ವಿಕ್ರಾಂತ್ ರೋಣ ಸೂಪರ್ ಹಿಟ್ ಆದ ನಂತರ ಕಿಚ್ಚ ಸುದೀಪ್ ಮುಂದೇನು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸುದೀಪ್ ಮುಂದಿನ ಚಿತ್ರ ಯಾವುದಿರಬಹುದು ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರೆ.. ಅತ್ತ ಬಿಗ್ ಬಾಸ್ ನಿರೂಪಣೆ, ಫ್ಯಾಮಿಲಿ ಜೊತೆ ಪ್ರವಾಸ ಮತ್ತು ತೀರ್ಥಯಾತ್ರೆಯಲ್ಲಿ ಬ್ಯುಸಿಯಾಗಿದ್ದಾರೆ ಕಿಚ್ಚ ಸುದೀಪ್. ಅಫ್ಕೋರ್ಸ್, ಎಂದಿನಂತೆ ಹಲವು ಕಥೆ ಕೇಳುತ್ತಿದ್ದರೂ.. ಸಮಾಧಾನವಾದಂತಿಲ್ಲ. ಆದರೆ ಈಗ ಗುಡ್ ನ್ಯೂಸ್ ಒಂದು ತಮಿಳು ಚಿತ್ರರಂಗದಿಂದ ಬಂದಿದೆ. ಕಿಚ್ಚ ಸುದೀಪ್ ಹೊಸ ಚಿತ್ರಕ್ಕೆ ಯೆಸ್ ಎಂದಿದ್ದಾರೆ. ಅದೂ ಲೈಕಾ ಸಂಸ್ಥೆ ಜೊತೆಗೆ.
ರಜನಿಕಾಂತ್, ಕಮಲ್ ಹಾಸನ್, ಅಜಿತ್, ವಿಜಯ್, ಅಕ್ಷಯ್ ಕುಮಾರ್, ಐಶ್ವರ್ಯಾ ರೈ.. ಮೊದಲಾದವರಿಗೆ ಸಿನಿಮಾ ಮಾಡಿದ್ದ ಲೈಕಾ ಸಂಸ್ಥೆ ಜೊತೆ ಸುದೀಪ್ ಸಿನಿಮಾ ಒಪ್ಪಿಕೊಂಡಿದ್ದಾರಂತೆ. 2.0, ಪೊನ್ನಿಯನ್ ಸೆಲ್ವನ್ (ಪಿಎಸ್), ಇಂಡಿಯನ್ 2, ದರ್ಬಾರ್, ರಾಮ್ ಸೇತು, ಕತ್ತಿ, ಖೈದಿ 150, ಕೊಲಮಾವು ಕೋಕಿಲ.. ಹೀಗೆ ಹಲವು ಹಿಟ್ ಚಿತ್ರಗಳನ್ನು ಕೊಟ್ಟಿರುವ ಲೈಕಾ ಸಂಸ್ಥೆ ಹೊಸ ಪ್ರಾಜೆಕ್ಟ್ಗಾಗಿ ಸುದೀಪ್ ಅವರನ್ನು ಕಾಂಟ್ಯಾಕ್ಟ್ ಮಾಡಿದೆ. ಕಥೆಯನ್ನು ಸುದೀಪ್ ಓಕೆ ಮಾಡಿದ್ದಾರೆ ಎಂಬ ಸುದ್ದಿಯೂ ಇದೆ. ಅಧಿಕೃತ ಘೋಷಣೆಯೊಂದು ಬಾಕಿ ಉಳಿದಿದೆ. ಸುದೀಪ್ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಲೈಕಾದವರು ಹೊಸ ಸಿನಿಮಾ ಯಾವುದು ಎಂದು ಘೋಷಣೆ ಮಾಡಲಿದ್ದಾರೆ.
ಇತ್ತೀಚೆಗೆ ಸುದೀಪ್ ಅವರ ಶಾಂತಿನಿವಾಸಕ್ಕೆ (ಸುದೀಪ್ ಅವರ ಮನೆಯ ಹೆಸರು) ಲೈಕಾದವರು ಭೇಟಿ ನೀಡಿದ್ದರಂತೆ. ಎಲ್ಲವೂ ಓಕೆ ಆಗಿದ್ದು ಜನವರಿಯಲ್ಲಿ ಸುದೀಪ್ ಅವರ 46ನೇ ಸಿನಿಮಾ ಸೆಟ್ಟೇರಲಿದೆ ಎಂಬ ಮಾಹಿತಿ ಇದೆ.