ಉಚಿತ ಅನ್ನಭಾಗ್ಯ ಯೋಜನೆ ಸಿದ್ದರಾಮಯ್ಯನವರಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದೇನೋ ಹೌದು. ಈಗ ಮತ್ತೆ ಸಿದ್ದರಾಮಯ್ಯ ಬಂದಿರೋದ್ರಿಂದ, ಉಚಿತ ಅಕ್ಕಿಯನ್ನು ಬಿಪಿಎಲ್ ಕಾರ್ಡುದಾರರಿಗೆ ತಲಾ 10 ಕೆಜಿಗೆ ಏರಿಸಿರೋದ್ರಿಂದ ಮತ್ತೆ ಸದ್ದು ಮಾಡುತ್ತಿದೆ. ಜನರಿಗೆ ಉಚಿತವಾಗಿ ಅಕ್ಕಿ ಕೊಟ್ಟರೆ ಜನ ಸೋಮಾರಿಗಳಾಗುತ್ತಾರೆ ಎನ್ನುವುದೂ ಒಂದು ವಾದ. ಇದಕ್ಕೆ ಡಾಲಿ ಧನಂಜಯ ಉತ್ತರ ಕೊಟ್ಟಿದ್ದಾರೆ.
ಬಡವರ ಹಸಿವು ನೀಗಿಸಲು ಅಕ್ಕಿ ಕೊಟ್ರೆ ಅದು ತಪ್ಪಲ್ಲ.. ಅಕ್ಕಿ ಕೊಟ್ಟರೆ ಜನರು ಸೋಮಾರಿಗಳಾಗಿ ಬಿಡುತ್ತಾರೆ ಎಂದು ಹೇಳುವುದು ಸರಿ ಅಲ್ಲ. ತಿಂಗಳ ಆದಾಯ ಕಮ್ಮಿ ಇರುವಂತಹ ಬಡವರ ಹಸಿವು ನೀಗಿಸಲು ಅಕ್ಕಿ ಕೊಟ್ಟರೆ ಅದು ತಪ್ಪು ಅಂತ ನನಗೆ ಅನ್ನಿಸುವುದಿಲ್ಲ. ಈ ರೀತಿ ಅಕ್ಕಿ ಕೊಡುವುದರಿಂದ ಜನರು ಸೋಮಾರಿಗಳಾಗುತ್ತಾರೆ ಎನ್ನುವುದು ಸರಿಯಲ್ಲ. ಹೇಗೆ ಸೋಮಾರಿಗಳಾಗಿಬಿಡುತ್ತಾರೆ? ನಿಮಗೆ ಬರೀ 10 ಕೆಜಿ ಅಕ್ಕಿ ಕೊಟ್ಟುಬಿಟ್ಟರೆ, ಅಡುಗೆ ಮಾಡ್ಕೊಂಡು, ಊಟ ಮಾಡ್ಕೊಂಡು ಮನೆಯಲ್ಲಿ ಇರುತ್ತೀರಾ? ಇಲ್ಲ ತಾನೇ.. ಸರ್ಕಾರ ಕೊಡುವ ಅಕ್ಕಿ ಹಸಿವನ್ನು ನೀಗಿಸುತ್ತದೆ' ಎಂದು ನಟ ಧನಂಜಯ ಹೇಳಿದ್ದಾರೆ.
ಹಾಗಂತ ಡಾಲಿ ಧನಂಜಯ ಕಾಂಗ್ರೆಸ್ಸಿನ ಪರವೇ ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗಿದೆ. ಅದಕ್ಕೆ ಧನಂಜಯ ಕೊಟ್ಟಿರುವ ಉತ್ತರ ನಾನು ಯಾವ ಪಕ್ಷದ ಪರವೂ ಅಲ್ಲ. ವಿರೋಧವೂ ಅಲ್ಲ. ಸಾಮಾನ್ಯ ಮನುಷ್ಯನಾಗಿಯೇ ಈ ಉತ್ತರ ಹೇಳುತ್ತಿದ್ದೇನೆ. ಇಲ್ಲದೇ ಇರುವವರಿಗೆ ಏನಾದರೂ ಸಹಾಯ ಮಾಡುವುದರಲ್ಲಿ ನನಗಂತೂ ಏನೂ ತಪ್ಪು ಕಾಣಿಸುತ್ತಿಲ್ಲ. ನಾನು ಆ ದೃಷ್ಟಿಕೋನದಲ್ಲಿ ನೋಡುತ್ತೇನೆ ಅಷ್ಟೇ ಎಂದು ಧನಂಜಯ ಹೇಳಿದ್ದಾರೆ.