ಕಾಂತಾರ ಚಿತ್ರದ ಪ್ರೀಕ್ವೆಲ್ ಘೋಷಣೆಯಾಗಿದ್ದೇ ತಡ, ಚಿತ್ರದ ಬಗ್ಗೆ ಕುತೂಹಲ ಗರಿಗೆದರುತ್ತಿದೆ. ಕ್ರಿ.ಶ.400ರ ಕಾಲಘಟ್ಟದ ಕಥೆ ಇರಲಿದ್ದು, ಕಥೆ ಹಿಂದೆ ಹಿಂದೆ ಹೋಗಲಿದೆ. ಅಂದರೆ ನೆಮ್ಮದಿಯಿಲ್ಲದ ರಾಜ ಪಂಜುರ್ಲಿಯನ್ನು ತನ್ನ ರಾಜ್ಯಕ್ಕೆ ಕರೆತರುವ ಕಥೆ ಇರಲಿದೆ ಎನ್ನಲಾಗಿದೆ. ಕಾಂತಾರ 2' ಚಿತ್ರದಲ್ಲಿ ರಿಷಬ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ 11 ಕೆಜಿ ದೇಹತೂಕವನ್ನು ಕಮ್ಮಿ ಮಾಡಿಕೊಳ್ಳಲಿದ್ದಾರೆ.
ಕಥೆ & ಚಿತ್ರಕಥೆ ಬರೆಯುವ ಸಲುವಾಗಿ ರಿಷಬ್ ಶೆಟ್ಟಿ ಮತ್ತು ಚಿತ್ರದ ಬರಹಗಾರರಾದ ಅನಿರುದ್ಧ್ ಮಹೇಶ್, ಶನೀಲ್ ಗುರು & ಟೀಮ್ ಈಗಾಗಲೇ ಮಂಗಳೂರಿನಲ್ಲಿ ಬೀಡುಬಿಟ್ಟಿದೆ. ಮುಖ್ಯವಾಗಿ ಮಂಗಳೂರಿನಲ್ಲೇ ವಾಸ್ತವ್ಯ ಹೂಡುವುದಕ್ಕೂ ಒಂದು ಕಾರಣವಿದೆ. 'ಕಾಂತಾರ' ಕಥೆಯು ಕರಾವಳಿ ಹಿನ್ನೆಲೆಯಲ್ಲಿ ಸಾಗುವುದರಿಂದ, ತಂಡ ಕೂಡ ಅಲ್ಲಿಯೇ ಉಳಿದುಕೊಂಡಿದೆ.
ಮೂಲಗಳ ಪ್ರಕಾರ, 'ಕಾಂತಾರ 2' ಚಿತ್ರದ ಬಜೆಟ್ 150 ಕೋಟಿ ರೂ. ಎನ್ನಲಾಗುತ್ತಿದೆ. ಕಾಂತಾರ ಸೆನ್ಸೇಷನ್ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಕಾಂತಾರ 2 ಮೇಲೆ ಭಾರಿ ನಿರೀಕ್ಷೆಗಳಿವೆ. ಆ ಕಾರಣಕ್ಕಾಗಿಯೇ ದೊಡ್ಡಮಟ್ಟದಲ್ಲಿ ಸಿನಿಮಾ ಮಾಡಲು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ.