ಕಾಂತಾರ ಅಭೂತಪೂರ್ವ ಯಶಸ್ಸು ಗಳಿಸಿದೆ. 16 ಕೋಟಿಯ ಬಜೆಟ್ ಸಿನಿಮಾ ಥಿಯೇಟರಿನಲ್ಲಿ ಗಳಿಸಿದ್ದೇ 400 ಕೋಟಿಗೂ ಹೆಚ್ಚು. ಜಸ್ಟ್ 16 ಕೋಟಿ. ಹೊಂಬಾಳೆಯವರ ಕೆಜಿಎಫ್ ಸಿನಿಮಾ ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತಾದರೂ, ಹಾಕಿದ ಬಂಡವಾಳಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚು. ಆದರೆ ಕಾಂತಾರದ್ದು ಬೇರೆ. ಹಾಕಿದ್ದ ಬಂಡವಾಳಕ್ಕೆ ಹೋಲಿಸಿದರೆ 25 ಪಟ್ಟು ಹೆಚ್ಚು. ಹೀಗಿರುವಾಗ ಚಿತ್ರತಂಡಕ್ಕೆ ಸಿಕ್ಕಿರುವ ಸಂಭಾವನೆ ಎಷ್ಟು?
ಮೂಲಗಳ ಪ್ರಕಾರ ಚಿತ್ರದಲ್ಲಿ ನಟಿಸಿದ್ದ ಕಲಾವಿದರು ಹಾಗೂ ತಂತ್ರಜ್ಞರಿಗೆ ಒಳ್ಳೆಯ ಸಂಭಾವನೆಯೇ ಸಿಕ್ಕಿದೆ. ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದ ಕಿಶೋರ್ ಅವರಿಗೆ 60 ಲಕ್ಷ ರೂ. ವಿಲನ್ ಪಾತ್ರಧಾರಿ ಅಚ್ಯುತ್ ಕುಮಾರ್ ಅವರಿಗೆ 40 ಲಕ್ಷ ರೂ. ಸಂಭಾವನೆ ನೀಡಲಾಗಿದೆ. ನಾಯಕಿ ಸಪ್ತಮಿ ಗೌಡ ಅವರಿಗೆ 1 ಕೋಟಿ ರೂ. ಸಂಭಾವನೆ ನೀಡಲಾಗಿದೆ. ನಟನೆ ಹಾಗೂ ನಿರ್ದೇಶನ ಎರಡನ್ನೂ ನಿಭಾಯಿಸಿದ ರಿಷಬ್ ಶೆಟ್ಟಿಯವರಿಗೆ 4 ಕೋಟಿ ರೂ. ಸಂಭಾವನೆ ನೀಡಲಾಗಿದೆ. ಇದು ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ವೆಬ್‍ಸೈಟ್‍ನಲ್ಲಿ ಬರೆದುಕೊಂಡಿರೋ ಮಾಹಿತಿ.
ಇತ್ತೀಚೆಗೆ ಚಿತ್ರದಲ್ಲಿ ರಾಂಪ ಪಾತ್ರಧಾರಿ ಕನ್ನಡದ ಟಿವಿ ಚಾನೆಲ್ಲೊಂದರಲ್ಲಿ ಮಾತನಾಡುತ್ತಾ, ಚಿತ್ರದ ಸಕ್ಸಸ್ ನಂತರ ಇಡೀ ಚಿತ್ರತಂಡದ ಎಲ್ಲ ತಂತ್ರಜ್ಞರಿಗೂ ಮತ್ತೊಮ್ಮೆ ಸಂಭಾವನೆ ನೀಡಲಾಯಿತು. ಗೌರವಿಸಲಾಯಿತು ಎಂಬ ಮಾಹಿತಿ ಹಂಚಿಕೊಂಡಿದ್ದರು. ಅಧಿಕೃತವಾಗಿ ನಿರ್ಮಾಪಕ ವಿಜಯ್ ಕಿರಗಂದೂರು ಅವರಾಗಲೀ, ಕಾರ್ತಿಕ್ ಗೌಡ ಅವರಾಗಲೀ, ರಿಷಬ್ ಶೆಟ್ಟಿಯವರಾಗಲೀ ಅಧಿಕೃತವಾಗಿ ಹೇಳಿಲ್ಲ. ಆದರೆ ವಿಜಯ್ ಕಿರಗಂದೂರು ಯಶಸ್ಸನ್ನು ಹಂಚುವ ವ್ಯಕ್ತಿತ್ವ ನೋಡಿದವರಿಗೆ ಇದು ವಿಶೇಷವೆಂದು ಅನಿಸುವುದಿಲ್ಲ.