ವಿಜಯ ಸಂಕೇಶ್ವರರ ಜೀವನದ ಯಶೋಗಾಥೆಯಲ್ಲಿ ಅವರ ಪತ್ನಿ ಲಲಿತಾ ಅವರದ್ದು ಸಿಂಹಪಾಲು. ವಿಜಯ್ ಸಂಕೇಶ್ವರ್ 2ನೇ ಲಾರಿ ಖರೀದಿಸಿದ್ದು ಮತ್ತು ಸಾಲ ಮಾಡಿದ್ದು ಲಲಿತಾ ಅವರ ಹೆಸರಿನಲ್ಲೇ. ಮೊದಲನೆಯ ಲಾರಿ ಸಾಹಸದ ಮೊದಲ ಮೆಟ್ಟಿಲಾದರೆ, 2ನೇ ಲಾರಿ ಜೀವನದ ಯಶೋಗಾಥೆಯ ಮೊದಲ ಹೆಜ್ಜೆ. ಲಲಿತಾ ಅವರಿಗೂ ಕನಸುಗಳಿತ್ತು. ವಿಜಯ್ ಅವರಿಗೂ ಕನಸುಗಳಿದ್ದವು. ಪತಿಯ ಕನಸುಗಳಿಗೆ ನೀರೆರೆಯುತ್ತಾ ಬೆನ್ನೆಲುಬಾಗಿ ನಿಂತವರು ಲಲಿತಾ ಸಂಕೇಶ್ವರ್. ಕುಟುಂಬದ ಹೊಣೆಯನ್ನಷ್ಟೇ ಅಲ್ಲ, ಪತ್ನಿಯಾಗಿ, ತಾಯಿಯಾಗಿ ವಿಜಯ್ ಸಂಕೇಶ್ವರ್ ಅವರಿಗೆ ಹೆಗಲಿಗೆ ಹೆಗಲಾದರು. ಆ ಪಾತ್ರದಲ್ಲಿ ನಟಿಸಿರುವುದು ಸಿರಿ ಪ್ರಹ್ಲಾದ್.
ವಿಜಯ್ ಸಂಕೇಶ್ವರ್ ಅವರ ಬಯೋಪಿಕ್ ತಯಾರಾಗುತ್ತಿದೆ ಅನ್ನೋದು ನನಗೆ ಮೊದಲು ಗೊತ್ತಾಗಿದ್ದು ನನ್ನ ತಂದೆಯಿಂದ. ಅವರಿಗೂ, ನನಗೂ ಇಬ್ಬರಿಗೂ ವಿಜಯ್ ಸಂಕೇಶ್ವರ್ ಎಂದರೇನೇ ಒಂದು ವಿಶೇಷ. ಹಾಗಾಗಿಯೇ ಅಪ್ಪ ಹೇಳುತ್ತಿದ್ದಂತೆಯೇ ನಾನೇ ಚಿತ್ರತಂಡಕ್ಕೆ ಕಾಂಟ್ಯಾಕ್ಟ್ ಮಾಡಿದೆ. ಅಡಿಷನ್‍ಗೆ ಹೆಸರು ಸೇರಿಸಿದೆ. ವಿಜಯಾನಂದ ಚಿತ್ರದಲ್ಲಿ ಸಣ್ಣ ಪಾತ್ರವಾದರೂ ಸರಿ, ಮಾಡೋಕೆ ಸಿದ್ಧಳಾಗಿದ್ದೆ. ಆದರೆ ಲಲಿತಾ ಅವರ ಪಾತ್ರವೇ ಸಿಕ್ಕಿತು ಎಂದು ಥ್ರಿಲ್ಲಾಗುತ್ತಾರೆ ಸಿರಿ ಪ್ರಹ್ಲಾದ್.
ನಾನೂ ಉತ್ತರ ಕರ್ನಾಟಕದವಳೇ. ಆದರೆ ಬೆಳೆದಿದ್ದು ಮೈಸೂರಿನಲ್ಲಿ. ಹೀಗಾಗಿ ವರ್ಕ್‍ಶಾಪ್ ಅಗತ್ಯವಾಗಿತ್ತು. ಲಲಿತಾ ಮೇಡಂ ಜೊತೆಗೆ ಕಾಲ ಕಳೆಯುತ್ತಾ ಹೋದಂತೆ ಅವರ ಸರಳತೆ ಇಷ್ಟವಾಯಿತು. ಅವರೊಂದಿಗೆ ನಾನು ನನ್ನ ಕುಟುಂಬದಂತೆಯೇ ಇದ್ದೆ. ಚಿತ್ರದಲ್ಲಿ ನನ್ನದು ಮೂರು ಶೇಡ್ ಇದೆ. ಮೂರು ವಯಸ್ಸಿನ ಕಥೆಯಿದು. ಕಥೆ, ಕಾಲಕ್ಕೆ ತಕ್ಕಂತೆ ವೇಷ, ಬಾಡಿ ಲಾಂಗ್ವೇಜ್ ಎಲ್ಲವೂ ಬದಲಾಗುತ್ತೆ. ಡೈರೆಕ್ಟರ್ ಆ ವಿಷಯದಲ್ಲಿ ಪರ್ಫೆಕ್ಟ್ ಆಗಿದ್ದರು ಎಂದು ರಿಷಿಕಾ ಶರ್ಮಾ ಮತ್ತು ಆನಂದ ಸಂಕೇಶ್ವರ ಅವರಿಗೆ ಥ್ಯಾಂಕ್ಸ್ ಹೇಳುತ್ತಾರೆ ಸಿರಿ ಪ್ರಹ್ಲಾದ್.
ಚಿತ್ರಕ್ಕೆ ಯು ಪ್ರಮಾಣ ಪತ್ರ ಸಿಕ್ಕಿದ್ದು, ನಾಳೆ ಬಿಡುಗಡೆಯಾಗುತ್ತಿದೆ. ನಿಹಾಲ್, ಸಿರಿ ಪ್ರಹ್ಲಾದ್, ಅನಂತನಾಗ್, ರವಿಚಂದ್ರನ್ ಸೇರಿದಂತೆ ದಿಗ್ಗಜ ನಟರೇ ಚಿತ್ರದಲ್ಲಿ ನಟಿಸಿದ್ದಾರೆ.