಿಗೆ ರೀಮೇಕು ರುಚಿ ಹತ್ತಿಸಿದರು. ಮೀಟರ್ ಲೆಕ್ಕದಲ್ಲಿ ಮೀಸೆಯನ್ನು ತಂದು ವಿಷ್ಣು ಮುಖಕ್ಕೆ ಹಚ್ಚಿದರು. ಮಾರುದ್ದ ಮೀಸೆ, ಹೆಗಲು ಚುಂಬಿಸುವ ವಿಗ್. ಅದು ಪೌರಾಣಿಕ ಪಾತ್ರವೋ, ಸಾಮಾಜಿಕ ಪಾತ್ರವೋ ಎಂದು ಗೊಂದಲಕ್ಕೊಳಗಾಗುವಂಥಾ ಗೆಟಪ್ಪಲ್ಲಿ ವಿಷ್ಣು ಶೋಭಿಸಿದರು. ಯಜಮಾನ ಚಿತ್ರ ಗೆದ್ದಿದ್ದರಿಂದ ಯಾರೂ ದೂಸ್ರಾ ಮಾತಾಡುವ ಹಾಗಿರಲಿಲ್ಲ. ಸಕ್ಸೆಸ್ ಜಸ್ಟ್ ಹ್ಯಾಪನ್ಸ್ ಅಂಡ್ ಫೇಲ್ಯೂರ್ ಅಲ್ಸೋ ಅನ್ನೋದು ಆಮೇಲೆ ರುಜುವಾತಾಯಿತು.
ವಿಷ್ಣುವರ್ಧನ್ ಅವರ ಜನಪ್ರಿಯತೆಯನ್ನು ಕಾಲಕಾಲಕ್ಕೆ ನವೀಕರಿಸುತ್ತಾ ಹೋದವರು ಮೂರು ಬಾಬುಗಳು - ಮೊದಲು ರಾಜೇಂದ್ರಸಿಂಗ್ ಬಾಬು (ಬಂಧನ), ನಂತರ ಡಿರಾ ಬಾಬು (ಹಾಲುಂಡ ತವರು) ಮತ್ತು ದಿನೇಶ್ ಬಾಬು (ಸುಪ್ರಭಾತ). ಈ ಮೂವರೂ ಬೇರೆಯೇ ರೀತಿಯಾದ ಇಮೇಜುಗಳಲ್ಲಿ ವಿಷ್ಣು ಅವರನ್ನು ಅಲಂಕರಿಸಿದರು. ಈ ಮಧ್ಯೆ ಒಂದಷ್ಟು ಕಾಲ ಸುನಿಲ್ ಕುಮಾರ್ ದೇಸಾಯಿವರನ್ನು ವಿಷ್ಣು ನೆಚ್ಚಿಕೊಂಡರು. ಆದರೆ ಪರ್ವ ಮತ್ತು ಕ್ಷಣಕ್ಷಣದಂಥ ಕೆಟ್ಟ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ದೇಸಾಯಿ ಆ ನಂಬಿಕೆಯನ್ನು ನಾಶ ಮಾಡಿದರು. ದಿನೇಶ್ ಬಾಬು ಕೂಡಾ ಕೊನೆಗೆ ಮಾಡಿದ್ದು ಅದೇ ಕೆಲಸವನ್ನೇ. ನಾನು ನಿರ್ದೇಶಕರ ನಟ, ನನ್ನನ್ನು ನಾನು ಅವರ ಕೈಗೆ ಒಪ್ಪಿಸಿಕೊಂಡು ಬಿಡುತ್ತೇನೆ. ಸರಿಯಾಗಿ ಬಳಸಿಕೊಳ್ಳುವುದು ಅವರಿಗೆ ಬಿಟ್ಟಿದ್ದು ಎಂದು ವಿಷ್ಣು ಆಗಾಗ ಹೇಳಿಕೊಳ್ಲುತ್ತಿದ್ದರು. ಬಹುಶಃ 2000ನೇ ಇಸ್ವಿಯಿಂದೀಚೆಗೆ ಸೀನಿಯರ್ ನಿರ್ದೇಶಕರು ಆ ಕೆಲಸ ಮಾಡಲಿಲ್ಲ, ಜೂನಿಯರ್ ನಿರ್ದೇಶಕರ ಮೇಲೆ ವಿಷ್ಣು ಅವರಿಗೆ ನಂಬಿಕೆ ಬರಲಿಲ್ಲ.
ಮೂವತ್ತೇಳು ವರ್ಷಗಳ ವೃತ್ತಿಬದುಕಲ್ಲಿ ವಿಷ್ಣುವರ್ಧನ್ ಕಂಡ ಏಳುಬೀಳುಗಳ ಬಗ್ಗೆ ಯಾರಾದರೂ ಗ್ರಂಥವನ್ನೇ ಬರೆಯಬಹುದು. ಅದರಲ್ಲಿ ಜನಪ್ರಿಯತೆಯಷ್ಟೇ ವಿವಾದಗಳ ಪಾಲು ಕೂಡಾ ಬಹಳ ದೊಡ್ಡದು. ಗಂಧದ ಗುಡಿ ಎಪಿಸೋಡಿನಿಂದ ಬೆನ್ನುಹತ್ತಿದ ವಿವಾದಗಳ ಶನಿ ಕೊನೆ ತನಕ ಅವರನ್ನು ಬಿಡಲಿಲ್ಲ. ನಂಬಿದ ಸ್ನೇಹಿತರು ದ್ರೋಹ ಮಾಡಿದರು. ಅವರಿಂದ ಲಾಭ ಪಡೆದುಕೊಂಡವರೇ ಅವರ ವಿರುದ್ಧ ತಿರುಗಿ ಬಿದ್ದರು. ಕೆಲವು ವರ್ಷ ವಿಷ್ಣು ಜೀವಭಯದಿಂದ ಚೆನ್ನೈನಲ್ಲೇ ವಾಸ ಮಾಡಬೇಕಾದ ಪರಿಸ್ಥಿತಿಯೂ ಬಂದಿತ್ತು. ಇದ್ಯಾವುದರೂ ಬಗ್ಗೆಯೂ ಅವರು ವಿಷ್ಣು ಮಾತಾಡಲಿಲ್ಲ, ಮೌನವಾಗಿಯೇ ಎಲ್ಲವನ್ನೂ ಸಹಿಸಿಕೊಂಡರು. ತಾನು ಏನು ಹೇಳಿದರೂ ವಿವಾದವಾಗುತ್ತದೆ ಅನ್ನುವ ಭಯ ಅವರನ್ನು ಕಾಡುತ್ತಿತ್ತು. ಆ ಮಟ್ಟಿಗೆ ಕನ್ನಡ ಕಂಡ ಆತ್ಯಂತ ನತದೃಷ್ಟ ನಟನೆಂದರೆ ಅವರೇ. ವಿನಾಕಾರಣ ವಿವಾದದಳು ಸರ್ಪಸುತ್ತಿನಂತೆ ಅವರನ್ನು ಸುತ್ತಿಕೊಳ್ಲುತ್ತಿದ್ದವು. ಅವರಿಗೆ ರಾಜಕೀಯ ಇಷ್ಟವಾಗುತ್ತಿರಲಿಲ್ಲ, ಮಲ್ಲೇಶ್ವರದಲ್ಲಿ ಅನಂತಕುಮಾರ್ ವಿರುದ್ಧ ಅವರನ್ನು ಚುನಾವಣೆಗೆ ಸ್ಪರ್ಧಿಸುವಂತೆ ಮಾಡುವುದಕ್ಕೆ ಕಾಂಗ್ರೆಸ್ ಪಕ್ಷ ಒತ್ತಾಯ ಮಾಡಿತ್ತು. ಆದರೆ ವಿಷ್ಣು ಅದನ್ನು ನಯವಾಗಿ ನಿರಾಕರಿಸಿದರು. ಅಂಬರೀಶ್ ಚುನಾವಣೆಗೆ ನಿಂತಾಗ ಪ್ರಚಾರಕ್ಕೆ ಹೋದರು. ಆದರೆ ಇದು ಅಂಬಿ ಮೇಲಿನ ಪ್ರೀತಿಯಿಂದಷ್ಟೇ ಅನ್ನುವುದನ್ನು ಖಚಿತಪಡಿಸಿದರು. ಹಾಗಿದ್ದರೂ ಕೆಲಕಾಲ ಅವರಿಬ್ಬರ ಮಧ್ಯೆಯೂ ಸಣ್ಣ ಮುನಿಸು ಹೊಗೆಯಾಡಿತ್ತು.
ವಿಷ್ಣು ಬಹಳ ಬೇಗ ಬೇರೆಯವರಿಂದ ಪ್ರಭಾವಿತರಾಗುತ್ತಿದ್ದರು. ಅವರು ರೀಮೇಕು ಚಿತ್ರಗಳನ್ನು ಸಾಲುಸಾಲಾಗಿ ಮಾಡಿದ್ದಕ್ಕೆ ಅದೇ ಕಾರಣವಿರಬಹುದು. ಅವರಿಗೆ ಕಮಲಾಹಾಸನ್ ಅಂದರೆ ಇಷ್ಟ. ಇನ್ನೊಂದೆಡೆ ಬಾಳ ಠಾಕ್ರೆಯನ್ನು ಕಂಡರೂ ಇಷ್ಟ. ಭಾರತದಂಥ ದೇಶಕ್ಕೆ ಪ್ರಜಾಪ್ರಭುತ್ವಕ್ಕಿಂತ ಮಿಲಿಟರಿ ವ್ಯವಸ್ಥೆಯೇ ಹೆಚ್ಚು ಸೂಕ್ತ ಎಂದು ಆಗಾಗ ಅನ್ನುತ್ತಿದ್ದರು. ಹಾಗನ್ನುತ್ತಿದ್ದವರು ಒಂದು ದಿನ ಇದ್ದಕ್ಕಿದ್ದ ಹಾಗೆ ಕಾಶ್ಮೀರಿ ಪೇಟಾದೊಂದಿಗೆ ಪ್ರತ್ಯಕ್ಷರಾದರು. ಅಂಬರೀಶ್ ಜೊತೆ ವಿಷ್ಣು ಕಾಶ್ಮೀರಕ್ಕೆ ಹೋಗಿದ್ದರಂತೆ ಮತ್ತು ಫರೂಖ್ ಅಬ್ದುಲ್ಲಾರನ್ನು ಭೇಟಿ ಆಗಿದ್ದರಂತೆ ಅನ್ನುವ ಸುದ್ದಿ ಕೇಳಿಬಂತು.
ಇವೆಲ್ಲವನ್ನೂ ಪಕ್ಕಕ್ಕಿಟ್ಟು ನೋಡಿದರೆ ವಿಷ್ಣುವರ್ಧನ್ ಇದ್ದ ಕಾಲಘಟ್ಟ ಕನ್ನಡ ಚಿತ್ರರಂಗದ ಪಾಲಿಗೆ ಸುವರ್ಣಯುಗ. ಮಧ್ಯಮವರ್ಗದ ಹೆಣ್ಮಕ್ಕಳಿಗೆ ರಾಜ್ ಕುಮಾರ್ ಹೊರತಾಗಿ ಇದ್ದ ಏಕೈಕ ಆಯ್ಕೆಯೆಂದರೆ ವಿಷ್ಣು. ಅದಕ್ಕೆ ಕಾರಣ ಅವರ ಚಿತ್ರಗಳ ಕತೆ ಮತ್ತು ಅವರ ಪಾತ್ರಗಳಷ್ಟೇ ಅಲ್ಲ. ಸ್ತ್ರೀ ಪಾತ್ರಗಳ ಬಗ್ಗೆ ಅವರು ತೋರುತ್ತಿದ್ದ ಗೌರವವೂ ಕಾರಣ. ಪತ್ನಿಯನ್ನೂ ಬಹುವಚನದಿಂದ ಮಾತಾಡಿಸುತ್ತಿದ್ದ ನಾಯಕನವರು. ತನ್ನ ಚಿತ್ರಗಳಲ್ಲಿ ದ್ವಂದ್ವಾರ್ಥದ ಸಂಭಾಷಣೆ ಇರಬಾರದು ಅನ್ನುವುದು ಅವರ ಮತ್ತೊಂದು ಷರತ್ತು. ಹೀಗಾಗಿಯೇ ಅವರ ಪಾತ್ರ ಮತ್ತು ವ್ಯಕ್ತಿತ್ವಕ್ಕೊಂದು ಘನತೆ ತಾನಾಗಿಯೇ ಬಂತು. ಅವರ ಧ್ವನಿಯಲ್ಲಿದ್ದ ಮಾರ್ದವತೆಯಿಂದಾಗಿ ಅದಕ್ಕೆ ಮತ್ತಷ್ಟು ತೂಕ ಒದಗಿಬಂತು. ಅವರ ಶುದ್ಧ ಕನ್ನಡದಿಂದಾಗಿ ಕನ್ನಡಿಗರು ಇವ ನಮ್ಮವ ಎಂದು ಅಭಿಮಾನದಿಂದ ಹೇಳಿಕೊಳ್ಳುವುದಕ್ಕೆ ಸಾಧ್ಯವಾಯಿತು. ಈಗ ನೋಡಿ, ವಿಷ್ಣು ಕಣ್ಮರೆಯಾದ ಮೇಲೆ ಕೌಟುಂಬಿಕ ಚಿತ್ರ ಅನ್ನುವ ಪ್ರಕಾರವೇ ಚಿತ್ರರಂಗದಿಂದ ಮರೆಯಾಗಿದೆ. ಅಂಥಾ ಸಿನಿಮಾ ಮಾಡೋರೂ, ನೋಡೋರೂ ಇಲ್ಲ, ಮಾತಾಡೋರೂ ಇಲ್ಲ.
ಚಿತ್ರರಂಗದಲ್ಲಿ ವೈಯಕ್ತಿಕವಾಗಿ ನಾನು ತುಂಬಾನೇ ಇಷ್ಟಪಟ್ಟಿದ್ದ ವ್ಯಕ್ತಿ ವಿಷ್ಣು. ನನ್ನೊಂದಿಗೆ ಅವರು ಮನೆಯ ಹಿರಿಯಣ್ಣನಂತೆ ಮಾತಾಡುತ್ತಿದ್ದರು. ಅಮ್ಮನ ಆರೋಗ್ಯದಿಂದ ಹಿಡಿದು, ಬೆಳಗಿನ ತಿಂಡಿ ತನಕ ವಿಚಾರಿಸಿಕೊಳ್ಳುತ್ತಿದ್ದರು. ಅವರು ನನ್ನನ್ನು ಚಿರಾಪುಂಜಿ ಎಂದು ಕರೆಯುತ್ತಿದ್ದರು. ಚಿರಾಪುಂಜಿಯಲ್ಲಿ ವರ್ಷಪೂರ್ತಿ ಮಳೆ ಸುರಿಯುವ ಥರಾನೇ ನಾನು ವರ್ಷಪೂರ್ತಿ ಒಂದೇ ಥರ ಇರುತ್ತೇನೆ ಅನ್ನುವುದು ಅವರಿಗೆ ಸೋಜಿಗದ ವಿಷಯವಾಗಿತ್ತು. ನಾನು, ಜೋಗಿ, ಸದಾಶಿವಶೆಣೈ ಜೊತೆಯಾಗಿ ಪತ್ರಿಕಾಗೋಷ್ಠಿಗೆ ಹಾಜರಾದಾಗ ಜಂಟಲ್ ಮನ್ ಗಳು ಬಂದರು ನೋಡಿ ಎಂದು ಪ್ರೀತಿಯಿಂದ ಕಾಲೆಳೆಯುತ್ತಿದ್ದರು. ದೊಡ್ಡ ಮನುಷ್ಯರಿಂದ ಹೊಗಳಿಸಿಕೊಳ್ಳುವುದಕ್ಕೂ ಪುಣ್ಯ ಮಾಡಿರಬೇಕು. ಆ ಪುಣ್ಯವೇ ನನ್ನನ್ನು ಕಾಪಾಡಲಿ, ಅವರ ನೆನಪುಗಳು ಹೀಗೇ ಬೆಚ್ಚಗೆ ನನ್ನ ಜೊತೆಗಿರಲಿ.
Also See
Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ
K Manju Demands Apology From GK Govindarao
Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ
Uma Column 17 - ತಂದೆ ನೀನಾಗು ಬಾ
Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ
Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!
Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್
Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ
Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?
Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ
Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು
Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?
Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..
Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!
Uma Column 6 - ಹಾಯ್ ಕನ್ನಡ ತಾಯ್!
Uma Column 5 - ನನ್ನ ಭಯ ಮತ್ತು ಅಭಯನ ಜಯ
Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು
Uma Column 3 - ಕಲ್ಲು ಕೊರಗುವ ಸಮಯ
Uma Column 2 - ಮುನಿ ಮತ್ತು MONEY
Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು
ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ
Udaya Marakini Column In Chitraloka
Pls Note -
The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.