ಕನ್ನಡ ಚಿತ್ರರಂಗದಲ್ಲೇ ಹೊಸ ಹೊಸ ದಾಖಲೆ, ಇತಿಹಾಸ ಬರೆದ ಕಾಂತಾರ, ಆಸ್ಕರ್ ಪ್ರಶಸ್ತಿಗೆ ಇನ್ನಷ್ಟು ಸಮೀಪ ಹೋಗಿದೆ. ಕನ್ನಡದ ಕಾಂತಾರ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಆಸ್ಕರ್ ಅಂಗಳಕ್ಕೆ ಅಧಿಕೃತ ಪ್ರವೇಶ ಗಿಟ್ಟಿಸಿದೆ. ಕಾಂತಾರ ಚಿತ್ರವನ್ನು ಖಾಸಗಿಯಾಗಿ ಆಸ್ಕರ್ಗೆ ನಾಮನಿರ್ದೇಶನ ಸಲ್ಲಿಸಿದ್ದ ಹೊಂಬಾಳೆ ಸಂಸ್ಥೆಯೇ ಅಧಿಕೃತ ಎಂಟ್ರಿಯನ್ನೂ ಘೋಷಿಸಿದೆ.
ಕಾಂತಾರ ಸಿನಿಮಾ 2 ವಿಭಾಗಳಲ್ಲಿ ಆಸ್ಕರ್ ಅರ್ಹತೆ ಸಿಕ್ಕಿದೆ ಎಂದು ಹಂಚಿಕೊಳ್ಳಲು ನಮಗೆ ತುಂಬಾ ಸಂತಸವಾಗುತ್ತಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಪ್ರಯಾಣವನ್ನು ಹಂಚಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದೆ ಹೊಂಬಾಳೆ. ಅತ್ಯುತ್ತಮ ಸಿನಿಮಾ ಹಾಗೂ ಅತ್ಯುತ್ತಮ ನಟ ವಿಭಾಗದಲ್ಲಿ ಕಾಂತಾರ ಆಸ್ಕರ್ಗೆ ಅರ್ಹತೆ ಪಡೆದಿದೆ.
ಕಾಂತಾರ ಸಿನಿಮಾ ಆಸ್ಕರ್ ಪ್ರಶಸ್ತಿ ಸುತ್ತಿಗೆ ಆಯ್ಕೆಯಾದರೆ ಒಂದು ಇತಿಹಾಸ. ಪ್ರಶಸ್ತಿಯನ್ನು ಗೆದ್ದೂಬಿಟ್ಟರೆ ಅದೊಂದು ಹೊಸ ಇತಿಹಾಸ. ಒಟ್ಟು 301 ಚಿತ್ರಗಳಲ್ಲಿ ಒಂದಾಗಿ ಕಾಂತಾರ ಅರ್ಹತೆ ಪಡೆದಿದ್ದು, ಜನವರಿ 24 ರಂದು ಆಸ್ಕರ್ ಅಂತಿಮ ನಾಮನಿರ್ದೇಶನದ ಪಟ್ಟಿ ಬಿಡುಗಡೆಯಾಗಲಿದೆ.
ಕಾಂತಾರ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಚಿತ್ರ. ರಿಷಬ್ ಶಿವನಾಗಿ, ನಾಯಕಿ ಸಪ್ತಮಿ ಗೌಡ ಲೀಲಾ ಆಗಿ ನಟಿಸಿದ್ದಾರೆ. ಕಿಶೋರ್, ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿರುವ ಕಾಂತಾರ, 400 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಕನ್ನಡದಲ್ಲಿ ಅತೀ ಹೆಚ್ಚು ಜನ ನೋಡಿದ ಹಾಗೂ ಕನ್ನಡದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರ ಕಾಂತಾರ.