ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಚಿತ್ರದಲ್ಲಿ ನಿರೂಪ್ ಭಂಡಾರಿ ಹಾಗೂ ಶಾನ್ವಿ ಶ್ರೀವಾಸ್ತವ್ ನಟಿಸುತ್ತಿದ್ದಾರೆ. ಇಂಡಿಯಾ ವರ್ಸಸ್ ಇಂಗ್ಲೆಂಡ್ ನಂತರ ನಾಗತಿಹಳ್ಳಿ ನಿರ್ದೇಶಿಸುತ್ತಿರುವ ಚಿತ್ರವಿದು. ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ರಂಗಿತರಂಗ, ವಿಕ್ರಾಂತ್ ರೋಣ ಚಿತ್ರಗಳಲ್ಲಿ ವ್ಹಾವ್ ಎನ್ನಿಸುವಂತೆ ನಟಿಸಿದ್ದ ನಿರೂಪ್ ಭಂಡಾರಿ, ಕಥೆ ಆಧರಿಸಿದ ಚಿತ್ರಗಳಿಗೆ ಮಹತ್ವ ಕೊಟ್ಟವರು.
ನಾಗತಿಹಳ್ಳಿ ಚಿತ್ರಗಳಲ್ಲಿ ನಟಿಸುವುದೇ ಒಂದು ಖುಷಿ. ಈ ಚಿತ್ರದಲ್ಲಿಯೂ ಕಥೆ ಅದ್ಭುತವಾಗಿದೆ. ಅಮೆರಿಕಾ ಅಮೆರಿಕಾ ಮಾದರಿಯ ಭಾವನಾತ್ಮಕ ದೃಶ್ಯಗಳಿವೆ. ಮೊದಲು ಕರ್ನಾಟಕದಲ್ಲಿಯೇ ಚಿತ್ರೀಕರಣವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ ನಿರೂಪ್ ಭಂಡಾರಿ.
ಇನ್ನು ಶಾನ್ವಿ ಶ್ರೀವಾಸ್ತವ್ ಅವರಿಗೂ ಅಷ್ಟೆ. ನಾಗತಿಹಳ್ಳಿ ಚಿತ್ರ ಎಂದ ಕೂಡಲೇ ಮರುಮಾತನಾಡದೆ ಒಪ್ಪಿಕೊಂಡಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ದೊಡ್ಡ ಮಟ್ಟದ ಹಿಟ್ ಬೇಕಾಗಿದೆ. ನಾಗತಿಹಳ್ಳಿಯವರ ಕೊನೆಯ ಹಿಟ್ ಚಿತ್ರ ಯಾವುದು ಎಂದರೆ 2005ರಲ್ಲಿ ಬಂದಿದ್ದ ಅಮೃತಧಾರೆಯನ್ನೇ ಹೇಳಬೇಕು. ಅದಾದ ಮೇಲೆ ಅವರು 6 ಚಿತ್ರಗಳನ್ನು ನಿರ್ದೇಶಿಸಿದ್ದಾರಾದರೂ ಹಿಟ್ ಸಿಕ್ಕಿಲ್ಲ. ಹೀಗಾಗಿ ನಾಗತಿಹಳ್ಳಿ ಚಂದ್ರಶೇಖರ್ ಕೂಡಾ ದೊಡ್ಡ ಹಿಟ್ ನಿರೀಕ್ಷೆಯಲ್ಲಿದ್ದಾರೆ.