` ಡಾಲಿ ಧನಂಜಯ : ಒಂದಕ್ಕಿಂತ ಒಂದು ವಿಭಿನ್ನ 25 ಸಿನಿಮಾ ಜರ್ನಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಡಾಲಿ ಧನಂಜಯ : ಒಂದಕ್ಕಿಂತ ಒಂದು ವಿಭಿನ್ನ 25 ಸಿನಿಮಾ ಜರ್ನಿ
Dhananjaya Image

ಡಾಲಿ ಧನಂಜಯ ಸ್ಟಾರ್ ಎಂದರೆ ಅವರೇ ನಕ್ಕು ಬಿಡ್ತಾರೆ. ಒಳಗೊಳಗೆ ಖುಷಿಪಡದಿರುವ ವ್ಯಕ್ತಿ ಯಾರಿಲ್ಲ. ಆದರೆ, ಸ್ಟಾರ್ ಪಟ್ಟ ಎನ್ನುವುದು ಸುಮ್ಮನೆ ಸಿಕ್ಕಲ್ಲ. ತಾರಾ ಪಟ್ಟ ಎನ್ನುವುದು ಯಾರೊಬ್ಬರಿಗೂ ಸುಲಭವಾಗಿ ಒಲಿದು ಬಂದಿಲ್ಲ. ಮೊದಲು ಅವಮಾನ.. ಆಮೇಲೆ ಅಭಿಮಾನ.. ತದನಂತರ ಸನ್ಮಾನ.. ಡಾ.ರಾಜ್ ಅವರಿಂದ ಹಿಡಿದು ಈಗಿನ ಡಾಲಿಯವರೆಗೆ ಎಲ್ಲರೂ ಅನುಭವಿಸಿರುವುದೇ ಇದು. ಡಾಲಿ ಎಂಬ ನಟನಿಗೆ ಸಿನಿಮಾಗೆ ಬರುವ ಅಗತ್ಯವೇ ಇರಲಿಲ್ಲ. ಸಾಫ್ಟ್‍ವೇರ್ ಎಂಜಿನಿಯರ್ ಆಗಿದ್ದ ಡಾಲಿ, ಆ ಫೀಲ್ಡಿನಲ್ಲೇ ಕಂಟಿನ್ಯೂ ಆಗಿದ್ದರೆ, ಆಗಿನ ಕಾಲಕ್ಕೆ ಲಕ್ಷ ಲಕ್ಷ ಸಂಬಳ ಗಿಟ್ಟಿಸಬಹುದಿತ್ತು. ಯಾವ ದೇಶದಲ್ಲೋ ಸೆಟ್ಲ್ ಆಗಬಹುದಿತ್ತು. ಆದರೆ ಸಿನಿಮಾ ಕೈಬೀಸಿ ಕರೆದು, ಸಿನಿಮಾಗಾಗಿ ಹಠ ಬಿದ್ದು ಬಂದ ಡಾಲಿ ಧನಂಜಯ, ಹೀರೋ ಆಗಿಯೇ ಸಿನಿಮಾಗೆ ಬಂದವರು.

ಮೊದಲ ಪಿಕ್ಚರ್ ಡೈರೆಕ್ಟರ್ ಗುರುಪ್ರಸಾದ್ ಅವರ ಡೈರೆಕ್ಟರ್ ಸ್ಪೆಷಲ್. ಮಠ ಖ್ಯಾತಿಯ ಗುರು ಪ್ರಸಾದ್ ಚಿತ್ರವಾಗಿದ್ದ ಕಾರಣ, ಚಿತ್ರ ಸೌಂಡ್ ಮಾಡಿತು. ಅದಾದ ನಂತರ ರಾಟೆ ಬಂತು. ಮತ್ತೊಮ್ಮೆ ಒಳ್ಳೆಯ ಡೈರೆಕ್ಟರ್ ಸಿಕ್ಕರು. ಎ.ಪಿ.ಅರ್ಜುನ್ ರಾಟೆ ಕೂಡಾ ಸೌಂಡ್ ಮಾಡಿತು. ಆದರೆ, ಡೈರೆಕ್ಟರ್ ಸ್ಪೆಷಲ್ ಮತ್ತು ರಾಟೆ ಎರಡೂ ಕೂಡಾ ಆವರೇಜ್ ಹಿಟ್ ಆದವು. ಆದರೆ ಧನಂಜಯ ಭರವಸೆ ಹುಟ್ಟಿಸಿದ್ದರು.

ಅದಾದ ನಂತರ ಬಂದಿದ್ದೇ ಬಾಕ್ಸರ್. ಕಂಪ್ಲೀಟ್ ಆಕ್ಷನ್ ಮೂವಿ. ಪ್ರೀತಂ ಗುಬ್ಬಿಯಂತಹಾ ಡೈರೆಕ್ಟರ್ ಮತ್ತು ಜಯಣ್ಣ-ಭೋಗೇಂದ್ರ ಅವರಂತಹ ಸ್ಟಾರ್ ನಿರ್ಮಾಪಕರಿದ್ದರೂ ಸಿನಿಮಾ ಹೇಳಿಕೊಳ್ಳುವ ಮಟ್ಟಕ್ಕೆ ಏಳಲಿಲ್ಲ. ಅದಾದ ಮೇಲೆ ಪವನ್ ಒಡೆಯರ್ ಜೊತೆಗೆ ಜೆಸ್ಸಿ ಚಿತ್ರ ಬಂದು. ಹಾಡುಗಳೂ ಹಿಟ್ ಆದವರು. ಸಿನಿಮಾ ಗಮನ ಸೆಳೆಯಿತು. ಆದರೆ ಅಷ್ಟು ಹೊತ್ತಿಗೆ ಗಾಂಧಿನಗರ ಧನಂಜಯ ಅವರಿಗೆ ಬೇರೆಯದೇ ಬ್ರಾಂಡ್ ಕಟ್ಟಾಗಿತ್ತು. ನಟಿಸಿದ್ದ ಪ್ರತಿ ಚಿತ್ರದಲ್ಲೂ ಡಾಲಿ ಧನಂಜಯ ಅವರ ಪ್ರತಿಭೆ ಗಮನ ಸೆಳೆದಿತ್ತು. ಲವರ್ ಬಾಯ್ ಆಗಿ, ಆಕ್ಷನ್ ಹೀರೋ ಆಗಿ, ಮುಗ್ಧನಾಗಿ, ದೆವ್ವವಾಗಿ.. ಗೆದ್ದಿದ್ದರು ಧನಂಜಯ. ಆಗ ಅವರಿನ್ನೂ ಡಾಲಿ ಆಗಿರಲಿಲ್ಲ.

ಗುರುಪ್ರಸಾದ್ ಅವರ ಜೊತೆ ಎರಡನೇ ಸಲ, ಹ್ಯಾಪಿ ನ್ಯೂ ಇಯರ್, ಬದ್ಮಾಶ್.. ಹೀಗೆ ಹಲವು ಚಿತ್ರಗಳನ್ನು ಮಾಡಿದರು. ನಡುವೆ ಅಲ್ಲಮ ಚಿತ್ರದಲ್ಲಿ ವಚನಕಾರ ಅಲ್ಲಮಪ್ರಭು ಪಾತ್ರದಲ್ಲಿ ಗಮನ ಸೆಳೆದರು. ಡಾಲಿ ಧನಂಜಯ ಎಂತಹ ಪಾತ್ರಗಳಿಗೂ ಸೂಟ್ ಆಗ್ತಾನೆ ಕಣ್ರಿ ಎಂಬ ಭರವಸೆ ಹುಟ್ಟಿಸಿದರು. ಆದರೆ ಧನಂಜಯ ಅವರಿಗೆ ಅಂಟಿದ್ದ ಬೋರ್ಡು ಅವರನ್ನು ಅಷ್ಟೊತ್ತಿಗಾಗಲೇ ಚಿಕ್ಕ ಚಿಕ್ಕ ಪಾತ್ರಗಳಿಗೆ ಸೀಮಿತಗೊಳ್ಳುವ ಹಾಗೆ ಮಾಡಿತ್ತು. ಆ ವೇಳೆಗೆ ಬಂದ ಸಿನಿಮಾವೇ ಟಗರು.

ಒಬ್ಬೊಬ್ಬರ ವೃತ್ತಿ ಜೀವನದಲ್ಲಿ ಒಂದೊಂದು ಟರ್ನಿಂಗ್ ಪಾಯಿಂಟ್ ಎಂಬಂತಹ ಸಿನಿಮಾ ಇರುತ್ತದೆ. ಡಾಲಿಗೆ ಆ ಟರ್ನಿಂಗ್ ಪಾಯಿಂಟ್ ಕೊಟ್ಟಿದ್ದು ಟಗರು. ಹಾಗೆ ನೋಡಿದರೆ ಆ ಚಿತ್ರಕ್ಕೆ ಹೀರೋ ಶಿವಣ್ಣ. ಡೈರೆಕ್ಟರ್ ಸೂರಿ. ಹೀಗಿದ್ದರೂ ಧನಂಜಯ ಅವರ ಡಾಲಿ ಸೂಪರ್ ಡ್ಯೂಪರ್ ಹಿಟ್. ಅಭಿಮಾನಿಗಳಿಗಷ್ಟೇ ಅಲ್ಲ, ಸ್ವತಃ ಶಿವಣ್ಣ ಡಾಲಿಯ ನಟನೆಗೆ ಫಿದಾ ಆದರು. ಆಗ ಧನಂಜಯ ಹಿಂದೆ ಬಂದ ಹೆಸರೇ ಡಾಲಿ. ನಟರಾಕ್ಷಸ ಎಂಬ ಬಿರುದು ಹುಟ್ಟಿದ್ದೇ ಆಗ.

ಇದಾದ ಮೇಲೆ ರಾಮ್ ಗೋಪಾಲ್ ವರ್ಮಾ ಕಣ್ಣಿಗೆ ಬಿದ್ದು, ತೆಲುಗಿನಲ್ಲಿ ಭೈರವ ಗೀತ ಮಾಡಿದರು. ಸುಕುಮಾರ್ ಕಣ್ಣಿಗೆ ಬಿದ್ದು ಪುಷ್ಪಕ್ಕೆ ವಿಲನ್ ಆದರು. ದುನಿಯಾ ವಿಜಯ್ ಜೊತೆ ಸಲಗದಲ್ಲೊಂದು ಕ್ಯಾರೆಕ್ಟರ್ ಮಾಡಿದರು. ಪುನೀತ್ ಜೊತೆ ಯುವರತ್ನಕ್ಕೆ ವಿಲನ್ ಆದರು. ಹೀಗೆ ವಿಲನ್ ಪಾತ್ರಗಳಲ್ಲಿ ನಟಿಸುತ್ತಲೇ ಬಡವ ರಾಸ್ಕಲ್ ಚಿತ್ರವನ್ನು ನಿರ್ಮಾಣ ಕೂಡ ಮಾಡಿದರು. ಸಿನಿಮಾ ಸೂಪರ್ ಹಿಟ್.

ರತ್ನನ್ ಪ್ರಪಂಚ, ಮಾನ್ಸೂನ್ ರಾಗ, ಭೈರಾಗಿ, ಹೆಡ್ ಬುಷ್.. ಹೀಗೆ ಪ್ರತಿ ಚಿತ್ರದಲ್ಲೂ ವಿಭಿನ್ನತೆಯ ಹಾದಿ ತುಳಿದ ಡಾಲಿ, ನಟನಷ್ಟೇ ಅಲ್ಲ, ಅವರೊಳಗೊಬ್ಬ ಸಾಹಿತಿಯೂ ಇದ್ದಾನೆ. ಡಾಲಿಯಾಗಿ ಪೊಲೀಸರಿಂದ ಹೊಡೆತ ತಿಂದಿದ್ದ ಧನಂಜಯ, ಈಗ ಗುರುದೇವ್ ಹೊಯ್ಸಳನಾಗಿ ಬಂದಿದ್ದಾರೆ. ಇದು ಅವರ 25ನೇ ಸಿನಿಮಾ.

ಒಬ್ಬ ನಟನ ಕೆರಿಯರಿನಲಿ 25ನೇ ಸಿನಿಮಾ ಎನ್ನುವುದು ಒಂದು ಮೈಲುಗಲ್ಲೇ ಸರಿ. ಆ ಮೈಲುಗಲ್ಲಿನಲ್ಲಿ ಡಾಲಿಗೆ ದೊಡ್ಡ ಯಶಸ್ಸು ಸಿಗಲಿ.