ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಚಿತ್ರದಲ್ಲಿ ಮಿಡ್ಲ್ ಸ್ಕೂಲ್ ಓದುವ ಮುದ್ದು ಮುದ್ದು ಮುಖದ ಪುಟ್ಟ ಹುಡುಗಿ ಪಲ್ಲವಿಯಾಗಿ ರಂಜಿಸಿದ್ದ ಸಪ್ತ ಪಾವೂರ್ ಈಗ ಕಾಲೇಜು ಓದುತ್ತಿದ್ದಾರೆ. ಪಿಸಿಎಂಬಿ ಓದುತ್ತಿರುವ ಸಪ್ತ ಪಾವೂರ್ ಕಾಲೇಜಿನ ನಡು ನಡುವೆ ಸಿನಿಮಾಗಳನ್ನೂ ಮಾಡುತ್ತಿದ್ದಾರೆ. ಹಾಗೆ ನಟಿಸಿರುವ ಚಿತ್ರ ತನುಜಾ. ಕಳೆದ ವರ್ಷ ಶಿವಣ್ಣ ಜೊತೆಗೆ ಬೈರಾಗಿ ಚಿತ್ರದಲ್ಲಿಯೂ ನಟಿಸಿದ್ದ ಸಪ್ತ ಅವರಿಗೆ ಆಫರ್`ಗಳಿಗೇನೂ ಕೊರತೆಯಿಲ್ಲ.
ನಿರ್ದೇಶಕ ಎಂ.ಡಿ.ಹಳ್ಳಿ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ನೋಡಿಯೇ ಈ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದರು. ನಾನೂ ಕೂಡಾ ಸ್ಟೂಡೆಂಟ್. ಹೀಗಾಗಿ ಕಥೆ ಇಷ್ಟವಾಯಿತು. ಸಿನಿಮಾಗೆ ಒಪ್ಪಿಕೊಂಡೆ ಎನ್ನುವ ಸಪ್ತಾ, ಪಾತ್ರಕ್ಕಾಗಿ ರಿಯಲ್ ವಿದ್ಯಾರ್ಥಿನಿಯ ಬಗ್ಗೆ ಎಲ್ಲ ಮಾಹಿತಿ ಸಂಗ್ರಹಿಸಿದ್ದಾರೆ. ರಿಯಲ್ ತನುಜಾ ಈ ಮೆಡಿಕಲ್ 2ನೇ ವರ್ಷದಲ್ಲಿದ್ದು, ಭೇಟಿ ಸಾಧ್ಯವಾಗಿಲ್ಲ. ಅವರ ತಾಯಿಯನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ.
ತನುಜಾ ಜರ್ನಿ ಶುರುವಾಗಿದ್ದೇ ವಿಶೇಷವಾಗಿ. ಎಂಟ್ರೆನ್ಸ್ ಬರೆಯುವುದಕ್ಕೆ ಸಾಧ್ಯವಾಗದ ಸ್ಥಿತಿಯಲ್ಲಿರುವ ಒಬ್ಬ ವಿದ್ಯಾರ್ಥಿನಿಯನ್ನು ಪರೀಕ್ಷೆ ಬರೆಸುವುದಕ್ಕೆ ನಡೆಯುವ ಹೋರಾಟ, ಸೋಷಿಯಲ್ ಮೀಡಿಯಾದಲ್ಲಿ ಬರುವ ಒಂದು ಪೋಸ್ಟ್, ಆ ಪೋಸ್ಟ್`ಗೆ ಆಗ ಸಿಎಂ ಆಗಿದ್ದ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್ ಸ್ಪಂದಿಸಿದ ರೀತಿ.. ಎಲ್ಲವನ್ನೂ ಅಚ್ಚುಕಟ್ಟಾಗಿ ತೆರೆಯ ಮೇಲೆ ತರಲಾಗಿದೆ. ವಿಶ್ವವಾಣಿ ಸಂಪಾದಕ ವಿಶ್ವೇಶ್ವರ್ ಭಟ್, ಯಡಿಯೂರಪ್ಪ, ಸುಧಾಕರ್ ಎಲ್ಲರೂ ಚಿತ್ರದಲ್ಲಿ ನಟಿಸಿದ್ದಾರೆ.