ತೋತಾಪುರಿ ನೋಡಿದವರಿಗೆ ಇದು ಹಾಂಂಂಗ್ ಇರುತ್ತಾ ಅಂದ್ಕೊಂಡ್ರೆ, ಹಾಂಗಿಲ್ಲ ಅನ್ನೋ ಮೆಸೇಜ್ ಕೊಟ್ಟಿದೆ ತೋತಾಪುರಿ 2. ಎಂದಿನಂತೆ ಚೇಷ್ಟೆಗಳಿವೆಯಾದರೂ, ಅದನ್ನೂ ಮೀರಿ ಕಾಡುವುದು ಪ್ರೀತಿ. ಧರ್ಮ-ಧರ್ಮಗಳ ನಡುವೆ, ಜಾತಿ-ಜಾತಿಗಳ ಮಧ್ಯೆ ಹುಟ್ಟುವ ಪ್ರೀತಿಯ ಕಥೆ.
‘ತೋತಾಪುರಿ’ ಚಿತ್ರದಲ್ಲಿ ಈರೇಗೌಡ (ಜಗ್ಗೇಶ್) ಕೃಷಿಕ ಹಾಗೂ ಟೈಲರ್. ಆತನಿಗೆ ಶಕೀಲಾ (ಅದಿತಿ ಪ್ರಭುದೇವ) ಬಾನು ಮೇಲೆ ಪ್ರೀತಿ ಹುಟ್ಟುತ್ತದೆ. ಈ ಚಿತ್ರದ ಕೊನೆಯಲ್ಲಿ ಧನಂಜಯ್ ಕಾಣಿಸಿಕೊಂಡಿದ್ದರು. ಎರಡನೇ ಭಾಗದಲ್ಲಿ ಕಥೆ ಮುಂದುವರಿದಿದೆ. ಜಗ್ಗೇಶ್-ಅದಿತಿ ಪ್ರಭುದೇವ ರೀತಿಯೇ ಸುಮನ್ ರಂಗನಾಥ್-ಧನಂಜಯ್ ಅವರ ಪ್ರೇಮ ಕಥೆಯೂ ಸೀಕ್ವೆಲ್ನಲ್ಲಿ ಹೈಲೈಟ್ ಆಗಲಿದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ.
ಟ್ರೇಲರ್ ನೋಡಿದವರಿಗೆ ಅಚ್ಚರಿ ಹುಟ್ಟಿಸುವುದು ಸುಮನ್ ರಂಗನಾಥ್. ಇದ್ದಕ್ಕಿದ್ದಂತೆ ಹದಿಹರೆಯದವರಂತೆ ಕಾಣುತ್ತಿರೋ ಸುಮನ್ ರಂಗನಾಥ್ ಚಿಕ್ಕೋರಾಗಿದ್ದು ಯಾವಾಗ ಅನ್ನೋ ಕುತೂಹಲ ಹುಟ್ಟುತ್ತದೆ. ಧನಂಜಯ್ ಅವರಿಗಷ್ಟೆ ಅಲ್ಲ, ಎಲ್ಲರಿಗೂ ಪ್ರೀತಿ ಹುಟ್ಟುವಂತೆ ಕಾಣುತ್ತಾರೆ ಸುಮನ್. ಜಗ್ಗೇಶ್ ಮತ್ತು ಆದಿತಿ ಮಧ್ಯೆ ಡೈರೆಕ್ಟ್ ಮೀನಿಂಗ್ ಡೈಲಾಗುಗಳಿವೆ. ಕೆಎ ಸುರೇಶ್ ನಿರ್ಮಾಣದ ಚಿತ್ರಕ್ಕೆ ವಿಜಯ್ ಪ್ರಸಾದ್ ನಿರ್ದೇಶನ ಇದೆ.