` ಕಾಂತಾರ 2 ಆಯ್ತು..ಕಾಂತಾರ 1ಗೆ ಸಿದ್ಧರಾಗಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕಾಂತಾರ 2 ಆಯ್ತು..ಕಾಂತಾರ 1ಗೆ ಸಿದ್ಧರಾಗಿ
Kantara Movie Image

ಎಂಥ ಹೇಳ್ತಿರೂದು.. ನಾವ್ 2022ರಾಗ್ ನೋಡಿದ್ ಕಾಂತಾರ ಅಲ್ವಾ.. ಫಸ್ಟ್ ಬರೋದು ಫಸ್ಟ್ ಅಲ್ವಾ.. ಈಗ ಅದು ಹೇಗೆ ಂಆಡ್ತಾರೆ ಕಾಂತಾರ 1 ಚಿತ್ರವನ್ನ.. ಹಾಗಂತ ತಲೆ ಕೆಡಿಸಿಕೊಳ್ಳಬೇಡಿ. ಸುಮ್ನ ತಲೆ ಬೊಜ್ಜ ಆಗ್ತದ ಅಷ್ಟ.. ಕಾಂತಾರ ಚಿತ್ರದ ಇನ್ನೊಂದು ಪಾರ್ಟ್ ಬರೋದು ಪಕ್ಕಾ. ಆದರೆ ಅದು ಸೀಕ್ವೆಲ್ ಅಲ್ಲ, ಪ್ರೀಕ್ವೆಲ್. ಹೀಗಾಗಿ ನೀವು ನೋಡಿರೋದು ಕಾಂತಾರ 2. ಮುಂದೆ ಬರೋದು ಕಾಂತಾರ 1. ಇದನ್ನು ಖುದ್ದು ಹೇಳಿದ್ದು ಕಾಂತಾರ ಸೃಷ್ಟಿಕರ್ತ, ನಿರ್ದೇಶಕ ಮತ್ತು ನಾಯಕ ರಿಷಬ್ ಶೆಟ್ಟಿ.

ಕಾಂತಾರ ಚಿತ್ರ ಈಗಾಗಲೇ ಭಾರತದಾದ್ಯಂತ ದಾಖಲೆಗಳ ಮೇಲೆ ದಾಖಲೆ ಬರೆದಿದೆ. ಆಸ್ಕರ್ ಅಂಗಳಕ್ಕೂ ಕಾಲಿಟ್ಟು ಬಂದಿದೆ. ಆಸ್ಕರ್ ಕಿರೀಟ ಸಿಕ್ಕದೇ ಹೋದರೂ .. ಜನಮನ್ನಣೆಗಂತೂ ಕಡಿಮೆ ಇಲ್ಲ. ಅತೀ ಹೆಚ್ಚು ಪ್ರೇಕ್ಷಕರು ಚಿತ್ರಂದಿರದಲ್ಲಿ ನೋಡಿದ ಸಿನಿಮಾ ಕಾಂತಾರ ಎಂಬ ದಾಖಲೆಯೂ ಅವರದ್ದೇ. ಒಟಿಟಿಯಲ್ಲಿ, ಟಿವಿಯಲ್ಲಿ ರೇಟಿಂಗ್ ದಾಖಲೆ ಬರೆದ ಕಾಂತಾರ ಚಿತ್ರದ ಇನ್ನೊಂದು ಭಾಗ ಮಾಡಬೇಕು ಎಂಬ ಡಿಮ್ಯಾಂಡ್ ಶುರುವಾಗಿದೆ. ಈಗಾಗಲೇ ಕಾಂತಾರ ಚಿತ್ರವನ್ನ ನೆಟ್`ಫ್ಲಿಕ್ಸ್‍ನವರು ಖರೀದಿ ಮಾಡಿದ್ದು, ಅವರು ಇಂಗ್ಲಿಷಿನಲ್ಲಿ ಕಾಂತಾರವನ್ನು ತರಲಿದ್ದಾರೆ. ಅಲ್ಲಿಗೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ತುಳುವಿನಲ್ಲಿ ಬಂದಿದ್ದ ಕಾಂತಾರ, ಇಂಗ್ಲಿಷಿನಲ್ಲೂ ರಿಲೀಸ್ ಆದರೆ 7 ಭಾಷೆಗಳಲ್ಲಿ ರಿಲೀಸ್ ಆದ ದಾಖಲೆ ಬರೆಯಲಿದೆ. ಚಿತ್ರ ಶತದಿನೋತ್ಸವ ಆಚರಿಸಿದ್ದ ಹಿನ್ನೆಲೆಯಲ್ಲಿ ಚಿತ್ರತಂಡ ಬೆಂಗಳೂರು ಭಂಟರ ಭವನದಲ್ಲಿ ಶತದಿನೋತ್ಸವ ಸಮಾರಂಭ ಆಯೋಜಿಸಿತ್ತು.

ತುಳುನಾಡಿನ ಸಂಪ್ರದಾಯದಂತೆ ಅಲಂಕರಿಸಲ್ಪಟ್ಟಿದ್ದ ವೇದಿಕೆಯಲ್ಲಿ ಚಿತ್ರತಂಡದ ತಂತ್ರಜ್ಞರು, ಕಲಾವಿದರು, ಪ್ರದರ್ಶಕರು, ವಿತರಕರು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಸೇರಿದ್ದರು. ಎಲ್ಲರಿಗೂ ನೆನಪಿನ ಕಾಣಿಕೆ ನೀಡಿ, ಇಡೀ ಚಿತ್ರತಂಡ ಒಟ್ಟಿಗೇ ಊಟ ಮಾಡಿ ಕಾಂತಾರ ಶತದಿನೋತ್ಸವವನ್ನು ಹಬ್ಬದಂತೆ ಸಂಭ್ರಮಿಸಿತು.

ಈ ಚಿತ್ರದ ಯಶಸ್ಸಿಗೆ ನಾನೊಬ್ಬನೇ ಕಾರಣ ಅಲ್ಲ. ನಮ್ಮ ತಂಡ, ಕಲಾವಿದರು, ತಂತ್ರಜ್ಞರು, ಪ್ರಚಾರಕರ್ತರು, ಅಭಿಮಾನಿಗಳು, ಮಾಧ್ಯಮಗಳು, ಪ್ರೇಕ್ಷಕರು.. ಹೀಗೆ ಹಲವರ ಪಾತ್ರವಿದೆ. ಕುಂದಾಪುರದ ಕೆರಾಡಿಯಲ್ಲಿ ಹುಟ್ಟಿದ ಕಥೆಗೆ ಅಂತಾರಾಷ್ಟ್ರೀಯ ಮನ್ನಣೆ ಸಿಗಲು ಕಾರಣವಾಗಿದ್ದು ಹೊಂಬಾಳೆ. ನೀವು ಇದುವರೆಗೆ ನೋಡಿದ್ದು ಕಾಂತಾರ 2. ಇನ್ನು ಮುಂದೆ ಬರುವುದು ಕಾಂತಾರ 1 ಎಂದ ರಿಷಬ್ ಶೆಟ್ಟಿ, ಮತ್ತೊಂದು ಕಾಂತಾರವನ್ನು ಅಧಿಕೃತವಾಗಿಯೇ ಘೋಷಿಸಿದರು.

ಕಾಂತಾರ 300 ಕೇಂದ್ರಗಳಲ್ಲಿ 50 ದಿನ ಪೂರೈಸಿದ್ದರೆ, 250 ಚಿತ್ರಮಂದಿರಗಳಲ್ಲಿ 75 ದಿನ ಪೂರೈಸಿದೆ. 100 ದಿನ ಪೂರೈಸಿದ ಚಿತ್ರಮಂದಿರಗಳ ಸಂಖ್ಯೆ 100ಕ್ಕೂ ಹೆಚ್ಚು.