ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ವಿಶ್ವದ ಅತಿ ದುಬಾರಿ ನಾಯಿ ಎಂದೊಂದು ಸುದ್ದಿಯಾಗಿತ್ತು, ನೆನಪಿದೆಯೇ.. ಆ ನಾಯಿ ಈಗ ರವಿಚಂದ್ರನ್ ಚಿತ್ರಕ್ಕೆ ಎಂಟ್ರಿ ಕೊಟ್ಟಿದೆ. ಬೆಂಗಳೂರಿನ ಸತೀಶ್ ಎಂಬುವವರಿಗೆ ಸೇರಿದ್ದ ನಾಯಿಯ ಮೌಲ್ಯ 20 ಕೋಟಿಯಂತೆ. ಕಕೇಶಿಯಸ್ ಶೆಫರ್ಡ್ ಜಾತಿಗೆ ಸೇರಿದ ನಾಯಿಯದು. ಆ ನಾಯಿ ಈಗ ಗೌರಿಶಂಕರ ಚಿತ್ರದಲ್ಲಿ ನಟಿಸುತ್ತಿದೆ.
ಆ ನಾಯಿ ಅದೆಷ್ಟು ದುಬಾರಿಯೆಂದರೆ ಆ ನಾಯಿಗೆ ನಿರ್ಮಾಪಕರು ಪ್ರತಿ ದಿನ 10 ಲಕ್ಷ ರೂ. ಸಂಭಾವನೆ ನೀಡುತ್ತಿದ್ದಾರೆ. ಆ ನಾಯಿಗೆ ಎಸಿ ಕಾಟೇಜ್`ನ್ನೇ ಕೊಡಬೇಕು. ಅದಕ್ಕಾಗಿಯೇ ಸ್ಪೆಷಲ್ ಆಹಾರದ ವ್ಯವಸ್ಥೆ ಇದೆ. ಎಲ್ಲವೂ ದುಬಾರಿಯೇ. ಆದರೆ ನಾಯಿಯೂ ಅಂತದ್ದೇ. ಅದು ಬುದ್ದಿವಂತ ಹಾಗೂ ಧೈರ್ಯವಂತ ನಾಯಿಯಂತೆ. ಅದಕ್ಕಾಗಿಯೇ ಸತೀಶ್ ಅದನ್ನು ರಷ್ಯಾದಿಂದ ತರಿಸಿಕೊಂಡಿದ್ದಾರೆ. ನಾಯಿಯೂ ಗೌರಿಶಂಕರ ಚಿತ್ರದಲ್ಲಿ ಪ್ರಧಾನ ಪಾತ್ರ ಮಾಡುತ್ತಿದೆಯಂತೆ.
ತಮಿಳಿನ ಅನೀಸ್ ನಿರ್ದೇಶಿಸುತ್ತಿರುವ ಚಿತ್ರವಿದು. ಈ ಚಿತ್ರದಲ್ಲಿ ರವಿಚಂದ್ರನ್, ಈ ಹಿಂದೆ ಎಲ್ಲಿಯೂ ಕಾಣಿಸದಂತ ವಿಶೇಷ ಲುಕ್`ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಪೂರ್ವ, ರವಿಚಂದ್ರನ್ ಅವರಿಗೆ ಪತ್ನಿಯಾಗಿ ನಟಿಸುತ್ತಿದ್ದು, ರವಿಚಂದ್ರನ್, ಪತ್ನಿ ಅಪೂರ್ವ, ಅವರ ಮಗು ಹಾಗೂ ನಾಯಿಯೇ ಚಿತ್ರದ ಪ್ರಧಾನ ಪಾತ್ರಗಳು.
ಕಲಾವಿದ ಚಿತ್ರದ ನಂತರ ಈ ಚಿತ್ರದಲ್ಲಿ ರವಿಚಂದ್ರನ್, ಮತ್ತೊಮ್ಮೆ ಕುಂಚ ಹಿಡಿದಿದ್ದಾರೆ. ಸಿನಿಮಾದಲ್ಲಿ ನಾಯಕ ಮತ್ತು ನಾಯಕಿ ಆಗಾಗ ಕನಸಿನ ಲೋಕಕ್ಕೆ ಹೋಗುತ್ತಿರುತ್ತಾರೆ. ಅದಕ್ಕಾಗಿಯೇ ವಿಶೇಷ ಕಾಸ್ಟ್ಯೂಮ್ ಡಿಸೈನ್ ಇದೆ. ರವಿಚಂದ್ರನ್ ಮತ್ತು ಅವರ ಅಭಿಮಾನಿಗಳಿಗೂ ಇದು ಹೊಸ ರೀತಿಯ ಅನುಭವ. ಗೌರಿ ಶಂಕರದಲ್ಲಿ ರವಿಚಂದ್ರನ್ ಪಾತ್ರವೇ ಹೈಲೈಟ್. ಅವರ ವೃತ್ತಿಬದುಕಿನಲ್ಲಿ ಇದೊಂದು ವಿಭಿನ್ನ ಮತ್ತು ವಿಶಿಷ್ಟ ಸಿನಿಮಾ. ಪ್ರೇಕ್ಷಕರಿಗೂ ಹೊಸ ಅನುಭವ ನೀಡುವಂತಹ ಚಿತ್ರವಿದು ಎಂದಿದ್ದಾರೆ ನಿರ್ದೇಶಕ ಅನೀಸ್.