ಒಂದು ಸಿನಿಮಾ ಹಿಟ್ ಆದರೆ ನಿರ್ಮಾಪಕರಿಗೆ ಲಾಭವಾಗೋದು ಸಹಜ. ಆ ಖುಷಿಯಲ್ಲಿಯೇ ಹೊಯ್ಸಳ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕಾರ್ತಿಕ್ ಗೌಡ, ಹೊಯ್ಸಳ ಚಿತ್ರದ ಹೀರೋ ಡಾಲಿ ಧನಂಜಯಗೆ ಐಷಾರಾಮಿ ಕಾರ್ ಗಿಫ್ಟ್ ಕೊಟ್ಟಿದ್ದಾರೆ. ಹೊಯ್ಸಳ ಸಿನಿಮಾವು ಡಾಲಿ ಧನಂಜಯ್ರ 25ನೇ ಸಿನಿಮಾ. ಗುರುದೇವ್ ಹೊಯ್ಸಳ ಸಿನಿಮಾದಲ್ಲಿ ಡಾಲಿ ಧನಂಜಯ್ ಖಡಕ್ ಪೊಲೀಸ್ ಅಧಿಕಾರಿ ಗುರುದೇವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಾಲಿಗೆ ಮೂರನೇ ಬಾರಿ ಅಮೃತ ಅಯ್ಯಂಗಾರ್ ಈ ಚಿತ್ರದಲ್ಲಿ ಜೋಡಿಯಾಗಿದ್ದಾರೆ. ಬಾಕ್ಸಾಫೀಸ್ನಲ್ಲಿ ಸಿನಿಮಾ ಸೌಂಡ್ ಮಾಡ್ತಿದೆ. `ಗುರುದೇವ್ ಹೊಯ್ಸಳ’ ಕಥೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ವಿಜಯ್ ನಿರ್ದೇಶನದ ಈ ಸಿನಿಮಾದಲ್ಲಿ ಗುಲ್ಟು ನವೀನ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಕೆಜಿಎಫ್ ಖ್ಯಾತಿಯ ವಿಲನ್ ಆಂಡ್ರ್ಯೂ ಸಹ ನಟಿಸಿದ್ದಾರೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಿನಿಮಾ ಸೂಪರ್ ಹಿಟ್ ಆಗುವ ದಾರಿಯಲ್ಲಿದೆ. ಪ್ರೇಕ್ಷಕರೂ ಥ್ರಿಲ್ ಆಗಿದ್ದಾರೆ.
ಹೊಯ್ಸಳ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿರುವ ಕಾರಣ ನಿರ್ಮಾಪಕ ಕಾರ್ತಿಕ್ ಗೌಡ, ನಟ ಡಾಲಿ ಧನಂಜಯ್ಗೆ ಒಂದು ಕೋಟಿ ಬೆಲೆಯ ಟೊಯೊಟಾ ವಿಲ್ಫೈರ್ ಹೆಸರಿನ ಐಶಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. . ಇದರ ಎಕ್ಸ್ ಶೋ ರೂಂ ಬೆಲೆ 96 ಲಕ್ಷ ರೂಪಾಯಿ ಇದೆ. ಆನ್ರೋಡ್ ಬೆಲೆ 1.19 ಕೋಟಿ ರೂಪಾಯಿ. 2492 ಸಿಸಿ ಇಂಜಿನ್ ಕಾರಿನ ಮೈಲೇಜ್ 16 ಕಿ.ಮೀ. 7 ಸೀಟರ್ ಕಾರಿನಲ್ಲಿ ಎಲ್ಲವೂ ಲಕ್ಷುರಿ. ಜೊತೆಗೆ ಮಿಂಚಿನ ಸ್ಪೀಡ್ ಇರುತ್ತೆ. 0ದಿಂದ 100 ಕಿ.ಮೀ. ವೇಗ ರೀಚ್ ಆಗಲು ಕೇವಲ 8 ಸೆಕೆಂಡ್ ಸಾಕು.
ನಿರ್ಮಾಪಕರು ಕೊಟ್ಟ ಉಡುಗೊರೆಯ ಕಾರಿನ ವಿಷಯವನ್ನು ಸ್ವತಃ ಡಾಲಿ ಧನಂಜಯ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಯಲ್ಲಿ ನಿರ್ಮಾಪಕರಾದ ಯೋಗಿ ಬಿ.ರಾಜ್ ಮತ್ತು ಕಾರ್ತಿಕ್ ಗೌಡ ಇರುವುದೇ ವಿಶೇಷ.
ಅಂದಹಾಗೆ ಧನಂಜಯಗೆ ಕಾರು ಸಿಕ್ಕ ಖುಷಿಗೆ ನಟಿ ರಮ್ಯಾ ಅವರಿಗೆ ಐಸ್ ಕ್ರೀಮ್ ಕೊಡಿಸಬೇಕಂತೆ. ಜೊತೆಗೆ ಹೊಸ ಕಾರಿನಲ್ಲಿ ರೌಂಡ್ಸ್ ಕರೆದುಕೊಂಡು ಹೋಗಬೇಕಂತೆ ರಮ್ಯ ಪ್ರೀತಿಯ ಧನು. ಹೊಯ್ಸಳ ಹಿಟ್ಟು.. ಹೊಸ ಕಾರು.. ಒಟ್ಟಿನಲ್ಲಿ ಧನುಗೆ ಇಗ ಎಲ್ಲವೂ ಹೊಸದೇ...