ಒಬ್ಬ ನಟ ದೊಡ್ಡ ಮಟ್ಟಕ್ಕೆ ಏರಿದರೆ ಸಹಜವಾಗಿಯೇ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ. ಫ್ಯಾನ್ಸ್ ಸಂಖ್ಯೆ ಸಾವಿರ, ಲಕ್ಷಗಳಿಂದ ಕೋಟಿಗಳಿಗೆ ಏರುತ್ತದೆ. ಆಗ ನಟ ಎಲ್ಲೇ ಹೋದರೂ.. ಬಂದರೂ.. ಅಭಿಮಾನಿಗಳ ಜೈಕಾರ ಇರುತ್ತದೆ. ಇದರ ನಡುವೆಯೇ ಆ ವ್ಯಕ್ತಿಯ ಗೆಲುವು ಒಂದಷ್ಟು ಶತ್ರುಗಳನ್ನೂ ಹುಟ್ಟುಹಾಕುತ್ತದೆ. ಅವನೇನ್ ಮಹಾ.. ನಾನ್ ನೋಡದೇ ಇರೋದಾ.. ನಾನ್ ಮಾಡದೇ ಇರೋದಾ.. ಅವನಿಗ ನಟನೆಯೇ ಬರಲ್ಲ.. ಹೀಗೆ ನೂರಾರು ಟೀಕೆಗಳು ಬರುತ್ತಲೇ ಇರುತ್ತವೆ. ಕೆಲವೊಮ್ಮೆ ನಟರ ತಪ್ಪು ಕೂಡಾ ಇರುತ್ತದೆ. ಗೆಲುವು ಸಿಕ್ಕ ನಂತರ ಆ ಕಲಾವಿದ ಅಹಂಕಾರದಲ್ಲಿ ಮೈಮರೆತರೆ, ಇದು ನನ್ನ ಸಾಧನೆ, ನಿರ್ದೇಶಕರದ್ದೇನ್ ಮಹಾ ಎಂದುಕೊಂಡರೆ.. ಡೌಟೇ ಇಲ್ಲದಂತೆ ಆತನ ಕೆರಿಯರ್ ಖತಂ ಆಗುತ್ತದೆ. ಟೀಕೆ ಮಾಡುವವರು ಮಾಡುತ್ತಲೇ ಇರುತ್ತಾರೆ. ಯಾವುದಕ್ಕೆ ಪ್ರತಿಕ್ರಿಯೆ ಕೊಡಬೇಕು, ಯಾವ ರೀತಿ ಕೊಡಬೇಕು ಎನ್ನುವುದು ಗೊತ್ತಿರಬೇಕಷ್ಟೆ. ಪ್ರತಿಕ್ರಿಯೆಗೂ ಅರ್ಹನಲ್ಲದ ಹಂತಕ್ಕೆ ಹೋಗಬಾರದು.
ಇತ್ತೀಚೆಗೆ ಯಶ್ ಮತ್ತು ಕೆಜಿಎಫ್ ಚಿತ್ರವನ್ನು ಟೀಕಿಸುವವರ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ. ಇತ್ತೀಚೆಗೆ ತೆಲುಗು ನಿರ್ದೇಶಕನೊಬ್ಬ ಕೆಜಿಎಫ್ ಚಿತ್ರವನ್ನು ಬಾಯಿಗೆ ಬಂದಂತೆ ಬೈದಿದ್ದ. ಆತನ ಹೆಸರು ವೆಂಕಟೇಶ್ ಮಹಾ. ಕೆಜಿಎಫ್ ಚಿತ್ರದಲ್ಲಿ ಬರುವ ತಾಯಿಯ ಪಾತ್ರವನ್ನು ಲೇವಡಿ ಮಾಡಿದ್ದ. ಜಗತ್ತಿನಲ್ಲಿ ಯಾವ ತಾಯಿಯಾದರೂ ಮಗನಿಗೆ ದೊಡ್ಡ ಮಟ್ಟದಲ್ಲಿ ಹಣ, ಚಿನ್ನ ಮಾಡು ಎನ್ನುತ್ತಾಳಾ..? ಒಳ್ಳೆ ಕೆಲಸ ಮಾಡು, ನಾಲ್ಕು ಜನಕ್ಕೆ ಒಳ್ಳೇದು ಮಾಡು ಎನ್ನುತ್ತಾಳೆ. ಆದರೆ ಕೆಜಿಎಫ್ ತಾಯಿಯ ಮಾತಿನಂತೆ ನಡೆದ ರಾಕಿಭಾಯ್ ಕೆಲಸಗಾರರಿಂದ ಚಿನ್ನವನ್ನು ತೆಗೆಸಿ ಕೊನೆಗೆ ನೀರಲ್ಲಿ ಮುಳುಗಿಸಿ ಬಿಡುತ್ತಾನೆ. ಎಂತಹ ಕಂತ್ರಿ ನಾಯಿ ಇರಬೇಡ ಆತ..ಇಂತಹ ಕಂತ್ರಿ ನಾಯಿಯ ಕಥೆಯನ್ನು ಅವರು ಸಿನಿಮಾ ಮಾಡಿದ್ದಾರೆ. ನಾವು ನೋಡಿ ಚಪ್ಪಾಳೆ ತಟ್ಟಿ ಗೆಲ್ಲಿಸಿದ್ದೇವೆ.. ಎಂದು ಲೇವಡಿ ಮಾಡಿದ್ದ.
ಆತ ಆಮೇಲೆ ಕ್ಷಮೆ ಕೇಳಿದ. ಬಳಸಿದ ಪದಗಳಿಗೆ ಕ್ಷಮೆ ಕೇಳಿದನೇ ಹೊರತು, ಕೆಜಿಎಫ್ ಟೀಕಿÀಸಿದ್ದಕ್ಕೆ ಅಲ್ಲ. ಮಹಾ ವೆಂಕಟೇಶ್ ಪ್ರಕಾರ ಕೆಜಿಎಫ್ ಈಗಲೂ ಡಬ್ಬಾ ಸಿನಿಮಾ. ಇಷ್ಟಕ್ಕೂ ಯಾರೀತ ಮಹಾ ವೆಂಕಟೇಶ್..? ಈತ ಕೇರ್ ಆಫ್ ಕಾಂಚೆರಪಾಲಂ ಮತ್ತು ಮಹೇಶಿಂಟೆ ಪ್ರತೀಕಾರಂ ಎಂಬ ಸಿನಿಮಾ ಮಾಡಿದ್ದರು. ಎರಡು ಸಿನಿಮಾ ಬಿಟ್ಟರೆ ಬೇರೆ ಚಿತ್ರಗಳಿಲ್ಲ. ಆದರೆ ಕೆಜಿಎಫ್ ಹಾಗೂ ಯಶ್ ಅವರನ್ನು ಟೀಕೆ ಮಾಡಿ ಪ್ರಚಾರಕ್ಕೆ ಬಂದಿದ್ದಂತೂ ನಿಜ.
ಇಷ್ಟಕ್ಕೂ ಸಿನಿಮಾ ಎಂದ ಮೇಲೆ ಹೀರೋ ಒಳ್ಳೆಯವನೂ ಆಗಿರುತ್ತಾನೆ. ಕೆಟ್ಟವನೂ ಆಗಿರುತ್ತಾನೆ. ನಿರ್ದೇಶಕನಾದವನು ತನ್ನ ಚಿತ್ರದಲ್ಲಿ ಪ್ರತಿ ಪಾತ್ರವನ್ನು ಅಚ್ಚುಕಟ್ಟಾಗಿಯೇ ತೋರಿಸಬೇಕು. ಕಥೆ, ನಿರೂಪಣೆ ನಾಯಕ, ನಿರ್ದೇಶಕನ ಆಯ್ಕೆ. ಒಪ್ಪುವುದು ಬಿಡುವುದು ಕಲಾವಿದನಿಗೆ ಬಿಟ್ಟಿದ್ದು. ಪ್ರೇಕ್ಷಕರು ಇಷ್ಟವಾದರೆ ನೋಡುತ್ತಾರೆ. ಹೆಚ್ಚು ಜನ ಸಿನಿಮಾ ನೋಡಿದರೆಂದ ಮಾತ್ರಕ್ಕೆ ಜನ ಕೂಡಾ ಕೆಜಿಎಫ್ ರಾಕಿಭಾಯ್‍ನಂತೆಯೇ ಯೋಚಿಸುತ್ತಾರೆಂದೇನೂ ಇಲ್ಲ. ಒಬ್ಬ ನಿರ್ದೇಶಕ ಇನ್ನೊಬ್ಬ ನಿರ್ದೇಶಕನಿಗೆ ಗೌರವ ನೀಡುವುದನ್ನು ಕಲಿಯಬೇಕು.