ಅರೇ.. ಇದು ಎಂಥಾ ಭಾವನೆ..
ಹೊಯ್ಸಳ ಚಿತ್ರದ ರೊಮ್ಯಾಂಟಿಕ್ ಸಾಂಗ್‍ನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಗಾಯಗೊಂಡಿರುವ ಹೊಯ್ಸಳನ ಗಾಯಕ್ಕೆ ಡೆಟಾಲ್ ಹಚ್ಚುತ್ತಿರುವ ಅಮೃತಾ ಅಯ್ಯಂಗಾರ್.. ಅಮೃತಾ ಕಾಲಿಗೆ ಗೆಜ್ಜೆ ತೊಡಿಸುತ್ತಿರುವ ಡಾಲಿ ಧನಂಜಯ.. ಪ್ರೀತಿಯ ಲೋಕದ ಈ ಭಾವನೆಗೆ ಸಾಹಿತ್ಯ ನೀಡಿದ ಯೋಗರಾಜ್ ಭಟ್.. ಎಲ್ಲರೂ ಪ್ರೀತಿಯಲ್ಲಿ ಮಿಂದೇಳುತ್ತಾರೆ..
ಪಿಸುನುಡಿಯಲ್ಲು ಸುಖವಿದೆಯೆಂದು ಸನಿಹ ತಿಳಿಸಿ ಹೇಳಿದೆ ಉಸಿರಿನ ಶಾಖ ತವಕದ ತೂಕ ಈ ಹೃದಯ ತಡೆಯದಾಗಿದೆ
ರೂಪಸಿ ನೀನು ರಾಕ್ಷಸ ನಾನು ಮುತ್ತಿನ ಸೋನೆ ಸುರಿಸುವೆ ಏನೇ ಅದರದ ಅಮೃತ ಈ ಪ್ರಾಣ ಉಳಿಸಲಿ..
ಎಂಬ ಸಾಲುಗಳು ಹೃದಯಕ್ಕೆ ಮುತ್ತಿಗೆ ಹಾಕುತ್ತವೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಹರಿಚರಣ್ ಮಧುರವಾಗಿ ಹಾಡಿದ್ದಾರೆ. ಗುರುದೇವ್ – ಗಂಗಾಳ ಕ್ಯೂಟ್ ರೊಮಾನ್ಸ್ ಅನ್ನು ನಾವು ಈ ಹಾಡಿನಲ್ಲಿ ನೋಡಬಹುದು. ತನ್ನ ಮಡದಿ- ಮನದರಸಿಗೆ ಮನದಾಳದ ಮಾತುಗಳನ್ನು ಈ ಹಾಡಿನ ಮೂಲಕ ಡಾಲಿ ಪ್ರೀತಿಯಿಂದ ವ್ಯಕ್ತಪಡಿಸುತ್ತಿದ್ದಾರೆ. ಬಡವ ರಾಸ್ಕಲ್ ನಲ್ಲಿ ಉಡುಪಿ ಹೋಟೆಲು ಹಾಡಿನಿಂದ ತಮ್ಮ ಜೋಡಿಯ ಮೋಡಿ ಮಾಡಿದ್ದ ಧನಂಜಯ ಹಾಗೂ ಅಮೃತಾ ಐಯ್ಯಂಗಾರ್ ಈಗ
ಅರೇ ಇದು ಎಂಥಾ ಭಾವನೆ..
ಎನ್ನುವ ಮೆಲೋಡಿ ಲವ್ ಸಾಂಗ್ ನಲ್ಲಿ ಬಹಳ ಹೋಮ್ಲಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ಟೈಟಲ್ ಸಾಂಗ್ ರಿಲೀಸ್ ಆಗಿದ್ದು ಭಾರಿ ಸದ್ದು ಮಾಡಿತ್ತು. ಪೊಲೀಸ್ ಡ್ರಾಮಾ ಸಿನಿಮಾ ಆಗಿರುವ ಹೊಯ್ಸಳ ಚಿತ್ರದ ಟೀಸರ್ ರಿಲೀಸ್ ಆಗಿ ಭರವಸೆ ಮೂಡಿಸಿತ್ತು. ಇನ್ನು ಡಾಲಿ ಧನಂಜಯ್ರ 25ನೇ ಸಿನಿಮಾ ಹೊಯ್ಸಳ ಮಾರ್ಚ್ 30 ರಂದು ತೆರೆಮೇಲೆ ಅಪ್ಪಳಿಸಲಿದೆ. ಸಿನಿಮಾದಲ್ಲಿ ಅಮೃತಾ ಐಯ್ಯಂಗಾರ್ ನಾಯಕಿ, ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಸೇರಿದಂತೆ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ವಿಜಯ್ ಎನ್ ನಿರ್ದೇಶನ ಮಾಡಿದ್ದು, ಕೆಆರ್ಜಿ ಸ್ಟುಡಿಯೋ ಅಡಿಯಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಾಣ ಮಾಡಿದ್ದಾರೆ.