ಸುಮಾರು ವರ್ಷಗಳ ಹಿಂದೆ ಜನರಿಗೆ ನಾಟಿ ವೈದ್ಯರೇ ದೇವರಾಗಿದ್ದರು. ಆಯುರ್ವೇದ ಪದ್ಧತಿಗಳಲ್ಲಿಯೇ ಚಿಕಿತ್ಸೆ ಕೊಡುತ್ತಿದ್ದರು. ಯಾರಿಗೂ ಹಣದ ಆಸೆ ಇರಲಿಲ್ಲ. ಆದರೆ ಈಗ ಆಲೋಪತಿ ಬಂದಿದೆ. ಎಷ್ಟರಮಟ್ಟಿಗೆಂದರೆ ನಾಟಿ ವೈದ್ಯ ಅಥವಾ ಆಯುರ್ವೇದ ವೈದ್ಯ ಪದ್ಧತಿ ರೋಗಕ್ಕೆ ಚಿಕಿತ್ಸೆಯೇ ಅಲ್ಲ ಎನ್ನುವಷ್ಟರಮಟ್ಟಿಗೆ.. ಆ ಕಥೆಯನ್ನು ಹೇಳಲೆಂದೇ ಬರುತ್ತಿದೆ ಮಧುರ ಕಾವ್ಯ ಸಿನಿಮಾ.
ಸುಮಾರು 60-70 ವರ್ಷಗಳ ಹಿಂದೆ ಅಲೋಪಥಿ ಆಸ್ಪತ್ರೆಗಳು ತುಂಬಾ ಕಮ್ಮಿ ಇದ್ದವು. ಆಗ ನಾಟಿ ವೈದ್ಯ ಪದ್ದತಿಯೇ ಜನಪ್ರಿಯವಾಗಿತ್ತು. ಆಗ ಹಣದ ಆಸೆ ಯಾರಲ್ಲೂ ಇರಲಿಲ್ಲ, ಆದರೆ ಈಗ ನಾಟಿ ವೈದ್ಯ ಪದ್ದತಿಯನ್ನು ಅಲೋಪಥಿಯವರು ಹೇಗೆ ಹತ್ತಿಕ್ಕುತ್ತಿದ್ದಾರೆ, ಪಾರಂಪರಿಕವಾಗಿ ಜನರ ಸೇವೆ ಮಾಡಿಕೊಂಡು ಬಂದಿರುವ ನಾಟಿ ವೈದ್ಯರನ್ನು ಹೇಗೆ ತುಳಿಯುತ್ತಿದ್ದಾರೆ, ಹಿಂದಿನಿಂದ ಬಂದಿರುವ ಆಯುರ್ವೇದವನ್ನು ಉಳಿಸಬೇಕು, ನಾಟಿ ವೈದ್ಯ ಪದ್ದತಿ ಬೆಳೆಸಬೇಕು ಅಂತ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದೇವೆ, ಆಯುರ್ವೇದ ಸಂಪ್ರದಾಯ ಉಳಿಯಬೇಕು ಎನ್ನುವುದೇ ನಮ್ಮ ಮೂಲ ಉದ್ದೇಶ ನಾಯಕ-ನಿರ್ದೇಶಕ ಮಧುಸೂದನ್.
ಮಧುಸೂಧನ್ ಮೂಲತಃ ಮಂಡ್ಯದವರು. ಕ್ಯಾತನಹಳ್ಳಿ ಊರು. ಮಧುಸೂಧನ್ ನಾಯಕರಾಗಿ ನಟಿಸಿದ್ದು, ತಾಯಿಯ ಪಾತ್ರದಲ್ಲಿ ಯಶೋಧಾ ನಟಿಸಿದ್ದಾರೆ. ರಾಜಕುಮಾರ್ ನಾಯಕ್ ವಿಲನ್. ಚಿತ್ರದಲ್ಲಿ ಮಧುಸೂಧನ್ ನಾಟಿ ವೈದ್ಯರಾಗಿ ನಟಿಸಿದ್ದಾರೆ. ಮೂಲತಃ ಅವರ ವೃತ್ತಿಯೂ ನಾಟಿವೈದ್ಯರದ್ದೇ. ಅದೇ ಪಾತ್ರವನ್ನು ತೆರೆಯ ಮೇಲೆ ಮಾಡಿದ್ದಾರೆ ಮಧುಸೂಧನ್. ನಿರ್ಮಾಪಕರೂ ಅವರೇ.
ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಸಹ ನಾನೇ ವಹಿಸಿಕೊಂಡಿದ್ದೇನೆ. ಉಡುಪಿ, ಮಂಗಳೂರು, ಶಿರಸಿ ಸುತ್ತಮುತ್ತ ಚಿತ್ರಕ್ಕೆ ಚಿತ್ರೀಕರಣ ನಡೆಸಿದ್ದೇವೆ. ಪ್ರಮುಖ ಪಾತ್ರವನ್ನು ಬೇರೆಯವರಿಂದ ಮಾಡಿಸುವುದಕ್ಕಿಂತ ನಾನೇ ಮಾಡಿದರೆ ಚೆನ್ನಾಗಿರತ್ತೆ ಅಂತ ಎಲ್ಲರೂ ಹೇಳಿದ್ದರಿಂದ ಮಾಡಬೇಕಾಯ್ತು. ನಾಟಿ ವೈದ್ಯರ ಕುಟುಂಬವೊಂದು ಮೆಡಿಕಲ್ ಲಾಭಿಯ ವಿರುದ್ದ ಹೋರಾಡುವ ಕಥೆಯಿದು ಎಂದು ಕಥೆಯ ವಿವರ ನೀಡಿದ್ದಾರೆ ಮಧುಸೂಧನ್.