2022 ಅಂತಿಮ ಹಂತದಲ್ಲಿದೆ. ಈ ವಾರ ವರ್ಷದ ಕೊನೆಯ ವಾರ. ವರ್ಷದ ಮೊದಲ ವಾರದ ಚಿತ್ರ ಹಾಗೂ ಕೊನೆಯ ವಾರದ ಚಿತ್ರ. ಈ ಎರಡರಲ್ಲೂ ಲೂಸ್ ಮಾದ ಯೋಗಿ ಇದ್ದಾರೆ. ಕಳೆದ ವರ್ಷದ ಕೊನೆಯ ಚಿತ್ರ ಹಾಗೂ ಈ ವರ್ಷದ ಕೊನೆಯ ಚಿತ್ರಗಳೆರಡರಲ್ಲೂ ಡಾಲಿ ಧನಂಜಯ ಇದ್ದಾರೆ. ಕೊನೆಯ ವಾರದ ಸಿನಿಮಾಗಳ ಪಟ್ಟಿಯಲ್ಲಿ ಯೋಗರಾಜ್ ಭಟ್, ಡಾಲಿ ಧನಂಜಯ, ಆದಿತಿ ಪ್ರಭುದೇವ, ಲೂಸ್ ಮಾದ ಯೋಗಿ ಇದ್ದಾರೆ.
ಪದವಿ ಪೂರ್ವ : ಇದು ಯೋಗರಾಜ್ ಮೂವೀಸ್ ಸಿನಿಮಾ. ಪೃಥ್ವಿ ಶಾಮನೂರು, ಅಂಜಲಿ ಅನೀಶ್, ಯಶಾ ಶಿವಕುಮಾರ್ ನಟನೆಯ ಸಿನಿಮಾ. ಭಟ್ಟರ ಗರಡಿಯ ಹರಿಪ್ರಸಾದ್ ಜಯಣ್ಣ ಚಿತ್ರದ ಡೈರೆಕ್ಟರ್. ಹೊಸಬರ ಚಿತ್ರಕ್ಕೆ ಯೋಗರಾಜ್ ಭಟ್, ರವಿ ಶಾಮನೂರು ಬಂಡವಾಳ ಹಾಕಿದ್ದಾರೆ. ಚಿತ್ರದ ಟ್ರೇಲರ್ ಫ್ರೆಶ್ ಎನಿಸುವಂತಿದ್ದು, ಭರವಸೆ ಹುಟ್ಟಿಸಿದೆ.
ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ : ಇದು ಡಾಲಿ ಧನಂಜಯ್, ಆದಿತಿ ಪ್ರಭುದೇವ ಸಿನಿಮಾ. ಡಾಲಿ ಮತ್ತು ಆದಿತಿ ಇಬ್ಬರಿಗೂ ಈ ವರ್ಷದ 6ನೇ ಸಿನಿಮಾ. ಈ ವರ್ಷ ಇವರಿಬ್ಬರ ಅತೀ ಹೆಚ್ಚು ಚಿತ್ರಗಳು ರಿಲೀಸ್ ಆಗಿವೆ.
ನಾನು ಅದು ಮತ್ತು ಸರೋಜ : ಈ ವರ್ಷದ ಒಂಬತ್ತನೇ ದಿಕ್ಕು ಚಿತ್ರದ ಮೂಲಕ ಖಾತೆ ತೆರೆದಿದ್ದರು ಯೋಗಿ. ವರ್ಷದ ಕೊನೆಗೆ ನಾನು ಅದು ಮತ್ತು ಸರೋಜ ಮೂಲಕ ತೆರೆಗೆ ಬರುತ್ತಿದ್ದಾರೆ.
ಮೇಡ್ ಇನ್ ಬೆಂಗಳೂರು : ಇದು ಹೊಸಬರ ಸಿನಿಮಾ. ಹಿರಿಯ ಕಲಾವಿದರಿದ್ದರೂ ಫ್ರೆಶ್ ಎನಿಸುವ ಕಥೆಯ ಮೂಲಕ ಗಮನ ಸೆಳೆಯುತ್ತಿದೆ. ಇವುಗಳಲ್ಲಿ ಅಚ್ಚುಕಟ್ಟಾದ ಪ್ರಚಾರವನ್ನೂ ಮಾಡಿರುವುದು ಪದವಿ ಪೂರ್ವ. ಒಂದು ಹಂತಕ್ಕೆ ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ. ಉಳಿದಂತೆ ನಾನು ಅದು ಮತ್ತು ಸರೋಜ ಮತ್ತು ಮೇಡ್ ಇನ್ ಬೆಂಗಳೂರು ಸೋಷಿಯಲ್ ಮೀಡಿಯಾ ಪ್ರಚಾರ ನಂಬಿಕೊಂಡು ತೆರೆಗೆ ಬರುತ್ತಿವೆ. ದ್ವಿಪಾತ್ರ, ಜೋರ್ಡನ್, ಅಲ್ಫಾ, ಲವ್ ಸ್ಟೋರಿ 1998, ರುಧೀರ ಕಣಿವೆ.. ಎಂಬ ಚಿತ್ರಗಳೂ ಸದ್ದೇ ಇಲ್ಲದೆ ತೆರೆಗೆ ಬರುತ್ತಿವೆ.
ಇವೆಲ್ಲವುಗಳ ಮಧ್ಯೆ ಥಿಯೇಟರುಗಳಲ್ಲಿ ನಿರಾತಂಕವಾಗಿ.. ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವುದು ವೇದ. ಶಿವಣ್ಣ ಅವರ ಹಿಂದಿನ ಎಲ್ಲ ಚಿತ್ರಗಳ ಬಾಕ್ಸಾಫೀಸ್ ದಾಖಲೆಯನ್ನೂ ಪುಡಿ ಪುಡಿ ಮಾಡಿ ಭರ್ಜರಿ ಕಲೆಕ್ಷನ್ ಮಾಡಿದೆ.