ನಮ್ಮಿಬ್ಬರಿಗೆ ನಿಮ್ಮೆಲ್ಲರ ಆಶೀರ್ವಾದ ಬೇಕು..
ಇಂತಾದ್ದೊಂದು ಅಡಿಬರಹ ಕೊಟ್ಟು ಇತ್ತೀಚೆಗೆ ವಿಡಿಯೋ ಬಿಟ್ಟಿದ್ದರು ಪವಿತ್ರಾ ಲೋಕೇಶ್ ಮತ್ತು ನರೇಶ್. ಒಂದು ಕಡೆ ಇಬ್ಬರ ಪ್ರೀತಿ ಗುಟ್ಟಾಗಿಯೇನೂ ಉಳಿದಿಲ್ಲವಾದ್ದರಿಂದ ಇದು ರಿಯಲ್ ಮದುವೆಯೇ ಇರಬೇಕು ಎಂದು ಜನ ಅಂದುಕೊಂಡಿದ್ದರು. ಆದರೆ ಅಸಲಿ ಕಥೆ ಅದಲ್ಲ. ಬೇರೆಯೇ ಇದೆ ಎನ್ನುವುದು ಈಗ ಗೊತ್ತಾಗಿದೆ.
ಯಾಕೆಂದರೆ, ನರೇಶ್ ಅವರು ತಮ್ಮ ಬ್ಯಾನರ್ನ ಮೂಲಕ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಚಿತ್ರಕ್ಕೆ ಕನ್ನಡದಲ್ಲಿ 'ಮತ್ತೆ ಮದುವೆ' ಮತ್ತು ತೆಲುಗಿನಲ್ಲಿ 'ಮಳ್ಳಿ ಪೆಳ್ಳಿ' ಎಂದು ಟೈಟಲ್ ಇಟ್ಟಿದ್ದಾರೆ. ಅಂದಹಾಗೆ, ಈ ಸಿನಿಮಾಗೆ ಪವಿತ್ರಾ ಲೋಕೇಶ್ ಹೀರೋಯಿನ್.
ನರೇಶ್ ಮತ್ತು ಪವಿತ್ರಾ ಒಟ್ಟಿಗೆ ನಟಿಸುತ್ತಿರುವ ಈ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಎಂ ಎಸ್ ರಾಜು. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧತೆ ಆರಂಭವಾಗಿದೆ. ಈವರೆಗೂ ಟ್ವೀಟರ್ನಲ್ಲಿ ನರೇಶ್ ಹಂಚಿಕೊಂಡಿದ್ದ ವಿಡಿಯೋ ತುಣುಕುಗಳು ಇದೇ ಸಿನಿಮಾದ್ದು ಎನ್ನಲಾಗಿದೆ.
ಇನ್ನು, ಜಯಸುಧಾ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ. ವನಿತಾ ವಿಜಯಕುಮಾರ್, ಅನನ್ಯಾ ನಗೆಲ್ಲ, ರೋಷನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮೂರಿ ಹಾಗೂ ಮಧೂ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಎಂ.ಎಸ್. ರಾಜು ತೆಲುಗಿನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರು. ನಿರ್ದೇಶಕರೂ ಹೌದು. ಒಕ್ಕಡು, ವರ್ಷಂ, ನುವ್ವಸ್ತಾನಂಟೇ ನೇನೊದ್ದಂಟಾನಾ, ದೇವಿ, ಮನಸಂತಾ ನುವ್ವೇ.. ಇತ್ಯಾದಿ ಚಿತ್ರಗಳನ್ನು ನಿರ್ಮಾಣ ಮಾಡಿದವರು. ಮುಂಗಾರು ಮಳೆ ಯನ್ನು ತೆಲುಗಿನ ವಾನ ಹೆಸರಲ್ಲಿ ರೀಮೇಕ್ ಮಾಡಿ ನಿರ್ದೇಶಕರಾದವರು. ನಂತರವೂ ಸಿನಿಮಾ ನಿರ್ದೇಶನ ಮಾಡಿದ್ದರಾದರೂ ಹದಿಹರೆಯದ ಹುಚ್ಚು ಆಸೆಗಳನ್ನು ತೆರೆಯ ಮೇಲೆ ಹಸಿಹಸಿಯಾಗಿ ತೋರಿಸುವುದರಲ್ಲಿ ಎಕ್ಸ್‍ಪರ್ಟ್ ಆಗಿದ್ದಾರೆ. ಹಾಗಾದರೆ.. ಈ ಮತ್ತೆ ಮದುವೆಯಲ್ಲೂ ಅಂತಹ ದೃಶ್ಯಗಳಿರುತ್ತವಾ..? ನಿರೀಕ್ಷೆ ಪ್ರೇಕ್ಷಕರದ್ದು.