ಸಾಮಾನ್ಯವಾಗಿ ಸಿನಿಮಾ ನಾಯಕಿಯರು ಎಂದರೆ ಗ್ಲಾಮರ್ ಆಗಿರುತ್ತಾರೆ ಇಲ್ಲವೇ ನಟನೆಯನ್ನು ಇನ್ನಿಲ್ಲದಂತೆ ಇಷ್ಟಪಟ್ಟು ಸಿನಿಮಾ ರಂಗಕ್ಕೆ ಬಂದಿರುತ್ತಾರೆ. ಇವೆಲ್ಲದರ ನಡುವೆ ಕೆಲವರು ವಿಭಿನ್ನ. ನಟಿ ಗಾನವಿ ಲಕ್ಷ್ಮಣ್ ಆ ಗ್ರೂಪಿಗೆ ಸೇರಿದವರು. ವೇದ ಚಿತ್ರದ ನಾಯಕಿ ಗಾನವಿ ಲಕ್ಷ್ಮಣ್ ಚಿತ್ರದ ಟ್ರೇಲರಿನಲ್ಲೇ ಭರವಸೆ ಹುಟ್ಟಿಸುತ್ತಾರೆ. ಚಿತ್ರದ ನಿರ್ದೇಶಕ ಆರಂಭದಲ್ಲೇ ಚಿತ್ರದ ಸ್ತ್ರೀಪಾತ್ರಗಳಿಗೆ ಬೇರೆಯದ್ದೇ ಮಹತ್ವವಿದೆ ಎಂದಿದ್ದರು. ಅದಕ್ಕೆ ತಕ್ಕಂತೆಯೇ ಗಾನವಿ ಲಕ್ಷ್ಮಣ್, ಆದಿತಿ ಸಾಗರ್, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ ಹಾಗೂ ಹಿರಿಯ ನಟಿ ಉಮಾಶ್ರೀ ಪಾತ್ರಗಳು ಮೇಳೈಸುತ್ತಿವೆ. ಇವರಲ್ಲಿ ಗಾನವಿ ಲಕ್ಷ್ಮಣ್ ಶಿವಣ್ಣನ ಪುಷ್ಪಳಾಗಿ ನಟಿಸಿದ್ದಾರೆ ಗಾನವಿ ಲಕ್ಷ್ಮಣ್.
ಆದರೆ ಗಾನವಿ ಚಿತ್ರರಂಗಕ್ಕೆ ಬಂದಿದ್ದು ಆಕಸ್ಮಿಕ. ಸೀತಾರಾಂ ಕಣ್ಣಿಗೆ ಬಿದ್ದ ಗಾನವಿ ಲಕ್ಷ್ಮಣ್, ಸೀತಾರಾಮ್ ಹೆಸರಿನ ಕಾರಣಕ್ಕಾಗಿಯೇ ಮಗಳು ಜಾನಕಿ ಸೀರಿಯಲ್ಲಿನಲ್ಲಿ ನಟಿಸಿದರು. ನಟಿಸಿದ್ದು ಸೀರಿಯಲ್ ಆದರೂ ಗಾನವಿಗೆ ಆ ಸೀರಿಯಲ್ ಕೊಟ್ಟ ಇಮೇಜ್ ಬೇರೆಯೇ. ಮೊದಲ ಚಿತ್ರವೇ ರಿಷಬ್ ಶೆಟ್ಟಿ ಜೊತೆ. ಇಷ್ಟು ದಿನ ಎಲ್ಲಿದ್ರೀ ಎಂದಿದ್ದರಂತೆ ರಿಷಬ್. ರಿಷಬ್ ಶೆಟ್ಟಿಯವರ ಭರವಸೆ ಹುಸಿಯಾಗಲಿಲ್ಲ. ಹೀರೋ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದರು. ಅದಾದ ನಂತರ ಓಕೆ ಎಂದಿದ್ದು ವೇದ ಚಿತ್ರಕ್ಕೆ.
ತೆಲುಗಿಗೂ ಹೊರಟಿರುವ ಗಾನವಿ ಲಕ್ಷ್ಮಣ್, ರುದ್ರಾಂಗಿ ಅನ್ನೋ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದಲ್ಲಿ ಜಗಪತಿ ಬಾಬು, ಮಮತಾ ಮೋಹನ್ ದಾಸ್ ಕೂಡಾ ನಟಿಸುತ್ತಿದ್ದು, ಅಜಯ್ ಕುಮಾರ್ ಗೌನಿ ಡೈರೆಕ್ಟರ್. ಅಂದಂತೆ ಗಾನವಿ ಸೈಕಾಲಜಿ ಮತ್ತು ಕ್ರಿಮಿನಾಲಜಿ ಓದಿರುವ ಪ್ರತಿಭೆ. ಡಿಗ್ರಿ ಪಡೆದಿರುವ ಗಾನವಿ ಡ್ಯಾನ್ಸ್ ಟೀಚರ್ ಕೂಡಾ ಹೌದು. ರಂಗಭೂಮಿ ಹಾಗೂ ಶಾರ್ಟ್ ಫಿಲಂಗಳಲ್ಲಿ ತೆರೆಯ ಹಿಂದೆ ಕೆಲಸ ಮಾಡಿರುವ ಅನುಭವವೂ ಇರುವ ಗಾನವಿ ಡಿ.23ರ ವೇದ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.