ಸ್ಯಾಂಡಲ್`ವುಡ್ ಕ್ವೀನ್, ಮೋಹಕ ತಾರೆ, ಪದ್ಮಾವತಿ.. ಹೀಗೆ ಅಭಿಮಾನಿಗಳಿಂದ ಕರೆಸಿಕೊಳ್ಳೋ ನಟಿ ರಮ್ಯಾ, ವಯಸ್ಸು 40 ದಾಟಿದ್ದರೂ ಸೃಷ್ಟಿಸಿರೋ ಕ್ರೇಜ್ ಬೇರೆ. ಹೀಗಾಗಿಯೇ ಈ ಬಾರಿ ಶುರುವಾದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಮೊದಲ ಅತಿಥಿಯಾಗಿ ನಟಿ ರಮ್ಯಾ ಬಂದಿದ್ದರು. ನಟಿಯಾಗಿ, ರಾಜಕಾರಣಿಯಾಗಿ, ಒಮ್ಮೆ ಸಂಸದೆಯಾಗಿ, ರಾಷ್ಟ್ರೀಯ ಕಾಂಗ್ರೆಸ್‍ನಲ್ಲಿ ಮಹತ್ವದ ಹುದ್ದೆ ನಿರ್ವಹಿಸಿ.. ಇದೀಗ ಮತ್ತೊಮ್ಮೆ ಸಿನಿಮಾ ರಂಗಕ್ಕೆ ನಿರ್ಮಾಪಕಿಯಾಗಿ ಬಂದಿರುವ ರಮ್ಯಾ ಸಾಧಕರ ಕುರ್ಚಿಯಲ್ಲಿ ಕೂರಲು ಬೇಕಾದ ಅರ್ಹತೆಯನ್ನೇನೋ ಹೊಂದಿದ್ದರು. ಆದರೆ ಕಾರ್ಯಕ್ರಮ ಮುಗಿದ ಮೇಲೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.
ಅಭಿ ಚಿತ್ರದ ಮೂಲಕ ಪುನೀತ್ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಬಂದ ರಮ್ಯಾ, ಪಾರ್ವತಮ್ಮ ರಾಜಕುಮಾರ್ ಬಗ್ಗೆ ಅಭಿಮಾನದಿಂದ ಮಾತನಾಡಿದರು. ಶಿವಣ್ಣ ತಮ್ಮ ಬಗ್ಗೆ ವಿಡಿಯೋ ಮೂಲಕ ಮಾತನಾಡಿದ್ದು ನೋಡಿ ಥ್ರಿಲ್ ಆದರು. ತಮ್ಮ ಬಾಲ್ಯ, ಕಾಲೇಜು ದಿನ, ರಾಜಕಾರಣ, ರಾಹುಲ್ ಗಾಂಧಿ ನೀಡಿದ ಧೈರ್ಯ.. ಹೀಗೆ ಎಲ್ಲವನ್ನೂ ಹೇಳಿಕೊಂಡರು. ಆದರೆ ಟ್ರೋಲ್ ಆಗಿದ್ದು ಮಾತ್ರ ವಿಪರೀತ ಎನ್ನುವ ಇಂಗ್ಲಿಷಿಗೆ.
ಕಾರ್ಯಕ್ರಮ ಪ್ರಾರಂಭಕ್ಕೂ ಮೊದಲು ಝೀ ಕನ್ನಡದ ರಾಘವೇಂದ್ರ ಹುಣಸೂರು ಅವರಿಗೆ ಒಂದು ಪ್ರಶ್ನೆ ಬಂದಿತ್ತು. ಡಾ.ಬ್ರೊ ಅವರನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕರೆತನ್ನಿ ಎಂಬ ಅಭಿಪ್ರಾಯ ಕೇಳಿತ್ತು. ಆ ಬಗ್ಗೆ ಮಾತನಾಡುತ್ತಾ ಟಿವಿ ನೋಡುವ ಹಿರಿಯರಿಗೆ, ಅಜ್ಜ-ಅಜ್ಜಿಯರಿಗೆ ಡಾ.ಬ್ರೋ ಗೊತ್ತಿಲ್ಲ ಎಂದಿದ್ದರು ರಾಘವೇಂದ್ರ. ಅದನ್ನೇ ಇಟ್ಟುಕೊಂಡು ಮೊದಲು ಶುರುವಾದ ಟ್ರೋಲ್ ನಟಿ ರಮ್ಯಾಗೆ ಕನ್ನಡ ಬರಲ್ವಾ ಎಂಬಲ್ಲಿಗೆ ಹೋಗಿದೆ.
ನಮ್ಮ ಅಜ್ಜ-ಅಜ್ಜಿಯರಿಗೂ ಇಂಗ್ಲಿಷ್ ಬರಲ್ಲ ಎಂದು ಶುರುವಾದ ಟ್ರೋಲ್ ಕೊನೆಗೆ ಬಂದು ನಿಂತಿದ್ದು ಕನ್ನಡದ ನಟಿಯಾಗಿ, ಕನ್ನಡತಿಯಾಗಿ, ಕರ್ನಾಟಕದ ಸಂಸದೆಯೂ ಆಗಿದ್ದ, ಮಂಡ್ಯದ ಹುಡುಗಿಗೆ ಕನ್ನಡ ಬರಲ್ಲ ಅಂದ್ರೆ ಏನರ್ಥ ಎಂಬ ಮಟ್ಟಕ್ಕೆ ಬಂದು ನಿಂತಿದೆ. ನೆಟ್ಟಿಗರ ಕಮೆಂಟುಗಳಂತೂ ವಿಭಿನ್ನವಾಗಿವೆ.
ನನ್ನಜ್ಜಿಗೆ ರಮ್ಯಾ ಅವರ ಪರಿಚಯ ಇದೆ. ಆದರೆ ಅವರಿಗೆ ಇಂಗ್ಲಿಷ್ ಗೊತ್ತಿಲ್ಲ. ಹಾಗಾಗಿ ಅವರು ಟಿವಿ ಆಫ್ ಮಾಡಿ ಹೋಗಿ ಮಲಗಿದ್ರು
ಬರೀ ಇಂಗ್ಲಿಷ್ ಮಾತಾಡೋದೇ ಆಯ್ತು. ಸಾಧನೆ ಮಾಡಿರೋದು ಇಲ್ಲಿನ ಭಾಷೆಯಿಂದ…
ಈ ಸೀಸನ್ನಲ್ಲಿ ವೀಕೆಂಡ್ ವಿತ್ ರಮೇಶ್ ಯಾಕೆ ಇಂಗ್ಲಿಷ್ ವರ್ಷನ್ ಮಾಡಿದ್ದಾರೆ? ಕನ್ನಡ ಸಬ್ಟೈಟಲ್ ಆದ್ರೂ ಹಾಕ್ರೋ ಕೆಳಗೆ..
ಇದು ವೀಕೆಂಡ್ ವಿತ್ ರಮೇಶಾ..? ರಮೇಶ್ ಹಾ? ಅಥವಾ ವೀಕೆಂಡ್ ವಿತ್ ಇಂಗ್ಲಿಷಾ..?
ನಿಮ್ಮ ಮೇಲೆ ಪ್ರೀತಿ ಅಭಿಮಾನ ಜಾಸ್ತಿ ಇದೆ. ಆದರೆ ನೀವು ಕನ್ನಡ ಜಾಸ್ತಿ ಬಳಸದೆ ಇದ್ದದ್ದು ಖಂಡಿತ ತಪ್ಪು..
ಹೀಗೆ ಚಿತ್ರವಿಚಿತ್ರವಾಗಿ ರಮ್ಯಾ ಅವರನ್ನು ಹಾಗೂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನೂ ಲೇವಡಿ ಮಾಡುತ್ತಿದ್ದಾರೆ.