ರಿಷಿಕಾ ಸಿಂಗ್. ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ. ನಟ ಆದಿತ್ಯ ಅವರ ತಂಗಿ. ಕಂಠೀರವ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದಿದ್ದ ರಿಷಿಕಾ ಸಿಂಗ್, ದುನಿಯಾ ವಿಜಯ್, ರವಿಚಂದ್ರನ್, ಉಪೇಂದ್ರ ಸೇರಿದಂತೆ ಹಲವರ ಜೊತೆ ನಟಿಸಿದ್ದರು. ಕಳ್ಳ ಮಳ್ಳ ಸುಳ್ಳ ರಿಷಿಕಾಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಕಿರುತೆರೆಯಲ್ಲೂ ಆಕ್ಟಿವ್ ಆಗಿದ್ದ ರಿಷಿಕಾ ರಗಳೆ ವಿತ್ ರಿಷಿಕಾ ಎಂಬ ಟಿವಿ ಶೋ ನಡೆಸಿಕೊಡುತ್ತಿದ್ದರು. ಹೀಗೆ ಬ್ಯುಸಿಯಾಗಿರುವಾಗಲೇ ಒಂದು ಆಕ್ಸಿಡೆಂಟ್ ಆಯಿತು.
2020, ಜುಲೈ 28 ರಂದು ಮಾವಳ್ಳಿಪುರ ಸಮೀಪದಲ್ಲಿಯೇ ಅತಿ ವೇಗವಾಗಿ ಬಂದ ಫಾರ್ಚೂನರ್ ಕಾರ್, ರಸ್ತೆ ಪಕ್ಕದಲ್ಲಿ ಇದ್ದ ನೀಲಗಿರಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ರಿಷಿಕಾ ಬೆನ್ನುಮೂಳೆಗೆ ಬಲವಾಗಿ ಪೆಟ್ಟಾಗಿತ್ತು. ಈ ಘಟನೆ ನಡೆದು 2 ವರ್ಷಗಳಾಗುತ್ತ ಬಂತು. ಈಗ ರಿಷಿಕಾ ಗುಣಮುಖರಾಗುತ್ತಿದ್ದಾರೆ. 1.5 ವರ್ಷಗಳ ಹಿಂದೆ ಗಾಯವಾಗಿತ್ತು. ದೇವರಿದ್ದರಿಂದ ನಾನು ಸುಧಾರಿಸಿಕೊಂಡೆ. ವೈದ್ಯೋ ನಾರಾಯಣೋ ಹರಿಃ ಎನ್ನುತ್ತಾರೆ. ನನಗೆ ಧೈರ್ಯ ತುಂಬಿ ನನ್ನ ಬೆನ್ನುಮೂಳೆ ಸರಿ ಹೋಗುವಂತೆ ಮಾಡಿ, ಐರನ್ ಮಹಿಳೆಯನನ್ನಾಗಿಸಿದ ವೈದ್ಯರಿಗೆ ಧನ್ಯವಾದಗಳು. ನನ್ನ ಕುಟುಂಬ ನನ್ನ ಶಕ್ತಿಯಾಗಿ ನಿಂತಿತ್ತು. ಭಯಕ್ಕಿಂತ ಜಾಸ್ತಿ ನನಗೆ ನಂಬಿಕೆಯಿತ್ತು. ಅದೇ ನನ್ನನ್ನು ಸುಧಾರಿಸಿತು. ಅಸಾಧ್ಯವಾದುದು ಯಾವುದೂ ಇಲ್ಲ. ನನ್ನ ಆರೋಗ್ಯ ಸುಧಾರಣೆಗೆ ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ಎಂದು ಹೇಳಿಕೊಂಡಿದ್ದಾರೆ ರಿಷಿಕಾ ಸಿಂಗ್.
ಕಂಪ್ಲೀಟ್ ಜಿಂಕೆಮರಿಯಂತೆ ಓಡಾಡುತ್ತಿದ್ದಾರೆ ಎಂದೇನಲ್ಲ. ಆದರೆ ಮತ್ತೆ ಜಿಂಕೆಮರಿಯಾಗುವ ಹಾದಿಯಲ್ಲಿ ಮುಂದೆ ಬಂದಿದ್ದಾರೆ. ಬೆನ್ನುಮೂಳೆಗೆ ಪೆಟ್ಟಾಗಿ ಗುಣಮುಖರಾಗುವುದು ಸುಲಭವಲ್ಲ. ಒಂದು ಸವಾಲನ್ನೇ ಮೆಟ್ಟಿ ನಿಂತು ಗೆಲ್ಲುತ್ತಿದ್ದಾರೆ ರಿಷಿಕಾ ಸಿಂಗ್. ಇನ್ನಷ್ಟು ಬೇಗ ಗುಣಮುಖರಾಗಲಿ ರಿಷಿಕಾ ಎನ್ನುವುದು ಎಲ್ಲರ ಹಾರೈಕೆ.