ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾಗಿರುವ ಅನುಪಮ್ ಖೇರ್ ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿದ್ದಾರೆ. ಅನುಪಮ್ ಖೇರ್ ಅವರಿಗೆ ಕನ್ನಡ ಹೊಸದಲ್ಲ. ಆದರೆ ಅಪರೂಪ. 2012ರಲ್ಲಿ ದಿಗಂತ್ ಅಭಿನಯದ ಪಾರಿಜಾತದಲ್ಲಿ ನಟಿಸಿದ್ದ ಅನುಪಮ್ ಖೇರ್, ಇದೀಗ ಶಿವಣ್ಣನ ಘೋಸ್ಟ್ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ.
ಘೋಸ್ಟ್, ಶಿವರಾಜ್ ಕುಮಾರ್ ಮತ್ತು ಶ್ರೀನಿ ಕಾಂಬಿನೇಷನ್ ಸಿನಿಮಾ. ಈಗಾಗಲೇ ಈ ಚಿತ್ರದಲ್ಲಿ ನಟಿಸುವುದಕ್ಕೆ ಮಲಯಾಳಂ ನಟ ಜಯರಾಂ ಬಂದಿದ್ದಾರೆ. ಬಾಲಿವುಡ್ಡಿನಿಂದ ಪ್ರಶಾಂತ್ ನಾರಾಯಣ್ ಕೂಡಾ ಬಂದಿದ್ದಾರೆ. ಈಗ ಅನುಪಮ್ ಖೇರ್ ಎಂಟ್ರಿ. ಎಂ.ಜಿ.ಶ್ರೀನಿವಾಸ್, ಬೀರಬಲ್, ಓಲ್ಡ್ ಮಾಂಕ್ ಮೊದಲಾದ ಚಿತ್ರಗಳಿಂದ ಫೇಮಸ್ ಆದ ಡೈರೆಕ್ಟರ್. ಶಾರ್ಟ್ & ಸ್ವೀಟ್ ಆಗಿ ಶ್ರೀನಿ ಎಂದೇ ಪರಿಚಿತ.
ಚಿತ್ರದುದ್ದಕ್ಕೂ ಅನುಪಮ್ ಖೇರ್ ಪಾತ್ರ ಇರುತ್ತದೆ. ಶಿವಣ್ಣನ ಪಾತ್ರದ ಜೊತೆಯಲ್ಲೇ ಜರ್ನಿ ಸಾಗುತ್ತದೆ. ಅನುಪಮ್ ಖೇರ್ ಅವರದ್ದು ಹೀಗೆ ಬಂದು ಹಾಗೆ ಹೋಗುವ ಅತಿಥಿ ನಟನ ಪಾತ್ರವಲ್ಲ. ಚಿತ್ರದ ಸೀಕ್ವೆಲ್ ಮಾಡುವುದಕ್ಕೂ ಅದು ಲೀಡ್ ಕೊಡುತ್ತದೆ ಎಂದಿದ್ದಾರೆ ಶ್ರೀನಿ. ಆ ಮೂಲಕ ಘೋಸ್ಟ್ ಚಿತ್ರದ ಎರಡನೇ ಭಾಗವೂ ಬರಬಹುದು ಎಂಬ ಕ್ಲೂ ಬಿಟ್ಟಿದ್ದಾರೆ. ಆದರೆ ನಿರ್ಧಾರವಾಗುವುದು ರಿಲೀಸ್ ಆದ ನಂತರವಷ್ಟೇ. ಇದು ಸಂದೇಶ್ ನಾಗರಾಜ್ ಪ್ರೊಡಕ್ಷನ್ ಸಿನಿಮಾ.