ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ, ಸಿಂಪಲ್ ಸುನಿ ಗರಡಿಯಿಂದ ಬೆಳಕಿಗೆ ಬಂದ ಕಲಾವಿದ. ಇದೀಗ ರುದ್ರ ಗರುಡ ಪುರಾಣ ಚಿತ್ರದಲ್ಲಿ ಪೊಲೀಸ್ ಆಗಿದ್ದಾರೆ. ಕವಲುದಾರಿಯಲ್ಲಿಯೂ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದ ರಿಷಿಗೆ ಈ ಚಿತ್ರದಲ್ಲಿ ಪ್ರಿಯಾಂಕಾ ತಿಮ್ಮೇಶ್ ಜೋಡಿ. ಗೋದ್ರಾ ಚಿತ್ರದ ನಿರ್ದೇಶಕ ಕೆ.ಎಸ್.ನಂದೀಶ್ ಈ ಚಿತ್ರಕ್ಕೂ ಡೈರೆಕ್ಟರ್. ಅಶ್ವಿನ್ ಮೋಹಿತ್ ನಿರ್ಮಾಪಕರು.
ಚಿತ್ರದ ಮುಹೂರ್ತ ನೆರವೇರಿದ್ದು, ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದು ನಟ ನೀನಾಸಂ ಸತೀಶ್.
ನಿರ್ದೇಶಕರು ಕಥೆಯನ್ನು ಹೊಸ ರೀತಿಯಲ್ಲಿ ಹೇಳುತ್ತಿದ್ದಾರೆ. ಕಥೆಯಂತೂ ಸಖತ್ ಇಷ್ಟವಾಯಿತು. ನನಗೆ ಮೊದಲು ಇಷ್ಟವಾಗಿದ್ದೇ ಚಿತ್ರದ ಟೈಟಲ್. ಆಮೇಲೆ ಕಥೆಯೂ ಇಷ್ಟವಾಯಿತು ಎನ್ನುವ ರಿಷಿಯವರಿಗೆ ಚಿತ್ರದ ಮೇಲೆ ನಂಬಿಕೆಯಿದೆ. ಈ ಚಿತ್ರ ಕನ್ನಡ ಮತ್ತು ತೆಲುಗು, ಎರಡೂ ಭಾಷೆಯಲ್ಲಿ ತಯಾರಾಗುತ್ತಿದೆ.