ಪ್ರಿಯ ವೀರೇಶ್, ನಿಮ್ಮ ಚಿತ್ರಲೋಕದಲ್ಲಿ ಪ್ರಕಟವಾದ ಉದಯ ಮರಕಿಣಿ ಅಂಕಣ ನೋಡಿ ಖುಷಿಯಾಯಿತು. ಅವರ ಬರಹಗಳನ್ನು ಓದದೇ ವರುಷಗಳೇ ಕಳೆದವು. ನಾನು ಸಿನಿಮಾ ಪತ್ರಿಕೋದ್ಯಮಕ್ಕೆ ಕಾಲಿಡುವ ಮುಂಚೆ ಸಿನಿಮಾ ಸಂಬಂಧಿಸಿದ ಬರಹಗಳನ್ನು ಅಷ್ಟಾಗಿ ಓದುತ್ತಿರಲಿಲ್ಲ, ನಮ್ಮೂರಲ್ಲಿ ಕನ್ನಡ ಪ್ರಭ ಕೂಡ ಬರುತ್ತಿರಲಿಲ್ಲ. ನಮಗೆ ಲಂಕೇಶ್ ಪತ್ರಿಕೆಯೇ ಸಿನಿಮಾ ಜಗತ್ತಿಗೆ ಕಿಂಡಿಯಾಗಿತ್ತು.
ಬೆಂಗಳೂರಿಗೆ ಬಂದು ವೈಯನ್ಕೆ ಸ್ನೇಹವಾದ ನಂತರ ನಾನು ಓದಿದ್ದು ಉದಯ ಮರಕಿಣಿ ಸಿನಿಮಾ ಕುರಿತು ಬರೆಯುತ್ತಿದ್ದ ವಿಮರ್ಶೆ ಮತ್ತು ಅವರು ಬರೆಯುತ್ತಿದ್ದ ಪತ್ರಿಕಾಗೋಷ್ಠಿಗಳ ವರದಿಗಳನ್ನು. ನನ್ನ ಸಿನಿಮಾ ವಿಮರ್ಶೆಗಳನ್ನು ರೂಪಿಸಿದ್ದು ಕೂಡ ಅವರ ಬರಹಗಳೇ ಅನ್ನಬೇಕು. ಹೀಗಾಗಿ ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು.
ಅವರ ಪೆನ್ನಿಗೊಂದು ಶಕ್ತಿಯಿದೆ. ಒಬ್ಬ ನಟನ, ನಿರ್ದೇಶಕನ ಸತ್ವವನ್ನು ಗ್ರಹಿಸುವ ಶಕ್ತಿ ಅವರಲ್ಲಿತ್ತು. ಹಾಗೇ ಒಂದು ಸಿನಿಮಾದ ಶಕ್ತಿಯನ್ನು ಕೂಡ. ಉಪೇಂದ್ರರ ಎ ಬಿಡುಗಡೆ ಆಗುತ್ತಿದ್ದಂತೆ ಮೊದಲ ಪ್ರದರ್ಶನ ನೋಡಿದವರೆಲ್ಲ ಅದೊಂದು ತಿಕ್ಕಲು ಸಿನಿಮಾ ಎಂಬ ತೀರ್ಮಾನಕ್ಕೆ ಬಂದಿದ್ದರು. ಉದಯ ಮರಕಿಣಿ ಎ ಸ್ಟಾರ್ ಈಸ್ ಬಾರ್ನ್ ಎಂಬ ಲೇಖನ ಬರೆದು ಉಪೇಂದ್ರ ಹೇಗೆ ಮುಖ್ಯ ಅಂತ ವಿವರಿಸಿದ್ದರು. ರಮೇಶ್ ಅರವಿಂದ್ ಮೂರೋ ನಾಲ್ಕೋ ಸಿನಿಮಾಗಳಲ್ಲಿ ನಾಯಕಿಯನ್ನು ತ್ಯಾಗ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಾಗ ಅವರಿಗೆ ತ್ಯಾಗರಾಜ್ ಅಂತ ಬಿರುದು ಕೊಟ್ಟವರು ಇದೇ ಉದಯ್. ಶಾಮ್ ಸುಂದರ್, ಉದಯ್ ಮತ್ತು ಸೀತಾರಾಮ್-ಎಂಬ ಮೂವರು ಕನ್ನಡ ಪ್ರಭದ ಸಿನಿಮಾ ಪುರವಣಿಯನ್ನು ಸಾಂಸ್ಕೃತಿಕ ಪುರವಣಿಯ ಮಟ್ಟಕ್ಕೆ ಕೊಂಡೊಯ್ದವರು.
ತುಂಬ ನಿಷ್ಠುರವಾಗಿಯೂ ಬರೆಯುತ್ತಿದ್ದವರು ಉದಯ್. ಹಾಗಿದ್ದರೂ ಅವರ ಕೈಲೊಂದು ಲೇಖನ ಬರೆಸಿಕೊಳ್ಳಬೇಕೆಂದು ಹಿರಿಯ ನಟರೂ ನಿರ್ದೇಶಕರೂ ತುಡಿಯುತ್ತಿದ್ದರು. ಅವರೇ ವಿಮರ್ಶೆ ಬರೆಯಬೇಕೆಂದು ಕಾಯುತ್ತಿದ್ದರು. ಪ್ರತಿಭಾವನಂತನಾದ ಹಿರಿಯ ಅಣ್ಣ, ದುಡುಕು ತಮ್ಮನಿಗೆ ಬುದ್ಧಿ ಹೇಳುವಂತೆ, ನಟ ತನ್ನನ್ನು ತಾನೇ ಪ್ರಶ್ನಿಸಿಕೊಂಡಂತೆ, ಕನ್ನಡಿ ನೋಡಿಕೊಂಡು ಓರೆಕೋರೆಗಳನ್ನು ತಿದ್ದಿಕೊಳ್ಳುವಂತೆ, ತನ್ನ ಚೆಲುವಿಗೆ ತಾನೇ ಬೆರಗಾಗುವಂತೆ- ಬರೆಯುತ್ತಿದ್ದ ಉದಯ್ ಮತ್ತೆ ಬರೆಯಲು ಶುರು ಮಾಡಿದ್ದು ನನ್ನಂಥವರಿಗೆ ಸಂತೋಷ.
ಅವರ ಬರಹದ ಅಭಿಮಾನಿಗಳಿನ್ನೂ ಇದ್ದಾರೆ. ಚಿತ್ರರಂಗ ಬದಲಾಗಿದೆ. ಈ ಕಾಲದ ನಟರಿಗೋ ನಟಿಯರಿಗೋ ನಿರ್ದೇಶಕರಿಗೋ ವಿಮರ್ಶೆ ಬೇಕಾಗಿಲ್ಲ. ಹೊಗಳುಭಟರ ನಡುವೆ ತಮ್ಮ ಪ್ರತಿಬಿಂಬದ ಎದುರು ಕುಳಿತು ನಾರ್ಸಿಸಿಸಮ್ಮಿನ ಅತಿರೇಕದಲ್ಲಿರುವವರ ಕುರಿತು ಬರೆದೂ ಉಪಯೋಗವಿಲ್ಲ.
ಥ್ಯಾಂಕ್ಸ್ ಉದಯ್. ಕೀಪ್ ರೈಟಿಂಗ್.
- ಜೋಗಿ
Also Read