ಆಸ್ಕರ್. ಪ್ರತಿಯೊಬ್ಬ ಚಿತ್ರ ನಿರ್ಮಾಪಕ, ನಿರ್ದೇಶಕ,ಕಲಾವಿದ, ತಂತ್ರಜ್ಞರ ಗುರಿ. ಕನಸು. ಈ ಕನಸಿನಲ್ಲಿ ಈ ಬಾರಿ ಭಾರತೀಯ ಚಿತ್ರರಂಗದಲ್ಲಿ ಅಧಿಕೃತವಾಗಿ ಎಂಟ್ರಿ ಕೊಟ್ಟಿರುವ ಚಿತ್ರ ಗುಜರಾತಿ ಚಿತ್ರ ಚೆಲ್ಲೋ ಶೋ (ದಿ ಲಾಸ್ಟ್ ಶೋ). ಫಿಲ್ಮ್ ಫೆಡರೇಷನ್ ಇಂಡಿಯಾ ವತಿಯಿಂದ ಅಧಿಕೃತವಾಗಿ ಮಾನ್ಯತೆ ಪಡೆದಿರುವ ಚಿತ್ರವಿದು. ಇತ್ತೀಚೆಗೆ ಆರ್.ಆರ್.ಆರ್. ಸಿನಿಮಾ ಕೂಡಾ ಆಸ್ಕರ್ ರೇಸ್‍ಗೆ ಲಗ್ಗೆಯಿಟ್ಟಿದೆ. ಫಾರ್ ಯುವರ್ ಕನ್ಸಿಡರೇಷನ್ ವಿಭಾಗದಲ್ಲಿ ಪ್ರತ್ಯೇಕವಾಗಿಯೇ ಎಂಟ್ರಿ ಕೊಟ್ಟಿದೆ. ಹಿಂದಿಯ ಗಂಗೂಬಾಯಿ ಕಟಿವಾಡಿ ಚಿತ್ರ ಇದೇ ವಿಭಾಗದಲ್ಲಿ ಸ್ಪರ್ಧೆಗಿಳಿದಿದೆ. ಈಗ ಈ ವಿಭಾಗಕ್ಕೆ ಕಾಂತಾರ ಕೂಡಾ ಎಂಟ್ರಿ ಕೊಟ್ಟಿದೆ.
ನಾವು ಚಿತ್ರವನ್ನು ಆಸ್ಕರ್ ರೇಸ್‍ಗೆ ಕಳಿಸಿದ್ದೇವೆ. ಅಧಿಕೃತವಾಗಿ ಅಪ್ಲಿಕೇಷನ್ ಹಾಕಿದ್ದೇವೆ. ಫೈನಲ್ ಲಿಸ್ಟ್‍ಗಾಗಿ ಕಾಯುತ್ತಿದ್ದೇವೆ. ಕಾಂತಾರ ಈ ನೆಲದ ಮಣ್ಣಿನ ಕಥೆಯಾದರೂ ಯುನಿವರ್ಸಲ್ ಗುಣಗಳನ್ನು ಹೊಂದಿದೆ ಎಂದು ಇಂಡಿಯಾ ಟುಡೇಗೆ ಹೇಳಿಕೆ ನೀಡಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು.
ಕಾಂತಾರ ಮೊದಲು ಕನ್ನಡದಲ್ಲಿಯಷ್ಟೇ ನಿರ್ಮಾಣವಾದ ಸಿನಿಮಾ. ನಂತರ ಚಿತ್ರದ ಸಕ್ಸಸ್ ಹಾಗೂ ಡಿಮ್ಯಾಂಡ್ ಕಂಡು ಬೇರೆ ಭಾಷೆಗಳಿಗೆ ಡಬ್ ಮಾಡಲಾಯಿತು. ಎಲ್ಲ ಭಾಷೆಗಳಲ್ಲಿಯೂ ಸಕ್ಸಸ್ ಕಂಡ ಸಿನಿಮಾ ಗಳಿಸಿದ್ದು 400 ಕೋಟಿಗೂ ಹೆಚ್ಚು. ಅಷ್ಟೇ ಅಲ್ಲ, ಇಂಗ್ಲಿಷಿಗೂ ಡಬ್ ಆಗಿ ನೆಟ್ ಫ್ಲಿಕ್ಸ್‍ನಲ್ಲಿ ರಿಲೀಸ್ ಆಗಿದೆ. ಅಲ್ಲಿಯೂ ಟ್ರೆಂಡಿಂಗ್‍ನಲ್ಲಿದೆ.
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ಕಾಂತಾರ ಚಿತ್ರ ಕರಾವಳಿಯಲ್ಲಿ ನಡೆಯುವ ಪ್ರಕೃತಿ ಮತ್ತು ಮನುಷ್ಯರ ನಡುವಿನ ಹೋರಾಟದ ಕಥೆಯನ್ನು ಹೇಳಿತ್ತು. ಚಿತ್ರದ ಕ್ಲೈಮಾಕ್ಸ್ ಚಿತ್ರಕ್ಕೊಂದು ದೈವೀಕ ಸೊಬಗು ನೀಡಿತ್ತು. ಆಸ್ಕರ್ ಕೂಡಾ ಗೆದ್ದರೆ.. ವ್ಹೋ.. ಎನ್ನಲು ಅಡ್ಡಿಯಿಲ್ಲ.