ಕಾಂತಾರ ಎಂದರೆ ಅರ್ಥ ನಿಗೂಢತೆ. ಅದಕ್ಕೆ ತಕ್ಕಂತೆಯೇ ಕಾಂತಾರದ ಯಶಸ್ಸಿನ ಕಾರಣವೂ ನಿಗೂಢ. ಏಕೆಂದರೆ ಇದೇ ಕಾರಣ ಎಂದು ವಿಜಯ್ ಕಿರಗಂದೂರು ಅವರಾಗಲೀ.. ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಾಗಲೀ ಹೇಳೋದಿಲ್ಲ. ಎಲ್ಲವನ್ನೂ ದೈವದತ್ತ ತೋರಿಸುತ್ತಾರೆ. ಕಾಂತಾರ ಸೃಷ್ಟಿಸಿದ ಕ್ರೇಜ್ ಅಂತದ್ದು. ಅಂದಹಾಗೆ ಕಾಂತಾರ ಈಗ ಹಿಂದಿಯಲ್ಲೂ ಶತದಿನವೋತ್ಸವ ಆಚರಿಸಿದೆ.
ಕಾಂತಾರ ಕನ್ನಡದಲ್ಲಿ 100 ದಿನ ಪೂರೈಸಿದ ಬೆನ್ನಲ್ಲೇ, ಚಿತ್ರ ಆಸ್ಕರ್ ಅಂಗಳಕ್ಕೆ ಜಗಿದಿತ್ತು. ಪ್ರಶಸ್ತಿ ನಾಮನಿರ್ದೇಶನದ ಪೈಪೋಟಿಗೆ ಹೋಗುವ ಅರ್ಹತೆ ಗಿಟ್ಟಿಸಿಕೊಂಡಿತ್ತು. ಆ ಫಲಿತಾಂಶ 24ರಂದು ತಿಳಿಯಲಿದೆ.
ಇದರ ನಡುವೆಯೇ ಚಿತ್ರ ಹಿಂದಿಯಲ್ಲೂ ಶತದಿನೋತ್ಸವ ಆಚರಿಸಿದೆ. ಕಾಂತಾರ ಕನ್ನಡದಲ್ಲಿ ರಿಲೀಸ್ ಆಗಿ ಯಶಸ್ಸಿನ ನಾಗಾಲೋಟದಲ್ಲಿದ್ದಾಗ ಹಿಂದಿಯಲ್ಲೂ ರಿಲೀಸ್ ಮಾಡುವ ಡಿಮ್ಯಾಂಡ್ ಸೃಷ್ಟಿಯಾಯ್ತು. ಆಗ ಚಿತ್ರವನ್ನು ಹಿಂದಿಯಲ್ಲಿ ಡಬ್ ಮಾಡಿ ರಿಲೀಸ್ ಮಾಡಿದ್ದು. ಚಿತ್ರವೊಂದು ಬಿಡುಗಡೆಯಾದಾಗ ಆತುರದಲ್ಲಿಯೇ ಸಂಭಾಷಣೆ, ಸಾಹಿತ್ಯವನ್ನೆಲ್ಲ ಅನುವಾದ ಮಾಡಿ, ಡಬ್ಬಿಂಗ್ ಮಾಡಿ ರಿಲೀಸ್ ಮಾಡಿದ ಚಿತ್ರ. ಸ್ಟಡಿಯಾಗಿ ಬಾಕ್ಸಾಫೀಸ್ ದಾಖಲೆ ಕಾಯ್ದುಕೊಂಡು ಹೋದ ಕಾಂತಾರ, ಹಿಂದಿಯಲ್ಲೂ 100 ಕೋಟಿ ದಾಟಿತು.
ಈಗ ಕಾಂತಾರ 2 ಕಥೆ ಸಿದ್ಧವಾಗುತ್ತಿದೆಯಂತೆ. ಕಾಂತಾರ 2 ಬಗ್ಗೆ ಕೇಳಿದಾಗಲೆಲ್ಲ ರಿಷಬ್ ಶೆಟ್ಟಿ ನಾವು ರೆಡಿ ಎಂದೂ ಹೇಳಿರಲಿಲ್ಲ. ಇಲ್ಲವೇ ಇಲ್ಲ, ಸಾಧ್ಯವಿಲ್ಲ ಎಂದು ಕೂಡಾ ಹೇಳಿರಲಿಲ್ಲ. ಆದರೆ ಈಗ ನಿರ್ಮಾಪ ವಿಜಯ್ ಕಿರಗಂದೂರು ಕಾಂತಾರ 2 ಬರಲಿದೆ. ಪ್ಯಾನ್ ಇಂಡಿಯಾ ರೂಪದಲ್ಲಿಯೇ ಬರಲಿದೆ ಎಂದು ಹೇಳಿದ್ದಾರೆ. ಕಥೆ ಮೇಲೆ ರಿಷಬ್ ಶೆಟ್ಟಿ ವರ್ಕ್ ಮಾಡುತ್ತಿದ್ದು, ಕಥೆ ಸಿದ್ಧವಾದ ಮೇಲಷ್ಟೇ ಕಾಂತಾರ 2 ಸೆಟ್ಟೇರಲಿದೆ ಎಂದಿದ್ದಾರೆ. ಹಾಗಂತ ಇದು ಕಾಂತಾರ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್ ಎಂಬ ಮಾಹಿತಿ ಹೊರಬಿದ್ದಿದೆ.
ಈಗ ಮಾಡಲು ಹೊರಟಿರುವ ಕಥೆ ‘ಕಾಂತಾರ 2’ ಸಿನಿಮಾವು ಪ್ರೀಕ್ವೆಲ್ ಆಗಿರುವುದರಿಂದ, ‘ಕಾಂತಾರ’ ಸಿನಿಮಾದಲ್ಲಿ ಆರಂಭದಲ್ಲಿ ಬರುವ ಶಿವನ ತಂದೆಯ ಪಾತ್ರದ ಮೇಲೆ ಹೆಚ್ಚು ಕಥೆ ಇರಲಿದೆಯಂತೆ. ಶಿವನ ತಂದೆ ಕೋಲ ಕಟ್ಟಿಕೊಂಡು ಕಾಡಿನೊಳಗೆ ಹೋಗಿ ಕಾಣೆಯಾಗುತ್ತಾರೆ. ಅವರು ಹೋಗಿದ್ದೆಲ್ಲಿಗೆ? ಆ ನಂತರ ಏನಾಯಿತು ಎಂಬ ಬಗೆಗಿನ ಕಥೆಯನ್ನು ಈ ಬಾರಿ ತೆರೆಮೇಲೆ ತರಲು ರಿಷಬ್ ಸಜ್ಜಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ತಮ್ಮ ಹುಟ್ಟೂರು ಅಥವಾ ನೆಟ್ವರ್ಕ್ ಸಿಗದೇ ಇರುವಂತಹ ಜಾಗಕ್ಕೆ ಹೋಗಿ ಸ್ಕ್ರಿಪ್ಟ್ ಕೆಲಸ ಮುಗಿಸಿಕೊಂಡು 2023ರ ಮಧ್ಯದಿಂದ ಚಿತ್ರೀಕರಣ ಆರಂಭಿಸಲಿದ್ದಾರೆ ರಿಷಬ್.