ಕನ್ನಡದ ಕಾಂತಾರ ಕನ್ನಡದಲ್ಲಿ ಬಿಡುಗಡೆಯಾದ ನಂತರ ಸಂಚಲನ ಸೃಷ್ಟಿಸಿದ ಸಿನಿಮಾ. ಮೊದಲ ದಿನವೇ ಈ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತು. ಪರಭಾಷೆ ಪ್ರೇಕ್ಷಕರು ಕೂಡ ಆಸಕ್ತಿ ತೋರಿಸಿದ್ದರಿಂದ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಲಾಯಿತು. ಎಲ್ಲ ಭಾಷೆಗಳಿಂದಲೂ ಉತ್ತಮ ಕಲೆಕ್ಷನ್ ಮಾಡಿತ್ತು. ಒಟಿಟಿ ಪ್ರೇಕ್ಷಕರಿಗಾಗಿ ಇಂಗ್ಲಿಷ್ ವರ್ಷನ್ ಕೂಡ ರಿಲೀಸ್ ಆಗಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಟಾಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಗಳಿಗೆ ಡಬ್ ಮಾಡಲಾಗುತ್ತಿರುವುದು ವಿಶೇಷ. ಈ ಬಗ್ಗೆ ನಿರ್ಮಾಣ ಸಂಸ್ಥೆ ಅಪ್‌ಡೇಟ್ ನೀಡಿದೆ.
ಅಂತಾರಾಷ್ಟ್ರೀಯ ಪ್ರೇಕ್ಷಕರಿಂದ ಬೇಡಿಕೆ ಬಂದಿರುವುದಕ್ಕೆ ಧನ್ಯವಾದಗಳು. ಇಟಾಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಯಲ್ಲಿ `ಕಾಂತಾರ’ ಚಿತ್ರವನ್ನು ಎಡಿಟ್ ಮಾಡಲಾಗುತ್ತಿದೆ ಎಂದು ಇಟಾಲಿಯನ್ ಭಾಷೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ. ಜಪಾನಿ ಭಾಷೆಯಲ್ಲೂ ರಿಲೀಸ್ ಮಾಡಿ ಎಂದು ನೆಟ್ಟಿಗರು ಬೇಡಿಕೆ ಇಟ್ಟಿದ್ದಾರೆ.
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ಸಿನಿಮಾ ಎಲ್ಲ ಭಾಷೆಗಳಲ್ಲೂ ಮೋಡಿ ಮಾಡಿದೆ. ಆಸ್ಕರ್ ಗೆಲ್ಲದೇ ಹೋದರೂ ಆಸ್ಕರ್ ಬಾಗಿಲು ತಟ್ಟಿದೆ. ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಗಳಿಗೆ ಸ್ಪೆಷಲ್ ಶೋ ಆಗಿದೆ. ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಮೂಲಕ ವಿಶ್ವಸಂಸ್ಥೆಯಲ್ಲಿ ಕನ್ನಡದ ಡಿಂಡಿಮ ಮೊಳಗಿಸಿದ್ದಾರೆ. ಇದರ ನಡುವೆಯೇ ವಿದೇಶಿ ಭಾಷೆಗಳಲ್ಲಿಯೂ ಡಬ್ ಆಗಿ ಬಿಡುಗಡೆಯಾಗುತ್ತಿರುವುದು ಕನ್ನಡಿಗರ ಹೆಮ್ಮೆಯೂ ಹೌದು. ಅಭಿಮಾನಿಗಳ ಬೇಡಿಕೆಗೆ ಸ್ಪಂದಿಸಿದ್ದರೆ ಕಾಂತಾರ ಜಪಾನಿ ಭಾಷೆಗೂ ಡಬ್ ಆಗಿ ರಿಲೀಸ್ ಆಗಲಿದೆ.