ಹೀರೋ ಅಂದ್ರೆ ಒಂದು ಕಾಲದಲ್ಲಿ ಸಕಲ ಸದ್ಗುಣ ಸಂಪನ್ನ ಎಂಬ ರೂಢಿಯಿತ್ತು. ಆನಂತರ ಪೊರ್ಕಿ, ತರಲೆ ತುಂಟತನವೇ ಹೀರೋನ ಖಾಯಮ್ ಗುಣವಾಯಿತು. ಈಗ ಏನೇನೋ.. ಆಗಿದೆ. ವಿಷಯ ಅದಲ್ಲ, ಈಗ ಬರ್ತಿರೋ ದರ್ಬಾರ್ ಸಿನಿಮಾ ಇದ್ಯಲ್ಲ, ಈ ಚಿತ್ರದಲ್ಲಿನ ಹೀರೋನ ಕ್ಯಾರೆಕ್ಟರ್ ಮತ್ತು ಕಥೆ ಎರಡೂ ವಿಭಿನ್ನವಾಗಿವೆ.
ಹೀರೋ ಕೆಟ್ಟದ್ದನ್ನು, ಸೋಮಾರಿಗಳನ್ನು ಕಂಡರೆ ಸಹಿಸಲ್ಲ, ಉದಾಹರಣೆಗೆ ಜೂಜಾಡುವುದು, ಅರಳಿಕಟ್ಟೆಯಲ್ಲಿ ಕೂತು ಹರಟೆ ಹೊಡೆಯುವುದು, ಈತನ ಈ ಗುಣ ಕೆಲವರಿಗೆ ಇಷ್ಟ ಆಗಲ್ಲ, ಇವನನ್ನು ಪಂಚಾಯ್ತಿ ಎಲೆಕ್ಷನ್ ನಲ್ಲಿ ಸೋಲಿಸಬೇಕು ಎಂದು ಪ್ರಯತ್ನಿಸುತ್ತಾರೆ..ಇದನ್ನಿಟ್ಟುಕೊಂಡೇ ಸಿನಿಮಾ ಮಾಡಿದ್ದೇವೆ. ಒಂದು ಪರಿಶುದ್ಧ ಹಾಸ್ಯ ಚಿತ್ರ ಕಟ್ಟಿಕೊಟ್ಟಿದ್ದೇವೆ ಎನ್ನುತ್ತಾರೆ ವಿ.ಮನೋಹರ್. 23 ವರ್ಷಗಳ ನಂತರ ಡೈರೆಕ್ಷನ್ ಫೀಲ್ಡಿಗೆ ಬಂದಿರೋ ವಿ ಮನೋಹರ್ ಅವರಂತೂ ಚಿತ್ರದ ಬಗ್ಗೆ ಕಾನ್ಫಿಡೆಂಟ್ ಆಗಿದ್ದಾರೆ.
ಈ ಚಿತ್ರದ ಪ್ರೀವ್ಯೂ ನೋಡಿದ ಮೇಲೆ ಚಿತ್ರದ ಮೇಲೆ ಭಾರಿ ನಿರೀಕ್ಷೆಯೂ ಮೂಡಿದೆ. ಚಿತ್ರದ ಕಂಟೆಂಟ್ ಚೆನ್ನಾಗಿದೆ. ಖಂಡಿತಾ, ಸಿನಿಮಾ ನೋಡಿದವರು ಇನ್ನು 10 ಜನಕ್ಕೆ ಹೇಳ್ತಾರೆ ಅನ್ನೋ ವಿಶ್ವಾಸ ಹೀರೋ ಸತೀಶ್ ಅವರದ್ದು. ಸತೀಶ್ ಅವರ ಚಿತ್ರದ ನಿರ್ಮಾಪಕರಲ್ಲಿಯೂ ಒಬ್ಬರು. ಚಿತ್ರದ ಕಥೆಯನ್ನೂ ತಾವೇ ಬರೆದು, ನಿರ್ದೇಶನದ ಹೊಣೆಯನ್ನು ಮನೋಹರ್ ಅವರಿಗೆ ಒಪ್ಪಿಸಿದ್ದಾರೆ. ಈ ಚಿತ್ರ ಜೂನ್ 9 ರಂದು ಬಿಡುಗಡೆಗೆ ಸಿದ್ಧವಾಗಿದೆ.