ಆತ ಒಳ್ಳೆಯವನೋ.. ಕೆಟ್ಟವನೋ.. ಜಡ್ಜ್‍ಮೆಂಟ್`ಗೆ ಸಿಗವಲ್ದು.. ಆದರೆ ಮಂದಿಗೆ ಬಾಳಾ ಇಷ್ಟ.. ಅಚ್ಯುತ್ ಕುಮಾರ್ ಅವರ ಧ್ವನಿ ಹಿಂದೆ ಕೇಳುತ್ತಿದ್ದರೆ, ಮುಂದೆ ಹಾಲು..ರಕ್ತ..ಬೆಂಕಿಯ ಅಭಿಷೇಕ ಮಾಡಿಕೊಂಡೇ ತೆರೆಯ ಮೇಲೆ ಕುದುರೆಯ ಮೇಲೆ ಬರುತ್ತಾರೆನೆ..ಹೊಯ್ಸಳದ ಗುರುದೇವ್. ಚಿತ್ರದಲ್ಲಿ ಡಾಲಿ ಎಸಿಪಿ ಗುರುದೇವ್ ಆಗಿ ಕಾಣಿಸಿಕೊಂಡಿದ್ದು, ಯಾವುದೋ ಗಲಾಟೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಅಧಿಕಾರಿಯ ಹೋರಾಟದ ದೃಶ್ಯಗಳನ್ನು ಟೀಸರಿನಲ್ಲಿ ತೋರಿಸಲಾಗಿದೆ.
ಬೆಳಗಾವಿ, ಅಥಣಿಯಲ್ಲಿ ನಡೆಯುವ ಕಥೆ ಇದು. ಅಂದಹಾಗೆ ಇದು ಡಾಲಿಯ 25ನೇ ಸಿನಿಮಾ ಎನ್ನುವುದೇ ವಿಶೇಷ. ಗೀತಾ ಚಿತ್ರದ ನಿರ್ದೇಶಕ ವಿಜಯ್.ಎನ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಸಂಭಾಷಣೆ ಮಾಸ್ತಿ ಅವರದು. ಧನಂಜಯ ಹಾಗೂ ಅಮೃತಾ ಅಯ್ಯಂಗಾರ್ ಜೋಡಿಯ ಚಿತ್ರವನ್ನು ಅರ್ಪಿಸಿರುವುದು ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್. ಕೆ.ಆರ್.ಜಿ ಸ್ಟುಡಿಯೋಸ್ನ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಅಜನೀಶ್ ಲೋಕನಾಥ್ ರವರು ಸಂಗೀತ ಸಂಯೋಜಿಸಿದ್ದು, ಕಾರ್ತಿಕ್ ಎಸ್ ಅವರು ಛಾಯಾಗ್ರಾಹಕರಾಗಿದ್ಡಾರೆ. ಅಚ್ಯುತ್ಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಇನ್ನೊಂದು ವಿಶೇಷವೆಂದರೆ ನೋಡುಗರ ಹೃದಯಲ್ಲಿ ಕಿಚ್ಚು ಹಚ್ಚಿದ ಹೊಯ್ಸಳ ಟೀಸರ್ ರಿಲೀಸ್ ಮಾಡಿದ್ದು ಕಿಚ್ಚ ಸುದೀಪ್. ಟೀಸರ್ ದೃಶ್ಯ ನೋಡುತ್ತಿದ್ದರೆ ಬೆಳಗಾವಿ ಗಡಿಭಾಗದ ಮರಾಠಿ ಮತ್ತು ಕನ್ನಡ ಸಂಘರ್ಷದ ಕಥೆಯಿದೆಯೇನೋ ಎಂದು ಅನ್ನಿಸದೇ ಇರದು.