ಬಘೀರ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೇ ವರ್ಷ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡಕ್ಕೂ ಇದೆ. ಹೊಂಬಾಳೆ ಬ್ಯಾನರ್`ನ ಸಿನಿಮಾಗೆ ಶ್ರೀಮುರಳಿ ಹೀರೊ. ಡಾ.ಸೂರಿ ನಿರ್ದೇಶನದ ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ರಾಕ್ ಲೈನ್ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಬಿದ್ದು ಶ್ರೀಮುರಳಿ ಕಾಲಿಗೆ ಪೆಟ್ಟಾಗಿದೆ. ಮೊಣಕಾಲಿಗೆ ಪೆಟ್ಟಾಗಿದ್ದು ಶ್ರೀಮುರಳಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರೀಕರಣ ವೇಗವಾಗಿ ಸಾಗುತ್ತಿದ್ದು, ಚಿತ್ರೀಕರಣ ಕೊನೆಯ ಹಂತದಲ್ಲಿತ್ತು. ಇನ್ನೊಂದೆರಡು ದಿನ ಶೂಟಿಂಗ್ ಮುಗಿದಿದ್ದರೆ ಚಿತ್ರೀಕರಣವೇ ಮುಗಿಯುತ್ತಿತ್ತು. ಈ ವೇಳೆ ಹೀಗಾಗಿದ್ದು ಚಿತ್ರೀಕರಣವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಹಾಗೆಂದು ಶ್ರೀಮುರಳಿಯವರಿಗೆ ಗಂಭೀರ ಗಾಯಗಳೇನೂ ಆಗಿಲ್ಲ. ಆದರೆ ಸದ್ಯಕ್ಕೆ ರಿಸ್ಕ್ ತೆಗೆದುಕೊಂಡು ಚಿತ್ರೀಕರಣಕ್ಕೆ ಹೋಗುವ ಸ್ಥಿತಿಯಲ್ಲಿ ಶ್ರೀಮುರಳಿ ಇಲ್ಲ.
ಈ ಹಿಂದೆ ಮದಗಜ ಚಿತ್ರೀಕರಣ ವೇಳೆಯಲ್ಲಿಯೂ ಶ್ರೀಮುರಳಿ ಪೆಟ್ಟು ಮಾಡಿಕೊಂಡಿದ್ದರು. ಆಗಲೂ ಮೊಣಕಾಲಿಗೇ ಪೆಟ್ಟು ಬಿದ್ದಿತ್ತು. ಅದೇ ಕಾಲಿಗೆ ಮತ್ತೆ ಪೆಟ್ಟಾಗಿರುವುದು ಆತಂಕ ಸೃಷ್ಟಿಸಿದೆ.