ಕೆಲವೇ ದಿನಗಳ ಹಿಂದೆ ನಡೆದ ಐಎಎಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಕರ್ನಾಟಕದ ಹಲವರು ಪಾಸ್ ಆಗಿದ್ದಾರೆ. ಈ ಬಾರಿಯೂ ರಾಜ್ಕುಮಾರ್ ಅಕಾಡೆಮಿಯಿಂದ ಹಲವು ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಐಎಎಸ್ ಅಧಿಕಾರಿಗಳಾಗುತ್ತಿದ್ದಾರೆ. ಅಂಥಹವರಿಗೆ ಸನ್ಮಾನ ಕಾರ್ಯಕ್ರಮವನ್ನು ರಾಜ್ಕುಮಾರ್ ಕುಟುಂಬ ಇರಿಸಿಕೊಂಡಿತ್ತು. ರಾಜ್ ಕುಟುಂಬದವರ ಜೊತೆಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಕೂಡಾ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅಪ್ಪು ಹೆಸರಲ್ಲಿ ಪೃಥ್ವಿ ಸ್ಕಾಲರ್ ಶಿಪ್ ಬಿಡುಗಡೆ ಮಾಡಿದ ಸಿದ್ದರಾಮಯ್ಯ, ರಾಜ್ ಅಕಾಡೆಮಿಯಿಂದ ತೇರ್ಗಡೆಯಾದವರಿಗೆ ಶುಭ ಕೋರಿದರು.
ಪುನೀತ್ ರಾಜ್ ಕುಮಾರ್ ಜನರ ಪ್ರೀತಿ ಗಳಿಸಿದ್ದ ಅಪರೂಪದ ನಟ. ಅವರ ಹೆಸರಲ್ಲಿ ಸ್ಕಾಲರ್ ಶಿಪ್ ಕೊಡುತ್ತಿರುವುದು ಬಹಳ ಒಳ್ಳೆಯ ಕೆಲಸ. ಸರ್ಕಾರಿ ಕೆಲಸ ದೇವರ ಕೆಲಸ ಅಂತ ಕೆಲಸ ಮಾಡಿ ಅಂತ ಕೆಲಸದಲ್ಲಿ ದೇವರನ್ನು ಕಾಣಿ ಎಂದು ಹೊಸದಾಗಿ ಐಎಎಸ್ ಅಧಿಕಾರಿಗಳಾಗಲಿರುವ ಯುವಕರಿಗೆ ಸಿದ್ದರಾಮಯ್ಯ ಹೇಳಿದರು.
ನಾನೂ ಹಾಗೂ ಡಾ.ರಾಜ್ ಕುಮಾರ್ ಒಂದೇ ಕಾಡಿನವರು. 2017ರಲ್ಲಿ ಈ ಸಂಸ್ಥೆ ಆರಂಭವಾದಾಗ ನಾನೇ ಉದ್ಘಾಟನೆ ಮಾಡಿದ್ದೆ. ಈಗ 2023ರಲ್ಲಿ ಈ ಸಂಸ್ಥೆ ದೊಡ್ಡ ಸಾಧನೆ ಮಾಡಿದೆ. ಅಕಾಡೆಮಿಯ ಸಾಧನೆಗೆ ಮುಖ್ಯ ಕಾರಣ ರಾಘವೇಂದ್ರ ರಾಜಕುಮಾರ್. ಪುನೀತ್ ರಾಜಕುಮಾರ್ ಅಪ್ಪನ ಹೆಸರು ಉಳಿಸಿ, ಜನರನ್ನು ಗಳಿಸಿದ ಅಪರೂಪದ ನಟ. ರಾಜಕುಮಾರ್ ಕುಟುಂಬದ ಎಲ್ಲರಿಗೂ ನನ್ನ ಅಭಿನಂದನೆಗಳು ಎಂದರು ಸಿದ್ದರಾಮಯ್ಯ.
ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ಯುವರಾಜ್ ಕುಮಾರ್ ಸೇರಿದಂತೆ ಇಡೀ ರಾಜ್ ಕುಟುಂಬದವರು ಭಾಗವಹಿಸಿದ್ದರು.