ಶಿಲ್ಪಾಶೆಟ್ಟಿ ಮಂಗಳೂರಿನವರು. ಹೀಗಾಗಿ ಕನ್ನಡದವರು ಎಂದು ನಾವೆಲ್ಲ ಗೌರವಿಸ್ತೇವೆ. ಪ್ರೀತಿಸ್ತೇವೆ. ನಿಜ. ಆದರೆ ಆ ಶಿಲ್ಪಾಶೆಟ್ಟಿಗೆ ಕನ್ನಡವೇ ಗೊತ್ತಿಲ್ಲವಾ..? ಹೀಗೊಂದು ಅನುಮಾನ ಮೂಡಿದೆ. ಅದಕ್ಕೆ ಕಾರಣ ಸ್ವತಃ ಶಿಲ್ಪಾಶೆಟ್ಟಿಯೇ.
ಯುಗಾದಿ ಹಬ್ಬದಂದು `ಕೆಡಿ’ ಚಿತ್ರದ ಶಿಲ್ಪಾ ಶೆಟ್ಟಿ ಪಾತ್ರದ ಸತ್ಯವತಿ ಲುಕ್ನ ರಿವೀಲ್ ಮಾಡಿದ್ದರು. ತೊಂಬತ್ತರ ದಶಕದ ಸೀರೆ, ಹೇರ್ಸ್ಟೈಲ್, ಕನ್ನಡಕ ಹಾಗೂ ಕೈಯಲ್ಲೊಂದು ಬ್ಯಾಗ್ ಹಿಡಿದು ನಡೆದು ವಿಂಟೇಜ್ ಕಾರೊಂದರ ಮುಂದೆ ಶಿಲ್ಪಾ ಶೆಟ್ಟಿ ನಡೆದು ಬರುತ್ತಿರುವ ಪೋಸ್ಟರ್ ಇದಾಗಿದ್ದು, ಈ ಪೋಸ್ಟರ್ ಅನ್ನು ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಪೋಸ್ಟರ್ ಹಂಚಿಕೊಳ್ಳುವಾಗ ಶಿಲ್ಪಾ ಶೆಟ್ಟಿ ಬರೆದಿರುವ ಸಾಲುಗಳು ಇದೀಗ ಕನ್ನಡಿಗರ ಕೋಪಕ್ಕೆ ಕಾರಣವಾಗಿವೆ. ಶಿಲ್ಪಾ ಶೆಟ್ಟಿ ತೆಲುಗಿನಲ್ಲಿ `ಯುಗಾದಿ ಶುಭಾಕಾಂಕ್ಷಲು’ ಎಂದು ತೆಲುಗಿನಲ್ಲಿ ಶುಭ ಕೋರಿದ್ದಾರೆ.
ಮಾಡ್ತಿರೋದು ಕನ್ನಡ ಸಿನಿಮಾ. ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ರಿಲೀಸ್ ಆಗುತ್ತದೆಯಾದರೂ ಮೊದಲು ಕನ್ನಡ ಇರಬೇಕು ತಾನೇ. ಇಲ್ಲ. ಸತ್ಯವತಿ ಅನ್ನೋ ಪಾತ್ರದಲ್ಲಿ ನಟಿಸುತ್ತಿರೋ ಶಿಲ್ಪಾಶೆಟ್ಟಿ, ಸತ್ಯವಾಗಿಯೂ ತಮಗೆ ಕನ್ನಡ ಗೊತ್ತಿಲ್ಲ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಧ್ರುವ ಸರ್ಜಾ ಹೀರೋ ಆಗಿರುವ ಚಿತ್ರದಲ್ಲಿ ರವಿಚಂದ್ರನ್ ಅಣ್ಣಯ್ಯಪ್ಪ ಪಾತ್ರದಲ್ಲಿ ನಟಿಸುತ್ತಿದ್ದರೆ, ಶಿಲ್ಪಾಶೆಟ್ಟಿ ಸತ್ಯವತಿಯಾಗಿದ್ದಾರೆ. 2005ರಲ್ಲಿ ಉಪೇಂದ್ರ ಜೊತೆ ಆಟೋ ಶಂಕರ್ ಚಿತ್ರದಲ್ಲಿ ನಟಿಸಿದ್ದ ಶಿಲ್ಪಾಶೆಟ್ಟಿ ಆನಂತರ ಕನ್ನಡದಲ್ಲಿ ನಟಿಸಿಲ್ಲ. ಆದರೆ ಶಿಲ್ಪಾಶೆಟ್ಟಿಗೆ ಕನ್ನಡದಲ್ಲಿ ಸಖತ್ ಬ್ರೇಕ್ ಕೊಟ್ಟಿದ್ದ ಸಿನಿಮಾ ಪ್ರೀತ್ಸೋದ್ ತಪ್ಪಾ ಹಾಗೂ ಒಂದಾಗೋಣ ಬಾ. ಎರಡೂ ಚಿತ್ರಗಳಿಗೆ ರವಿಚಂದ್ರನ್ ಹೀರೋ ಮತ್ತು ಡೈರೆಕ್ಟರ್. ಈಗ ಮತ್ತೊಮ್ಮೆ ರವಿ-ಶಿಲ್ಪಾ ಒಂದಾಗುತ್ತಿದ್ದಾರೆ. ಜೋಗಿ ಪ್ರೇಮ್ ಎಂದಿನಂತೆ ಶಿಲ್ಪಾ ಶೆಟ್ಟಿಗೆ ರೆಟ್ರೊ ಲುಕ್ ಕೊಟ್ಟಿದ್ದಾರೆ. ಸಖತ್ತಾಗಿಯೇ ಇದೆ. ಆದರೆ.. ಕನ್ನಡ.. ಎಲ್ಲಿ..? ಕನ್ನಡತಿಯೇ ಕನ್ನಡ ಮರೆತರೆ ಹೇಗೆ..? ತೆಲುಗಿನಲ್ಲಿ ಶುಭಾಕಾಂಕ್ಷುಲು ಅನ್ನೋಕೆ ಬರೋ ಶಿಲ್ಪಾಗೆ, ಶುಭಾಶಯಗಳು ಅನ್ನೋ ಕನ್ನಡ ಪದ ಗೊತ್ತಿಲ್ಲವಾ?