ಕೆಜಿಎಫ್ ಚಾಪ್ಟರ್ 2. ಅನುಮಾನವೇ ಇಲ್ಲ, 2022ರ ಸೂಪರ್ ಹಿಟ್ ನಂ.1 ಸಿನಿಮಾ. ಬಾಕ್ಸಾಫೀಸಿನಲ್ಲಿ ಕೆಜಿಎಫ್ ಸೃಷ್ಟಿಸಿರುವ ದಾಖಲೆಯನ್ನು ಸದ್ಯಕ್ಕಂತೂ ಯಾರೂ ಮುರಿಯೋಕೆ ಸಾಧ್ಯವಿಲ್ಲ. ಅಂತಹ ಚಿತ್ರದ ಬಗ್ಗೆ ಕಿಶೋರ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ.
ಕೆಜಿಎಫ್ ಚಾಪ್ಟರ್ 1, ನನ್ನ ಅಭಿರುಚಿಯ ಸಿನಿಮಾ ಅಲ್ಲ. ನನ್ನ ಪ್ರಕಾರ ಅದೊಂದು ಮೈಂಡ್ ಲೆಸ್ ಸಿನಿಮಾ. ಇದು ಸರಿಯೋ ತಪ್ಪೋ ನನಗೆ ಗೊತ್ತಿಲ್ಲ. ಆದರೆ ನಾನಂತೂ ಕೆಜಿಎಫ್ ಸಿನಿಮಾ ನೋಡಿಲ್ಲ. ನಾನು ಇಷ್ಟಪಡುವ ರೀತಿಯ ಸಿನಿಮಾ ಅದಲ್ಲ ಎಂದಿರುವ ಕಿಶೋರ್ ಇದು ನನ್ನ ಪರ್ಸನಲ್ ಆಯ್ಕೆಯ ವಿಷಯ ಎಂದಿದ್ದಾರೆ. ಯಶಸ್ವಿಯಾಗದೇ ಇದ್ದರೂ ಪರವಾಗಿಲ್ಲ, ಸಣ್ಣ ಸಣ್ಣ ಸಿನಿಮಾಗಳನ್ನು, ಗಂಭೀರ ವಿಚಾರಗಳನ್ನು ಹೇಳುವ ಸಿನಿಮಾಗಳನ್ನು ನೋಡೋಕೆ ಬಯಸುತ್ತೇನೆ ಎಂದಿದ್ದಾರೆ ಕಿಶೋರ್.
ಕನ್ನಡದಲ್ಲಿ ಹುಲಿ ಕಿಶೋರ್ ಎಂದೇ ಖ್ಯಾತರಾಗಿರುವ ಕಿಶೋರ್ ಅವರಿಗೆ ತಮಿಳು, ತೆಲುಗು, ಮಲಯಾಳಂನಲ್ಲಿ ದೊಡ್ಡ ಮಟ್ಟದ ಡಿಮ್ಯಾಂಡ್ ಇದೆ. ಯಾವುದೇ ರೀತಿಯ ಪಾತ್ರವಾದರೂ ಸರಿ, ಅದಕ್ಕೆ ತಕ್ಕಂತೆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವ ತಾಕತ್ತಿನ ನಟ ಕಿಶೋರ್. ಕಾಂತಾರ ಚಿತ್ರದ ಫಾರೆಸ್ಟ್ ಆಫೀಸರ್ ಪಾತ್ರ ದೊಡ್ಡ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿದೆ. ಕಾಂತಾರ ಮತ್ತು ಕೆಜಿಎಫ್, ಎರಡೂ ಕೂಡಾ ಒಂದೇ ಬ್ಯಾನರಿನ ಸಿನಿಮಾ. ಆದರೆ ಕಿಶೋರ್ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ನನ್ನಿಷ್ಟದ ಸಿನಿಮಾ, ನನ್ನ ಆಯ್ಕೆ ಎಂದು ಹೇಳಿದ್ದಾರೆ.
ಯಶ್ ಅಭಿಮಾನಿಗಳು ಕೆಜಿಎಫ್ ಮೂಲಕ ಕನ್ನಡದ ಲೆವೆಲ್ ಎಲ್ಲಿಗೆ ಹೋಯ್ತು ಅನ್ನೋದು ಗೊತ್ತಿದ್ಯಾ? ನಮ್ ರಾಕಿಭಾಯ್ ರಾಕಿಭಾಸ್ ಎಂದು ಟೀಕಿಸುತ್ತಿದ್ದಾರೆ. ನನಗೆ ಇಷ್ಟವಾಗಲ್ಲ, ಇಷ್ಟವಾಗಲಿಲ್ಲ ಅನ್ನೋದು ಕೂಡಾ ತಪ್ಪಾ ಎಂದು ಕಿಶೋರ್ ಪರ ಬೆಂಬಲಿಸುವವರು ಕೂಡಾ ಇದ್ದಾರೆ.