ಧ್ರುವ ಸರ್ಜಾ ಅವರ ಮನೆಗೀಗ ಮುದ್ದು ಮಗನೂ ಬಂದಿದ್ದಾನೆ. ದೊಡ್ಡವಳು ಮಗಳು. ಅವಳಗೀಗ ಪುಟ್ಟ ತಮ್ಮ. ಧ್ರುವ ಸರ್ಜಾ ಮನೆಯಲ್ಲೀಗ ಸಂಭ್ರಮ ಮನೆ ಮಾಡಿದೆ.
ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯ. ಎರಡನೇ ಮಗು ಆಗಿದೆ. ಲೆಕ್ಕದ ಪ್ರಕಾರ ನನಗೆ ಇದು ಮೂರನೇ ಮಗು. ರಾಯನ್ ನನ್ನ ಮೊದಲ ಮಗ. ಆ ಬಳಿಕ ಹೆಣ್ಣು ಮಗು ಹುಟ್ಟಿತು. ಅವಳಿಗೆ ಇನ್ನೂ ಹೆಸರು ಇಟ್ಟಿಲ್ಲ. ಈಗ ಮತ್ತೊಂದು ಮಗು ಆಗಿದೆ. ಮನೆಯಲ್ಲಿ ಈಗ ಮೂರು ಮಕ್ಕಳಿದ್ದಾರೆ. ಸದ್ಯ ಪ್ರೇರಣಾ, ಮಗ ಆರೋಗ್ಯವಾಗಿದ್ದಾರೆ ಎಂದಿರೋ ಧ್ರುವ, ಅಣ್ಣ ಚಿರು-ಮೇಘನಾ ಮಗನನ್ನು ನನ್ನ ಮೊದಲ ಮಗು ಎಂದಿರುವುದು ಮತ್ತೊಮ್ಮೆ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ.
ಮಗು ಯಾವಾಗಲಾದರೂ ಹುಟ್ಟಲಿ, ಅದು ಒಳ್ಳೆಯ ದಿನವೇ. ಅದರಲ್ಲೂ ಸೆ.18 ಲೆಜೆಂಡರಿಗಳು ಹುಟ್ಟಿದ ದಿನ ಎನ್ನುವ ಮೂಲಕ, ಉಪೇಂದ್ರ, ವಿಷ್ಣುವರ್ಧನ್ ಮತ್ತು ಶೃತಿ ಅವರ ಜನ್ಮದಿನದಂದೇ ನನ್ನ ಮಗ ಹುಟ್ಟಿದ್ದಾನೆ ಅನ್ನೋದನ್ನೂ ಹೇಳಿದ್ದಾರೆ.
ಮಗು ಮನೆ ಬೆಳಗಿದ ಘಳಿಗೆಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿರುವ ಧ್ರುವ ಸರ್ಜಾ, ಅಭಿಮಾನಿಗಳಿಗೆ ಸಿಹಿ ತಿನ್ನಿಸಿ ಖುಷಿ ಪಟ್ಟಿದ್ದಾರೆ. ವಿಶೇಷವೆಂದರೆ 2019ರಲ್ಲಿ ಧ್ರುವ-ಪ್ರೇರಣಾ ಮದುವೆಯಾಗಿತ್ತು. 2022ರ ಅಕ್ಟೋಬರ್ 2ರಂದು ಗಾಂಧಿ ಜಯಂತಿ ದಿನ ಮಗಳು ಹುಟ್ಟಿದ್ದಳು. ಇದೀಗ ಗೌರಿ-ಗಣೇಶ ಹಬ್ಬದ ದಿನ ಮಗ ಹುಟ್ಟಿದ್ದಾನೆ. ಜೊತೆಗೆ ಸೆ.18, ಕನ್ನಡ ಚಿತ್ರರಂಗದ ದಿಗ್ಗಜರು ಜನಿಸಿದ ದಿನವೂ ಬೇರೆ.