ಅದು ಪಿಯು ಹುಡುಗರ ಹುಡಗಿಯರ ಕಥೆ. ಯೌವ್ವನ ಶುರುವಾಗುವುದೇ ಪಿಯುಸಿಯಿಂದ. ಆಗ ಶುರುವಾಗುವ ಕನಸುಗಳು, ಆಡಿದ ಆಟಗಳು, ತುಂಟಾಟಗಳು, ಗೆಳೆಯರು, ಪ್ರೇಮ.. ಎಲ್ಲವನ್ನೂ ಹಿಡಿದಿಡುವುದು ಪದವಿಪೂರ್ವ. ಆ ಪದವಿಪೂರ್ವದ ಒಂದು ತೇಜೋಹಾರಿ ಕಥೆಯನ್ನು ಹೇಳೋಕೆ ಹೊರಟಿದ್ದಾರೆ ಹರಿಪ್ರಸಾದ್ ಜಯಣ್ಣ. ಯೋಗರಾಜ್ ಭಟ್ಟರ ಗರಡಿಯವರೇ. ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಅವರು ನಿರ್ಮಾಣ ಮಾಡಿರುವ ಪದವಿಪೂರ್ವ ಚಿತ್ರದ ಟೀಸರ್ ರಿಲೀಸ್ ಆಗಿದೆ. ನವರಸನಾಯಕ ಜಗ್ಗೇಶ್ ತಮ್ಮ ಪದವಿಪೂರ್ವದ ದಿನಗಳನ್ನು ನೆನಪಿಸಿಕೊಂಡೇ ಟೀಸರ್ ಬಿಡುಗಡೆ ಮಾಡಿದ್ದಾರೆ.
ಪೃಥ್ವಿ ಶಾಮನೂರು ಹೀರೋ. ಈ ಚಿತ್ರದ ಮೂಲಕ ಹದಿಹರೆಯದ ಹುಡುಗನ ಪಾತ್ರದಲ್ಲಿ ತೆರೆಗೆ ಬರುತ್ತಿರುವ ಪೃಥ್ವಿಗೆ ಇಬ್ಬರು ನಾಯಕಿಯರು. ಅಂಜಲಿ ಅನೀಶ್ ಮತ್ತು ಯಶಾ ಶಿವಕುಮಾರ್. ಕಥೆ ನಡೆಯುವುದು ಮೊಬೈಲು, ಇಂಟರ್ನೆಟ್ಟು.. ಇಲ್ಲದ ಕಾಲದಲ್ಲಿ. 90ರ ದಶಕದ ಕಥೆ ಚಿತ್ರ ನೋಡಿದವರಿಗೆ ತಮ್ಮ ತಮ್ಮ ಪಿಯು ದಿನಗಳನ್ನು ನೆನಪು ಮಾಡಿಕೊಂಡರೆ ಅಚ್ಚರಿಯಿಲ್ಲ. ಯೋಗರಾಜ್ ಭಟ್ ಹೇಳುವುದು ಕೂಡಾ ಇದೇ. ಇದು ನಮ್ಮ ಸಿನಿಮಾ. ಈ ಸಿನಿಮಾದಲ್ಲಿ ನಾನು ನನ್ನ ಪಿಯು ದಿನಗಳನ್ನು ನೆನಪಿಸಿಕೊಂಡೆ ಎಂದಿರೋ ಯೋಗರಾಜ್ ಭಟ್ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಶುಭ ಕೋರಿದ್ದಾರೆ. ಡಿಸೆಂಬರ್ ಕೊನೆಯಲ್ಲಿ ಪದವಿ ಪೂರ್ವ ರಿಲೀಸ್ ಆಗುತ್ತಿದೆ.