ಶಿವರಾಜ್ ಕುಮಾರ್ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾಗೆ ಎಸ್ ಎಂದಿದ್ದಾರೆ. ಥಿಯೇಟರಿನಲ್ಲಿ ಹಲ್ ಚಲ್ ಎಬ್ಬಿಸುತ್ತಿರುವ ಕಬ್ಜ ಚಿತ್ರದ ಗುಂಗಿನಲ್ಲಿರುವಾಗಲೇ ಶಿವಣ್ಣ-ಉಪ್ಪಿ ಅರ್ಜುನ್ ಜನ್ಯ ಚಿತ್ರಕ್ಕೆ ಕೈಜೋಡಿಸಿದ್ದಾಗಿದೆ. 45 ಚಿತ್ರದಲ್ಲಿ ಶಿವಣ್ಣ-ಉಪ್ಪಿಗೆ ಅರ್ಜುನ್ ಜನ್ಯ ಡೈರೆಕ್ಟರ್. ಇದರ ಜೊತೆ ರಜನಿಕಾಂತ್ ಜೊತೆ, ಧನುಷ್ ಜೊತೆ, ಪ್ರಭುದೇವ ಜೊತೆ, ಡಾಲಿ ಧನಂಜಯ ಜೊತೆ ನಟಿಸುತ್ತಿರುವ ಶಿವಣ್ಣ, ಇದೀಗ ಗಣೇಶ್ ಜೊತೆ ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರೆ. ಇಂತಹದ್ದೊಂದು ಮೆಗಾ ಕಾಂಬಿನೇಶನ್ನ ಸಿನಿಮಾ ಸದ್ಯದಲ್ಲೇ ಸೆಟ್ಟರಲಿದ್ದು, ಅದಕ್ಕೆ ವೇದಿಕೆ ಸಿದ್ಧಗೊಂಡಿದೆ. ಈ ಸಿನಿಮಾವನ್ನು ‘ಕೋಟಿಗೊಬ್ಬ’ ನಿರ್ಮಾಪಕ ಸೂರಪ್ಪ ಬಾಬು ನಿರ್ಮಾಣ ಮಾಡಲಿದ್ದಾರೆ.
ಈ ಬಾರಿ ಶಿವರಾಜ್ಕುಮಾರ್ ಮತ್ತು ಗಣೇಶ್ರ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ಕೆ.ಎಸ್. ರವಿಕುಮಾರ್ ನಿರ್ದೇಶನ ಮಾಡಲಿದ್ದಾರೆ. ಪಡೆಯಪ್ಪ, ಮುತ್ತು, ಲಿಂಗಾ, ದಶಾವತರಂ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ರವಿಕುಮಾರ್ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ಸುದೀಪ್ ಅವರ ಕೋಟಿಗೊಬ್ಬ-2 ಸಿನಿಮಾವನ್ನು ಇದೇ ರವಿಕುಮಾರ್ ನಿರ್ದೇಶನ ಮಾಡಿದ್ದರು. ಈಗ ಮತ್ತೊಮ್ಮೆ ಕನ್ನಡಕ್ಕೆ ಈ ಮೆಗಾ ಕಾಂಬಿನೇಶನ್ನ ಸಿನಿಮಾ ನಿರ್ದೇಶನ ಮಾಡಲು ಬರುತ್ತಿದ್ದಾರೆ. ಈಗಾಗಲೇ ರವಿಕುಮಾರ್ ಕಥೆ ಹೇಳಿ ಇಬ್ಬರೂ ನಾಯಕರನ್ನು ಒಪ್ಪಿಸಿದ್ದಾರೆ. ಸದ್ಯದಲ್ಲೇ ಮುಹೂರ್ತ ನಡೆಯಲಿದೆ.
ಸದ್ಯ ಶಿವಣ್ಣ ತಮಿಳಿನ ಕ್ಯಾಪ್ಟನ್ ಮಿಲ್ಲರ್, ಜೈಲರ್ ಕನ್ನಡದ ಘೋಸ್ಟ್, ಕರಟಕ ದಮನಕ ಸೇರಿದಂತೆ ನಾಲ್ಕೈದು ಸಿನಿಮಾಗಳ ಚಿತ್ರೀಕರಣ ಮುಗಿಸಬೇಕಿದೆ. ಇವೆಲ್ಲವೂ ಮುಗಿದ ನಂತರ ಅರ್ಜುನ್ ಜನ್ಯ ಅವರ ‘45’ ಮತ್ತು ‘ಭೈರತಿ ರಣಗಲ್’ ಸಿನಿಮಾಗಳು ಆರಂಭವಾಗಲಿದೆ. ಇವುಗಳನ್ನು ಮುಗಿಸಿ ಹೊಸ ಸಿನಿಮಾಗೆ ಕಾಲಿಡುತ್ತಾರೋ ಅಥವಾ ಇವುಗಳ ನಡುವೆಯೇ ಡೇಟ್ಸ್ ಹೊಂದಿಸಿಕೊಂಡು ಹೊಸ ಸಿನಿಮಾ ಮಾಡುತ್ತಾರೋ ಕಾದು ನೋಡಬೇಕಿದೆ. ಗಣೇಶ್ ಸಹ ‘ಬಾನ ದಾರಿಯಲ್ಲಿ’ ಸಿನಿಮಾದ ಪ್ರಚಾರದ ಕಾರ್ಯದಲ್ಲಿದ್ದಾರೆ.