ಪ್ರತಿ ಚುನಾವಣೆ ಬಂದಾಗಲೂ ಕಿಚ್ಚ ಸುದೀಪ್ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಸುದ್ದಿ ಭುಗಿಲೇಳುವುದು ಎಲೆಕ್ಷನ್ ಮುಗಿದ ನಂತರ ತಣ್ಣಗಾಗುವುದು ಇದ್ದಿದ್ದೇ. ಈ ಬಾರಿಯೂ ಹಾಗೆಯೇ ಆಗಿದೆ. ತಿಂಗಳ ಹಿಂದೆ ಹಲವು ರಾಜಕೀಯ ನಾಯಕರು ಸುದೀಪ್ ಅವರನ್ನು ಭೇಟಿ ಮಾಡಿದ್ದರಂತೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಸುದೀಪ್ ಅವರ ಮನೆಗೆ ಖುದ್ದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ನೀಡಿ ಮಾತುಕತೆ ನಡೆಸುವ ಮೂಲಕ ಭಾರಿ ಸುದ್ದಿಯಾಗಿದೆ.
ಸುದ್ದಿ ಸ್ಫೋಟವಾದ ನಂತರ ಖುದ್ದು ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆ ಹಾಗೂ ಪರಿಹಾರಗಳ ಕುರಿತು ಸುದೀಪ್ ಅವರ ಜೊತೆ ಚರ್ಚೆ ನಡೆಸಿದೆ. ಚುನಾವಣೆಗೆ ಮುನ್ನ ಪ್ರಣಾಳಿಕೆ ಸಿದ್ಧ ಪಡಿಸಬೇಕು. ಈ ಕುರಿತು ಹೆಚ್ಚಿನ ಮಾಹಿತಿಯೂ ಬೇಕಿತ್ತು. ನಮ್ಮ ವಿಶೇಷ ಪ್ರಣಾಳಿಕೆಯಲ್ಲಿ ಚಿತ್ರರಂಗದ ಸಮಸ್ಯೆಗಳ ಕುರಿತು ಪರಿಹಾರ ನೀಡಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ಡಿಕೆ ಶಿವಕುಮಾರ್.
ಸುದೀಪ್ ಕಾಂಗ್ರೆಸ್ ಸೇರ್ಪಡೆ ಸುದ್ದಿಯನ್ನು ಈ ಮೂಲಕ ನಿರಾಕರಿಸಿದ್ದಾರೆ. ಸುದೀಪ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗೆ ತೆರೆ ಎಳೆದಿದ್ದಾರೆ. ವಿಶೇಷವೆಂದರೆ ಕಳೆದ ಚುನಾವಣೆಯಲ್ಲಿ ಶ್ರೀರಾಮುಲು, ಸಿದ್ದರಾಮಯ್ಯ ಸೇರಿದಂತೆ ತಮ್ಮ ಕೆಲವು ಪ್ರೀತಿ ಪಾತ್ರ ನಾಯಕರ ಪರವಾಗಿ ಹಾಗೂ ಪಕ್ಷರಹಿತವಾಗಿ ಚುನಾವಣಾ ಪ್ರಚಾರಕ್ಕೆ ಹೋಗಬೇಕಿತ್ತು. ವಿಚಿತ್ರವೆಂದರೆ ಬಾದಾಮಿಯಲ್ಲಿ ಸಿದ್ದರಾಮಯ್ಯ-ಶ್ರೀರಾಮುಲು ಪರಸ್ಪರ ಎದುರಾಳಿಗಳಾಗಿದ್ದರು.
ಬಾದಾಮಿಯನ್ನು ಬಿಟ್ಟು ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಪರ ಪ್ರಚಾರ ಮಾಡುವುದು ಹಾಗೂ ಶ್ರೀರಾಮುಲು ಅವರ ಪರವಾಗಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಪ್ರಚಾರ ಮಾಡುವ ಪ್ಲಾನ್ ಇತ್ತು. ಆದರೆ ಇದು ಗೊಂದಲವನ್ನೇ ಸೃಷ್ಟಿಸುವ ಕಾರಣ ಹಾಗೂ ಅಭಿಮಾನಿಗಳು ರಾಜಕೀಯಕ್ಕೆ ಬರಬೇಡಿ ಎಂದು ಪ್ರತಿಭಟಿಸಿದ್ದ ಹಿನ್ನೆಲೆಯಲ್ಲಿ ಸುದೀಪ್ ಪ್ರಚಾರದಿಂದಲೂ ಹಿಂದೆ ಸರಿದಿದ್ದರು. ಅಲ್ಲದೆ ಸುದೀಪ್ ಮತ್ತು ಶ್ರೀರಾಮುಲು ಸಂಬಂಧಿಗಳೂ ಹೌದು. ವೈಯಕ್ತಿಕವಾಗಿ ಸಿದ್ದರಾಮಯ್ಯ ಜೊತೆ ಬಾಂಧವ್ಯ ಚೆನ್ನಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಪ್ರೀತಿಯಿಂದ ಮಾಮ ಎಂದೇ ಕರೆಯುವಷ್ಟು ಆತ್ಮೀಯತೆ ಇದೆ.ಡಿಕೆ ಶಿವಕುಮಾರ್ ಜೊತೆ, ಸುಧಾಕರ್ ಜೊತೆ ಸ್ನೇಹವೂ ಇದೆ. ಕುಮಾರಸ್ವಾಮಿ ಜೊತೆಯಲ್ಲೂ ಉತ್ತಮ ಗೆಳೆತನ ಇರುವ ಸುದೀಪ್, ಮಂಡ್ಯದಲ್ಲಿ ಸುಮಲತಾ ನಿಂತಾಗಲೂ ಪ್ರಚಾರಕ್ಕೆ ಹೋಗಲಿಲ್ಲ. ಸುದೀಪ್ ಅವರಿಗೆ ಎಲ್ಲ ಪಕ್ಷದಲ್ಲೂ ಮಿತ್ರರಿದ್ದಾರೆ. ಇದೀಗ ಸುದೀಪ್ ಅವರ ಕಾಂಗ್ರೆಸ್ ಪ್ರವೇಶದ ಸುದ್ದಿಗೆ ಈ ರೀತಿ ಬ್ರೇಕ್ ಬಿದ್ದಿದೆ