ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಜೊತೆಗೆ ಆರ್.ಚಂದ್ರು ಕಬ್ಜ ಸಿನಿಮಾ ಘೋಷಿಸುತ್ತಿದ್ದಂತೆಯೇ ಶುರುವಾದ ಕ್ರೇಜ್ ಈಗ ರಿಲೀಸ್ ಹಂತಕ್ಕೆ ಬಂದು ನಿಂತಿದೆ. ಆರ್.ಚಂದ್ರು ನಿರ್ದೇಶನದ ಕಬ್ಜಕ್ಕೆ ರವಿ ಬಸ್ರೂರು ಸಂಗೀತ. ಫೆಬ್ರವರಿ 4ಕ್ಕೆ ಹೈದರಾಬಾದ್`ನಲ್ಲಿ ಆಡಿಯೋ ರಿಲೀಸ್ ಈವೆಂಟ್. ಫೆಬ್ರವರಿ 4ರಂದು ರಿಲೀಸ್ ಆಗಲಿರುವುದು ಮೊದಲ ಹಾಡು ಮಾತ್ರ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಾರಣ ಒಂದೊಂದು ಹಾಡಿಗೂ ಒಂದೊಂದು ರಾಜ್ಯ ಆಯ್ಕೆ ಮಾಡಿಕೊಳ್ಳೋ ಪ್ಲಾನ್ ಚಂದ್ರು ಅವರ ತಲೆಯಲ್ಲಿದೆ. ಏನೇ ಮಾಡಿದರೂ ಅದ್ಧೂರಿಯಾಗಿ ಮಾಡುವ ಚಂದ್ರು ಹಾಡಿನ್ನೇ ಹಬ್ಬವಾಗಿಸಲಿದ್ದಾರೆ.
ಚಿತ್ರ ರಿಲೀಸ್ ಆಗುವುದು ಮಾರ್ಚ್ 17ಕ್ಕೆ. ಅಪ್ಪು ಹುಟ್ಟುಹಬ್ಬದ ದಿನ ರಿಲೀಸ್ ಆಗಲಿರುವ ಚಿತ್ರದ ಹವಾ ಎಲ್ಲೆಲ್ಲೂ ಕೇಳಬೇಕು ಎನ್ನುವುದೇ ಚಂದ್ರು ಗುರಿ. ಹೈದರಾಬಾದ್`ನಲ್ಲಿ ಈ ಈವೆಂಟ್`ಗಾಗಿಯೇ ಭರ್ಜರಿ ಸೆಟ್ ರೆಡಿಯಾಗುತ್ತಿದೆ. ಅಂದಹಾಗೆ ಕಬ್ಜ ಆಡಿಯೋ ಲಹರಿ ಪಾಲಾಗಿದೆ. ಚಿತ್ರದ ಆಡಿಯೋ ರೈಟ್ಸ್‍ನ್ನು 3 ಕೋಟಿಗೂ ಹೆಚ್ಚು ಕೊಟ್ಟು ಖರೀದಿಸಿದ್ದಾರಂತೆ. ಕೆಜಿಎಫ್ ನಂತರ ಇಷ್ಟು ದೊಡ್ಡ ಮಟ್ಟಕ್ಕೆ ಸೇಲ್ ಆಗಿರುವುದೂ ಒಂದು ದಾಖಲೆ.
ಹಿಂದಿಯಲ್ಲಿ ಸಾಕಷ್ಟು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಆನಂದ್ ಪಂಡಿತ್ ಈಗಾಗಲೇ 'ಕಬ್ಜ' ಸಿನಿಮಾದ ಹಿಂದಿ ವಿತರಣೆ ಹಕ್ಕುಗಳನ್ನು ಖರೀದಿ ಮಾಡಿದ್ದಾರೆ. ಅವರು ಹಿಂದಿ ವಿತರಣೆ ಹಕ್ಕುಗಳನ್ನು ತುಂಬ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಇದೀಗ 'ಕಬ್ಜ' ತೆಲುಗು ವರ್ಷನ್ನ ವಿತರಣೆ ಹಕ್ಕುಗಳನ್ನು ನಟ ನಿತಿನ್ ಅವರ ತಂದೆ ಸುಧಾಕರ್ ರೆಡ್ಡಿ ಖರೀದಿ ಮಾಡಿದ್ದಾರೆ. ಕಮಲ್ ಹಾಸನ್ ಅವರ 'ವಿಕ್ರಮ್' ಸಿನಿಮಾವನ್ನು ವಿತರಣೆ ಮಾಡಿ, ದೊಡ್ಡಮಟ್ಟದ ಗೆಲುವು ಕಂಡಿದ್ದರು. ಈಗ 'ಕಬ್ಜ' ಚಿತ್ರ ತೆಲುಗು ವಿತರಣೆ ಹಕ್ಕುಗಳನ್ನು ಖರೀದಿ ಮಾಡಿದ್ದಾರೆ.
ನಟ ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ನಟಿಸಿದ್ದಾರೆ. ಭಾರ್ಗವ್ ಭಕ್ಷಿ ಎಂಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ 'ಕಿಚ್ಚ' ಸುದೀಪ್ ಇದ್ದಾರೆ. ಬಾಲಿವುಡ್ನ ಡ್ಯಾನಿಶ್ ಅಖ್ತರ್ ಸೈಫಿ, ನವಾಬ್ ಶಾ, ಕಬೀರ್ ಸಿಂಗ್ ದುಹಾನ್ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಜೊತೆಗೆ ತೆಲುಗಿನ ಪೊಸಾನಿ ಮುರಳಿ ಕೃಷ್ಣ, ಮುರಳಿ ಶರ್ಮಾ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿದ್ದಾರೆ.