ನಾನು ನೋಡಿದ ಮೊದಲ ಸಿನಿಮಾದ ಹೆಸರು ನೆನಪಾಗುತ್ತಿಲ್ಲ. ಬಹುಶಃ ಅದೊಂದು ಮಲೆಯಾಳ ಚಿತ್ರವೇ ಇದ್ದೀತು. ಯಾಕೆಂದರೆ ನಮ್ಮೂರು ಕೇರಳ-ಕರ್ನಾಟಕ ಗಡಿಭಾಗದಲ್ಲಿದೆ, ಸಿನಿಮಾ ನೋಡಬೇಕಾದರೆ ಊರಿಂದ ಆರು ಮೈಲಿ ದೂರದಲ್ಲಿರುವ ವಿಟ್ಲಕ್ಕೆ ಹೋಗಬೇಕು, ಅಲ್ಲಿ ‘ಕವಿತಾ’ಎಂಬಹೆಸರಿನ ಟೆಂಟು ಇತ್ತು ಮತ್ತು ಆದರಲ್ಲಿ ಹೆಚ್ಚಾಗಿ ಮಲೆಯಾಳ ಚಿತ್ರಗಳೇ ಪ್ರದರ್ಶನವಾಗುತ್ತಿದ್ದವು. ಅದರಲ್ಲೂ ದೇವರಚಿತ್ರಗಳಿಗೆ ವಿಪರೀತ ಬೇಡಿಕೆ. ವಿಟ್ಲದಿಂದ ಹತ್ತು ಮೈಲು ದೂರದಲ್ಲಿರುವ ಪುತ್ತೂರಲ್ಲಿ ‘ಅರುಣಾ’ಎಂಬ ಥಿಯೇಟರು ಇತ್ತು(ಇಂದಿಗೂ ಇದೆ). ಅದರ ಸೌಂಡ್ ಬಾಕ್ಸ್ ನ ಗುಣಮಟ್ಟ ಇಡೀ ಏಷ್ಯಾದಲ್ಲೇ ಎರಡನೇ ಸ್ಥಾನ ಪಡೆದಿದೆ ಎಂಬ ಕತೆ ಆಗ ಚಾಲ್ತಿಯಲ್ಲಿತ್ತು, ನಾವದನ್ನು ನಂಬಿದ್ದೆವು ಕೂಡಾ. ಹಾಗಿದ್ದೂ ಸಿನಿಮಾ ಶುರುವಾಗುವುದಕ್ಕೆ ಮುಂಚೆ ಪರದೆಯೇ ಹರಿದಂತೆ ಒಂದು ಭಯಾನಕ ಸದ್ದು ಯಾಕೆ ಬರುತ್ತಿತ್ತು ಅನ್ನುವುದು ಬಗೆಹರಿಯದ ಪ್ರಶ್ನೆಯೇ ಆಗಿತ್ತು. ‘ಅರುಣಾ’ಥಿಯೇಟರಲ್ಲಿ ಯಾವಾಗಲೂ ಕನ್ನಡ ಚಿತ್ರಗಳೇ ಪ್ರದರ್ಶನವಾಗುತ್ತಿದ್ದವು. ಆಗಿನ ಕಾಲದಲ್ಲಿ ಹೊಸ ಕನ್ನಡ ಚಿತ್ರವೊಂದು ಬೆಂಗಳೂರಲ್ಲಿ ಬಿಡುಗಡೆಯಾಗಿ ಐದು ವರ್ಷದ ನಂತರ ಪುತ್ತೂರಿಗೆ ಕಾಲಿಡುತ್ತಿತ್ತು. ಆದರೇನಂತೆ, ನಮ್ಮ ಪಾಲಿಗೆ ಅದು ಹೊಸಚಿತ್ರವೇ ಆಗಿತ್ತು. ಅಪ್ಪಿತಪ್ಪಿ ಸಿನಿಮಾವೊಂದು ಬಿಡುಗಡೆಯಾಗಿ ಒಂದೇ ವರ್ಷಕ್ಕೆ ಪುತ್ತೂರಿಗೆ ಬಂದರೆ ಅದು ಫ್ಲಾಫ್ ಸಿನಿಮಾ ಎಂದು ನಾವೇ ತೀರ್ಮಾನಿಸುತ್ತಿದ್ದೆವು. ರಾಜ್ ಕುಮಾರ್ ಸಿನಿಮಾ ಏನಾದರೂ ಅರುಣಾ ಥಿಯೇಟರಿಗೆ ಬಂದರೆ, ನಮ್ಮ ಮನೆಯ ಸಮಸ್ತ ಸದಸ್ಯರು ಟಿಲ್ಲರ್ ಮೇಲೆ ಕುಳಿತುಕೊಂಡು ಊರಿಂದ ಸೆಕಂಡ್ ಶೋಗೆ ಬರುತ್ತಿದ್ದೆವು.
ಅರುಣಾ ಮತ್ತು ಕವಿತಾದಲ್ಲಿ ಪ್ರದರ್ಶನವಾಗುತ್ತಿದ್ದ ಸಿನಿಮಾಗಳ ಭಾಷೆ ಮತ್ತು ಸ್ವರೂಪಗಳಲ್ಲಿ ವಿಪರೀತ ವ್ಯತ್ಯಾಸವಿದ್ದುದರಿಂದ, ಅರುಣಾ ಥಿಯೇಟರಿಗೆ ನಾವು ರಾಜಾರೋಷವಾಗಿ ಹೋಗುತ್ತಿದ್ದೆವು ಮತ್ತು ಕವಿತಾ ಟೆಂಟಲ್ಲಿ ಕದ್ದುಮುಚ್ಚಿ ಸಿನಿಮಾ ನೋಡುತ್ತಿದ್ದೆವು. ಅಲ್ಲಿ ನೆಲ, ಚಾಪೆ ಮತ್ತು ಕುರ್ಚಿ ಎಂಬ ಮೂರು ವಿಭಾಗಗಳಿದ್ದವು. ನನ್ನ ಆಯ್ಕೆ ಯಾವತ್ತೂ ನೆಲವೇ ಆಗಿತ್ತು, ಅಂಡಿನ ಕೆಳಗೆ ಬೆಚ್ಚಗೆ ಹೊರಳುವ ಮರಳು, ಸುದೈವವಶಾತ್ ಆಗ ಮರಳು ಮಾಫಿಯಾ ಇರಲಿಲ್ಲ. ನಾನು ನೆಲದಲ್ಲೇ ಕುಳಿತು ಸಿನಿಮಾ ನೋಡುವುದಕ್ಕೆ ಅದರ ಟಿಕೆಟ್ ದರ ಐವತ್ತು ಪೈಸೆಯಾಗಿದ್ದಿದ್ದು ಒಂದು ಕಾರಣವಾದರೆ, ಪರಿಚಿತರ ಕಣ್ಣಿಗೆ ಬೀಳದಂತೆ ಸಿನಿಮಾ ನೋಡಬಹುದು ಅನ್ನುವುದು ಮತ್ತೊಂದು ಕಾರಣ. ಕೆಲವು ಸುಭಗರು ತಮ್ಮ ಮನೆಯಿಂದಲೇ ಚಾಪೆ ತಂದು ನೆಲದ ಮೇಲೆ ಹಾಕಿಕೊಂಡು, ಗುರುತು ಸಿಗಬಾರದು ಅಂತ ತಲೆಗೆ ಶಾಲು ಹೊದ್ದುಕೊಂಡು ಸಿನಿಮಾ ನೋಡುತ್ತಿದ್ದುದೂ ಉಂಟು. ಆಗಿನ ಕಾಲದ ಸೆಕ್ಸ್ ಬಾಂಬ್ ಸೀಮಾ ನಟಿಸಿದ ‘ಅವಳೊಡೆ ರಾವುಗಳ್’(ಹರ್ ನೈಟ್ಸ್ ) ಚಿತ್ರವನ್ನು ನಾನು ನೋಡಿದ್ದು ಅಲ್ಲೇ. ನನ್ನ ದುರದೃಷ್ಟಕ್ಕೆ ಆವತ್ತೇ ನಮ್ಮೂರಿನ ಕಾರು ಡ್ರೈವರ್ ಅಬ್ದುಲ್ಲಾನೂ ಆವತ್ತೇ ಸಿನಿಮಾ ನೋಡೋದಕ್ಕೆ ಬಂದಿದ್ದ. ಅವನ ಕಣ್ಣಿಗೆ ನಾನು ಬಿದ್ದು “ಇಂಥಾ ಸಿನಿಮಾ ನೋಡ್ತೀಯಾ, ನಿಮ್ಮನೇಲಿ ಹೇಳ್ತೀನಿ ನೋಡು”ಅಂತ ಅವನು ಬೆದರಿಸಿದ್ದ, ನಾನು ಅವನ ಕೈಕಾಲು ಹಿಡಿಯುವುದೊಂದು ಬಾಕಿ ಇತ್ತು. ಆಮೇಲೆ ಅದೊಂದು ದಿನ ಸಿನಿಮಾ ಪ್ರದರ್ಶನವಾಗುತ್ತಿದ್ದ ಸಂದರ್ಭದಲ್ಲೇ ಕವಿತಾ ಟೆಂಟಿಗೆ ಬೆಂಕಿ ಬಿದ್ದು ಅದು ಭಸ್ಮವಾಯಿತು. ಅಯ್ಯಪ್ಪಸ್ವಾಮಿಯ ದಯೆಯಿಂದ ನಾನು ಆವತ್ತು ಅದರೊಳಗಿರಲಿಲ್ಲ.
ಇವತ್ತು ಮಲ್ಟಿಪ್ಲೆಕ್ಸಲ್ಲಿ ಆರಾಮಾಗಿ ಕಾಲು ಚಾಚಿಕೊಂಡು ಸಿನಿಮಾ ನೋಡುವಾಗಲೂ ನನಗೆ ವಿಟ್ಲದ ‘ಕವಿತಾ’ಎಂಬ ಟೆಂಟು, ಅಲ್ಲಿಯ ಮರಳು ಹಾಸಿದ ನೆಲ, ನಾಲ್ಕೇ ಅಡಿ ದೂರದಲ್ಲಿದ್ದ ಪರದೆಯಿಂದ ಮುಖಕ್ಕೆ ಡಿಕ್ಕಿ ಹೊಡೆಯುವಂತೆ ಎಗರುತ್ತಿದ್ದ ಪಾತ್ರಗಳು ಮತ್ತು ಅವುಗಳ ಅವಯವಗಳು, ಟೆಂಟಿನಾಚೆಗೆ ಹುರಿಯುತ್ತಿದ್ದ ಕಡಲೆ ಕಾಯಿ ಬೀಜದ ಪರಿಮಳ, ಅರುಣಾ ಥಿಯೇಟರಿನ ಪರದೆಯ ಎಡಬಲದಲ್ಲಿ ‘ಬೆಂಕಿ’ಎಂಬ ಬರಹವನ್ನು ಛಾಪಿಸಿಕೊಂಡು ಬೆದರಿಸುತ್ತಿದ್ದ ಮರಳು ತುಂಬಿದ ಸ್ಟೀಲಿನ ಬಕೆಟ್ಟುಗಳು, ‘ತಳ್ಳಿರಿ’ಎಂಬ ಸೂಚನೆ ಹೊತ್ತಿದ್ದ ತುರ್ತು ನಿರ್ಗಮನದ ಬಾಗಿಲುಗಳು, ಇವೆಲ್ಲವೂ ನೆನಪಾಗುತ್ತವೆ. ವ್ಯತ್ಯಾಸವೆಂದರೆ ಮಲ್ಟಿಪ್ಲೆಕ್ಸಲ್ಲಿ ವಾರಾಂತ್ಯಕ್ಕೆ ಐನೂರು ರುಪಾಯಿ ಕೊಟ್ಟು ಸಿನಿಮಾ ನೋಡಬೇಕು, ವಿಟ್ಲದ ಟೆಂಟಲ್ಲಿ ಕೇವಲ ಐವತ್ತು ಪೈಸೆಗೆ ಒಂದು ಸಿನಿಮಾನೋಡಬಹುದಾಗಿತ್ತು. ಆಗ ಸೀಮಾ, ಈಗ ದೀಪಿಕಾ. ತುಲನಾತ್ಮಕವಾಗಿ ಅಧ್ಯಯನ ಮಾಡಿದರೆ ದೀಪಿಕಾಗಿಂತ ಸೀಮಾ ಒಳ್ಳೆಯ ನಟಿ ಮತ್ತು ಮಾದಕನಟಿ ಕೂಡಾ.
ಪ್ರಶ್ನೆಯಿರುವುದು ಒಂದು ಸಿನಿಮಾವನ್ನು ಐನೂರು ರುಪಾಯಿ ಕೊಟ್ಟು ನೋಡಬೇಕಾದ ಸಂಕಷ್ಟ ನಮಗೆ ಯಾಕೆ ಬಂತು ಅನ್ನುವುದರಲ್ಲಿ. ಜಗತ್ತಲ್ಲಿರುವ ಅತ್ಯಂತ ಅಗ್ಗದ ರಂಜನೆಯೆಂದರೆ ಸಿನಿಮಾ ಅನ್ನುವ ಮಾತಿದೆ. ಆದರೆ ಅದನ್ನು ಸುಳ್ಳು ಮಾಡುವುದಕ್ಕೆ ಹೊರಟಿವೆ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಥಿಯೇಟರುಗಳು. ಈ ಬಗ್ಗೆ ಆನ್ ಲೈನಲ್ಲಿ ಈಗಾಗಲೇ ಒಂದು ಚಳವಳಿ ಶುರುವಾಗಿದೆ. ಮಲ್ಟಿಪ್ಲೆಕ್ಸು ಥಿಯೇಟರುಗಳು ವಿಧಿಸುತ್ತಿರುವ ದುಬಾರಿ ದರವನ್ನು ಕಡಿಮೆ ಮಾಡಿಸುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಇಂಟರ್ ನೆಟ್ ಮೂಲಕ ಬೇಡಿಕೆ ಸಲ್ಲಿಸಲಾಗಿದೆ. ಅನಾದಿಕಾಲದಿಂದಲೂ ಚಿತ್ರಮಂದಿರಗಳ ಮಾಲಿಕರು ನಿರ್ಮಾಪಕರನ್ನು ಮತ್ತು ಪ್ರೇಕ್ಷಕರನ್ನು ಹೇಗೆ ಶೋಷಿಸುತ್ತಾ ಬಂದಿದ್ದಾರೆ ಅನ್ನುವುದಕ್ಕೆ ನಿಮಗೊಂದು ಒಂದು ಹಳೇ ಕತೆ ಹೇಳುತ್ತೇನೆ.
ಸರಿಸುಮಾರು ಇಪ್ಪತ್ತು ವರ್ಷಗಳ ಹಿಂದೆ ಫಿಲಂ ಚೇಂಬರಲ್ಲಿ ಒಂದು ವಿಶಿಷ್ಟ ಸಂವಾದ ಕಾರ್ಯಕ್ರಮ ಏರ್ಪಾಡಾಗಿತ್ತು. ಅಲ್ಲಿ ಕನ್ನಡ ಚಿತ್ರರಂಗದ ಮೂರು ಕಂಬಗಳಾದ ನಿರ್ಮಾಪಕರು, ಹಂಚಿಕೆದಾರರು ಮತ್ತು ಪ್ರದರ್ಶಕರು ಒಟ್ಟುಸೇರಿದ್ದರು. ನಾಲ್ಕನೇ ಕಂಬವೆನ್ನಲಾದ ಪತ್ರಕರ್ತರಿಗೂ ಪ್ರವೇಶವಿತ್ತು. ನಿತ್ಯಶತ್ರುಗಳಾದ ನಿರ್ಮಾಪಕರು ಮತ್ತು ಪ್ರದರ್ಶಕರ ನಡುವೆ ಎಂದಿನಂತೆ ಮಾತಿನ ಚಕಮಕಿ ನಡೆಯಿತು. ನಿರ್ಮಾಪಕರೊಬ್ಬರು ಬೆಂಗಳೂರಲ್ಲಿರುವ ಚಿತ್ರಮಂದಿರಗಳ ದುಸ್ಥಿತಿಯನ್ನು ವರ್ಣಿಸುತ್ತಾ ‘ಅಲ್ಲಿ ಫ್ಯಾನುಗಳು ತಿರುಗುವುದಿಲ್ಲ, ಟಾಯ್ಲೆಟ್ಟೊಳಗೆ ನರಮಾನವರು ಕಣ್ಣಮೂಗು ಮುಚ್ಚದೇ ಕಾಲಿಡುವಂತಿಲ್ಲ, ಅದಕ್ಕಿಂತ ಹೆಚ್ಚಾಗಿ ಸಿನಿಮಾ ನೋಡುವ ಹೊತ್ತಿಗೆ ಇಲಿಗಳ ಕಾಟ ಸಹಿಸಲಸಾಧ್ಯ. ಇಲಿಗಳು, ಚಪ್ಪಲಿ ಮತ್ತು ಪಾದಗಳ ನಡುವೆ ಯಾವ ತಾರತಮ್ಯವನ್ನೂ ತೋರದೇ ಕಚ್ಚುತ್ತವೆ’ ಎಂದರು. ಈ ಆರೋಪಕ್ಕೆ ಪ್ರತಿಯಾಗಿ ಥಿಯೇಟರ್ ಮಾಲಿಕರು, ತಮ್ಮ ಥಿಯೇಟರಲ್ಲಿರುವ ಸಾಕುಇಲಿಗಳನ್ನು ಸಮರ್ಥಿಸಿಕೊಳ್ಳುತ್ತಾ ಇವೆಲ್ಲದಕ್ಕೂ ಕನ್ನಡ ಪ್ರೇಕ್ಷಕನೇ ಕಾರಣ ಅಂದರು. ಪ್ರೇಕ್ಷಕರು ಕಾನೂನು ಬಾಹಿರವಾಗಿ ತಿಂಡಿಗಳನ್ನು ಥಿಯೇಟರು ಒಳಗೆ ಕುಳಿತು ಸೇವಿಸುವುದರಿಂದ ಸಹಜವಾಗಿಯೇ ಇಲಿಗಳು ಆಕರ್ಷಿತವಾಗುತ್ತವೆ ಎಂದರು. ಪ್ರೇಕ್ಷಕನಿಗೆ ಸಿನಿಮಾ ಎಷ್ಟು ಮುಖ್ಯವೋ, ಬಡಪಾಯಿ ಇಲಿಗಳಿಗೆ ಆಹಾರವೂ ಅಷ್ಟೇ ಮುಖ್ಯ ಅನ್ನುವಂತಿತ್ತು ಅವರ ವಾದದ ವರಸೆ. ನಿರ್ಮಾಪಕರು ಸುಮ್ಮನಿರಲಿಲ್ಲ. ಅವರೊಂದು ಕ್ರಾಸ್ ಕೊಶ್ಚನ್ ಹಾಕಿದರು. “ಸ್ವಾಮೀ, ಇಲಿಗಳು ಕೆಳಗೆ ಬಿದ್ದ ತಿಂಡಿಯನ್ನು ತಿನ್ನಬಹುದು, ಪ್ರೇಕ್ಷಕರ ಕೈಯಿಂದ ಕಿತ್ತುಕೊಂಡು ಆಹಾರ ತಿನ್ನುವುದಕ್ಕಾಗುವುದಿಲ್ಲವಲ್ಲ.. ಪ್ರೇಕ್ಷಕ ತಿಂಡಿಯನ್ನು ಯಾಕೆ ಕೆಳಗೆ ಎಸೆಯುತ್ತಾನೆ ಅಂದರೆ ಅದು ತಿನ್ನುವುದಕ್ಕೆ ಯೋಗ್ಯವಾಗಿರುವುದಿಲ್ಲ. ಥಿಯೇಟರಲ್ಲಿ ಕ್ಯಾಂಟೀನ್ ನಡೆಸುವವರು ನೀವೇ ತಾನೆ?” ಎಂಬಲ್ಲಿಗೆ ಚರ್ಚೆ ಅನ್ನುವುದು ಒಂದು ಹಾಸ್ಯಪ್ರಹಸನವಾಗಿ ರೂಪಾಂತರಗೊಂಡು ಸಭಿಕರಲೆಲ್ಲರೂ ನಗೆಗಡಲಲ್ಲಿ ತೇಲಾಡಿದರು.
ಕನ್ನಡ ಚಿತ್ರರಂಗದ ಜನನದೊಂದಿಗೇ ಥಿಯೇಟರು ಸಮಸ್ಯೆಯೂ ಜನಿಸಿರುವ ಸಾಧ್ಯತೆಗಳಿವೆ. ಯಾಕೆಂದರೆ ನಿರ್ಮಾಪಕರು ಕರೆಯುವ ಯಾವುದೇ ಪತ್ರಿಕಾಗೋಷ್ಠಿಗಳೂ ಚಿತ್ರಮಂದಿರಗಳನ್ನು ದೂಷಿಸದೇ ಮುಗಿಯುತ್ತಿರಲಿಲ್ಲ. ಜಾಸ್ತಿ ಬಾಡಿಗೆ ಕೇಳುತ್ತಾರೆ, ಹೇಳದೇಕೇಳದೇ ಚಿತ್ರವನ್ನು ಎತ್ತಂಗಡಿ ಮಾಡುತ್ತಾರೆ, ಪರಭಾಷಾ ಚಿತ್ರಗಳಿಗೋಸ್ಕರ ಕನ್ನಡ ಚಿತ್ರಗಳ ಕತ್ತು ಹಿಚುಕುತ್ತಾರೆ, ಮಧ್ಯಂತರಕ್ಕೆ ಐದು ನಿಮಿಷ ಮುಂಚೆ ಮತ್ತು ಸಿನಿಮಾ ಮುಕ್ತಾಯವಾಗುವುದಕ್ಕೆ ಹತ್ತು ನಿಮಿಷ ಮುಂಚೆ ಫ್ಯಾನ್ ಆಫ್ ಮಾಡುತ್ತಾರೆ, ಸೀಟುಗಳೆಲ್ಲವೂ ಕಿತ್ತುಹೋಗಿ ಉಬ್ಬುಹಲ್ಲಿನಂತೆ ಹೊರಚಾಚಿದ ಮೊಳೆಗಳು ಪ್ರೇಕ್ಷಕರ ಪ್ಯಾಂಟುಗಳಿಗೆ ಕನ್ನ ಕೊರೆಯುತ್ತಿವೆ, ಸೌಂಡ್ ಸಿಸ್ಟಂ ಓಬಿರಾಯನ ಕಾಲದ್ದು.... ಹೀಗೆ ನಿರ್ಮಾಪಕರು ತಮ್ಮ ಸಮಸ್ಯೆಗಳ ಜೊತೆ ಪ್ರೇಕ್ಷಕರ ದೂರುಗಳನ್ನೂ ಬೆರೆಸುತ್ತಾ, ಕನ್ನಡ ಚಿತ್ರಗಳ ಒಟ್ಟಾರೆ ಅವನತಿಗೆ ಚಿತ್ರಮಂದಿರಗಳ ಮಾಲೀಕರೇ ಕಾರಣ ಅನ್ನುವ ಅಭಿಪ್ರಾಯ ಮಂಡಿಸುತ್ತಿದ್ದರು.
ಈಗ ಕಾಲ ಬದಲಾಗಿದೆ. ಕಳೆದ ಕೆಲವು ವರ್ಷದಿಂದ ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರುಗಳ ದರ್ಬಾರು ನಡೆಯುತ್ತಿದೆ. ಏಕಪರದೆ ಚಿತ್ರಮಂದಿರಗಳು ಒಂದೊಂದಾಗಿ ಮುಚ್ಚುತ್ತಿವೆ. ಈ ಪೈಕಿ ಕೆಲವು ಕಲ್ಯಾಣ ಮಂದಿರಗಳಾಗಿ ಪರಿವರ್ತನೆಗೊಂಡಿದ್ದರೆ, ಇನ್ನು ಕೆಲವು ಮಲ್ಟಿಪ್ಲೆಕ್ಸುಗಳಾಗುತ್ತಿವೆ. ಮಲ್ಟಿಪ್ಲೆಕ್ಸುಗಳಲ್ಲಿ ಇಲಿಗಳ ಕಾಟ ಇರುವುದಿಲ್ಲ, ಬದಲಾಗಿ ಹೆಗ್ಗಣಗಳಿರುತ್ತವೆ. ಅವುಗಳು ಒಂದು ಪಾಪ್ ಕಾರ್ನಿಗೆ ಐವತ್ತು ರುಪಾಯಿ ವಸೂಲು ಮಾಡುತ್ತವೆ, ಒಂದು ಕೋಕ್ ಬಾಟಲಿಗೆ ನೂರು ರುಪಾಯಿ ಸುಲಿಯುತ್ತವೆ. ಮಲ್ಟಿಪ್ಲೆಕ್ಸು ಸಿನಿಮಾ ಅಂದರೆ ಶ್ರೀಮಂತರಿಗೆ ಮಾತ್ರ ಅನ್ನುವಂತಾಗಿದೆ. ಎಲ್ಲಾ ಮಲ್ಟಿಪ್ಲೆಕ್ಸುಗಳಲ್ಲಿ ಏಕರೂಪದ ದರ ಇರುವುದಿಲ್ಲ, ವಾರದ ದಿನಗಳಲ್ಲಿ 150ರಿಂದ 250 ರ ತನಕ ಟಿಕೆಟ್ ಬೆಲೆಯಿದ್ದರೆ, ವಾರಾಂತ್ಯಕ್ಕೆ ಅದು 350ರಿಂದ 500ರ ತನಕ ಏರುವುದುಂಟು. ಈಗ ಆನ್ ಲೈನ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಮೈಸೂರಿನ ವಿವೇಕ್ ಪ್ರಕಾಶ್ ಅವರು ಚೆನ್ನೈನಲ್ಲಿ ಕೆಲವು ತಿಂಗಳು ಇದ್ದು ಬಂದವರು. ಚೆನ್ನೈನ ಮಲ್ಟಿಪ್ಲೆಕ್ಸ್ ಥಿಯೇಟರಲ್ಲಿ ಸಿನಿಮಾ ನೋಡುವುದೇ ಒಂದು ಆಹ್ಲಾದಕರ ಅನುಭವ ಎಂದು ಅವರು ಬರೆಯುತ್ತಾರೆ. ಅದಕ್ಕಿಂತ ಮುಖ್ಯವಾಗಿ ಅಲ್ಲಿನ ಟಿಕೆಟ್ ದರ ಕೇವಲ 100ರಿಂದ 120 ರುಪಾಯಿ. ವಾರಾಂತ್ಯಕ್ಕೂ ಅದು ಬದಲಾಗುವುದಿಲ್ಲ. ಆದರೆ ಬೆಂಗಳೂರಲ್ಲಿ ಮಲ್ಟಿಪ್ಲೆಕ್ಸ್ ಯಾಕೆ ಇಷ್ಟೊಂದು ದುಬಾರಿ? ನಾನೂರು ರುಪಾಯಿಗೆ ನನ್ನಮ್ಮ ಹತ್ತು ಕೇಜಿ ಅಕ್ಕಿ ತರುತ್ತಾಳೆ, ಆ ದುಡ್ಡನ್ನು ಸಿನಿಮಾಗೆ ಯಾಕೆ ವೇಸ್ಟ್ ಮಾಡಬೇಕು?ಹಾಗಂತ ಅವರು ಕೇಳುತ್ತಾರೆ. ವಿವೇಕ್ ಪ್ರಕಾಶರ ಮನವಿಗೆ ನೀವೂ ಸಹಿ ಹಾಕಬಹುದು, ಹಾಕಬೇಕು ಕೂಡಾ.
ಈಗ ಮನರಂಜನಾ ತೆರಿಗೆ ವಿಚಾರಕ್ಕೆ ಬರೋಣ. ತಮಿಳ್ನಾಡಲ್ಲಿ ಅದು 15 ಪರ್ಸೆಂಟಿದ್ದರೆ, ಕರ್ನಾಟಕದಲ್ಲಿ 30 ಪರ್ಸೆಂಟಿದೆ. ಮಹಾರಾಷ್ಟ್ರದಲ್ಲಿ 45 ಮತ್ತು ಆಂಧ್ರದಲ್ಲಿ 20 ಪರ್ಸೆಂಟಿದೆ. ಹಾಗಾಗಿ ಬೆಂಗಳೂರಿನ ಮಲ್ಟಿಪ್ಲೆಕ್ಸು ಮಾಲಿಕರು ತಮ್ಮ ದುಬಾರಿ ಟಿಕೆಟ್ ಬೆಲೆಗೆ ಸರ್ಕಾರವನ್ನು ಧೂಷಿಸುವ ಸಾಧ್ಯತೆಯಿದೆ. ಆದರೆ ಬೆಲೆಯೇರಿಸುವಾಗ ಅವರು ಸರ್ಕಾರದ ಅನುಮತಿ ಪಡೆಯುತ್ತಾರೆಯೇ ಅನ್ನುವುದು ಪ್ರಶ್ನೆ, ಸರ್ಕಾರಕ್ಕೆ ಈ ಥಿಯೇಟರುಗಳ ಮೇಲೆ ನಿಯಂತ್ರಣವೇ ಇಲ್ಲ ಅನ್ನುವುದು ಇನ್ನೊಂದು ಗಮನಾರ್ಹ ಸಂಗತಿ. ಆಂಧ್ರದಲ್ಲಿ ಪ್ರಸಾದ್ ಕಂಪನಿಯವರು ಕೋಟಿಗಟ್ಟಲೆ ಖರ್ಚು ಮಾಡಿ ಐಮಾಕ್ಸ್ ತಂತ್ರಜ್ಞಾನವನ್ನು ಒಳಗೊಂಡಿರುವ ಥಿಯೇಟರನ್ನು ಸ್ಥಾಪಿಸಿದಾಗ, ಅಲ್ಲಿ ಟಿಕೆಟ್ ಬೆಲೆಯನ್ನು ಐವತ್ತು ರುಪಾಯಿ ಹೆಚ್ಚು ಮಾಡುವುದಕ್ಕೆ ಸರ್ಕಾರದ ಅನುಮತಿ ಕೇಳಿದ್ದರು. ನಮ್ಮಲ್ಲಿ ಯಾಕೆ ಮಲ್ಟಿಪ್ಲೆಕ್ಸುಗಳು ತಮ್ಮಿಷ್ಟಕ್ಕೆ ಬಂದ ಹಾಗೆ ಮೆರೆಯುತ್ತಿವೆ?
ಮಲ್ಟಿಪ್ಲೆಕ್ಸು ಮಾಲಿಕರ ಹುನ್ನಾರವೇನು ಅನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಅವರಿಗೆ ಜಾಸ್ತಿ ಪ್ರೇಕ್ಷಕರು ಬರಲಿ ಅನ್ನುವ ಆಸೆಯಿಲ್ಲ. ಕಡಿಮೆ ಪ್ರೇಕ್ಷಕರೇ ಸಾಕು, ಆದರೆ ಅವರಿಂದ ಜಾಸ್ತಿ ದುಡ್ಡು ಸುಲಿಯೋಣ. ಹಾಗಾದಾಗಲೇ ಜಾಸ್ತಿ ಲಾಭ ಮಾಡುವುದಕ್ಕೆ ಸಾಧ್ಯ. ಈ ಸರಳ ಲೆಕ್ಕಾಚಾರದಲ್ಲಿ ಅವರು ಬಿಸಿನೆಸ್ ಮಾಡುತ್ತಿದ್ದಾರೆ. ಅವರ ಲೆಕ್ಕಾಚಾರಕ್ಕೆ ಒಬ್ಬ ಬಡವನ ಸಿನಿಮಾ ಪ್ರೀತಿ ಬಲಿಯಾಗುತ್ತಿದೆ. ಒಂದು ಒಳ್ಳೆಯ ವಾತಾವರಣದಲ್ಲಿ, ಗುಣಮಟ್ಟದ ತಂತ್ರಜ್ಞಾನವನ್ನು ಒಳಗೊಂಡಿರುವ ವ್ಯವಸ್ಥೆಯಲ್ಲಿ, ಅದ್ಭುತ ಸೌಂಡ್ ಸಿಸ್ಟಂ, ದೃಶ್ಯಶ್ರೀಮಂತಿಕೆ, ಬೃಹತ್ ಪರದೆಯಲ್ಲಿ ಸಿನಿಮಾ ನೋಡುವ ಸುಖದಿಂದ ಅವನು ವಂಚಿತನಾಗುತ್ತಿದ್ದಾನೆ. ತಲತಲಾಂತರಿಂದ ಭಾರತೀಯ ಸಿನಿಮಾಗಳನ್ನು ಕಾಪಾಡಿಕೊಂಡು ಬಂದವರು ಮಧ್ಯಮವರ್ಗದವರು ಮತ್ತು ಬಡವರೇ. ಈಗ ಅವರನ್ನೇ ಪಕ್ಕಕ್ಕೆ ತಳ್ಳುವ ಮಲ್ಟಿಪ್ಲೆಕ್ಸುಗಳ ಅಟ್ಟಹಾಸಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕಾಗಿದೆ. ಅನ್ನಭಾಗ್ಯ, ಶಾದಿಭಾಗ್ಯ ಮೊದಲಾದ ಜನಪ್ರಿಯ ಯೋಜನೆಗಳಿಂದಲೇ ಫೇಮಸ್ ಆಗಿರುವ ಸಿದ್ದರಾಮಯ್ಯನವರಿಗೆ ಇದೇನೂ ಕಷ್ಟಸಾಧ್ಯ ಅಲ್ಲ. ಸಿನಿಮಾ ಭಾಗ್ಯ ಎಂಬ ಇನ್ನೊಂದು ಯೋಜನೆ ಪ್ರಕಟಿಸಿ, ಮಲ್ಟಿಪ್ಲೆಕ್ಸಿನ ಮೊದಲ ಮೂರು ಸಾಲುಗಳಿಗೆ ಮೂವತ್ತು ರುಪಾಯಿ ಟಿಕೆಟ್ ದರ ನಿಗದಿ ಪಡಿಸಲಿ ಅನ್ನುವುದು ನನ್ನಂಥವರ ಕೋರಿಕೆ.
ಸಿದ್ದರಾಮಯ್ಯನವರು ನಂಬಿಕೊಂಡು ಬಂದ ಸಮಾಜವಾದ ಈ ರೀತಿಯಲ್ಲಾದರೂ ಜಾರಿಗೆ ಬರಲಿ.
Also See
Sign Online Petitation - Click
Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?
Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ
Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು
Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?
Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..
Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!
Uma Column 6 - ಹಾಯ್ ಕನ್ನಡ ತಾಯ್!
Uma Column 5 - ನನ್ನ ಭಯ ಮತ್ತು ಅಭಯನ ಜಯ
Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು
Uma Column 3 - ಕಲ್ಲು ಕೊರಗುವ ಸಮಯ
Uma Column 2 - ಮುನಿ ಮತ್ತು MONEY
Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು
ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ
Udaya Marakini Column In Chitraloka
Pls Note -
The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.