ವಿಜಯ ಸಂಕೇಶ್ವರ.. ಹುಬ್ಬಳ್ಳಿಯ ಹುಡುಗ ವಿಆರ್ಎಲ್ ಎಂಬ ಸಂಸ್ಥೆ ಕಟ್ಟಿದ್ದು, ವಿಜಯ ಕರ್ನಾಟಕ, ವಿಜಯವಾಣಿ, ವಿಜಯ ಟೈಮ್ಸ್, ದಿಗ್ವಿಜಯ ಟಿವಿ ಎಂಬ ಸುದ್ದಿ ಸಂಸ್ಥೆ ಕಟ್ಟಿದ್ದು.. ಪ್ರತಿಯೊಂದು ಹೆಜ್ಜೆಯೂ ಸ್ಫೂರ್ತಿದಾಯಕವೇ. ಸಿನಿಮಾ ಕೇವಲ ಕನ್ನಡದಲ್ಲಷ್ಟೇ ಅಲ್ಲ, ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ.
ಅನಂತನಾಗ್, ರವಿಚಂದ್ರನ್, ವಿನಯಾ ಪ್ರಸಾದ್ ನಟಿಸಿರುವ ಚಿತ್ರದಲ್ಲಿ ನಿಹಾಲ್ ವಿಜಯ ಸಂಕೇಶ್ವರ ಪಾತ್ರದಲ್ಲಿ ನಟಿಸಿದ್ದಾರೆ. ಸಿರಿ ಪ್ರಹ್ಲಾದ್, ಭರತ್ ಬೋಪಣ್ಣ, ಅರ್ಚನಾ ಕೊಟ್ಟಿಗೆ ಮೊದಲಾದವರು ನಟಿಸಿರುವ ಚಿತ್ರಕ್ಕೆ ರಿಷಿಕಾ ಶರ್ಮಾ ನಿರ್ದೇಶಕಿ. ಆನಂದ ಸಂಕೇಶ್ವರ ನಿರ್ಮಾಣದ ಚಿತ್ರದ ಟ್ರೇಲರ್ 4 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಇತ್ತೀಚೆಗೆ ಇಂಗ್ಲಿಷ್ನ ನಂ.1 ನ್ಯೂಸ್ ಚಾನೆಲ್ ರಿಪಬ್ಲಿಕ್ ಟಿವಿಯಲ್ಲಿ ಅರ್ನಾಬ್ ಗೋಸ್ವಾಮಿ ಚಿತ್ರತಂಡದ ಇಂಟರ್ ವ್ಯೂ ಮಾಡಿದ್ದರು.
ಅಂದಹಾಗೆ ಕನ್ನಡದಲ್ಲಿ ಸಾಧಕರು ಕಡಿಮೆಯೇನಿಲ್ಲ. ಇತ್ತೀಚೆಗೆ ವಿಮಾನಯಾನ ಕ್ಷೇತ್ರದ ಕ್ಯಾ.ಗೋಪಿನಾಥ್ ಬಗ್ಗೆ ತಮಿಳಿನಲ್ಲಿ ಸಿನಿಮಾ ಆಗಿತ್ತು. ಸೂರರೈಪೋಟ್ರು. ಜೀವಂತ ಕಂಪ್ಯೂಟರ್ ಎಂದೇ ಹೆಸರಾಗಿದ್ದ ಶಕುಂತಲಾದೇವಿಯರ ಬಗ್ಗೆ ಹಿಂದಿಯಲ್ಲಿ ಸಿನಿಮಾ ಆಗಿತ್ತು. ವೀರ ಯೋಧ ಹುತಾತ್ಮ ಸಂದೀಪ್ ಉನ್ನಿಕೃಷ್ಣನ್ ಬಗ್ಗೆ ತೆಲುಗಿನಲ್ಲಿ ಸಿನಿಮಾ ಆಗಿತ್ತು. ಆದರೆ ಕನ್ನಡದ ಸಾಧಕರ ಬಗ್ಗೆ ಕನ್ನಡದವರೇ ಸಿನಿಮಾ ಮಾಡಿ ಇನ್ನಷ್ಟು ಸ್ಫೂರ್ತಿ ತುಂಬಿದ್ದಾರೆ. ವಿಜಯ ಸಂಕೇಶ್ವರರ ಬದುಕಿನ ಸಣ್ಣ ಸಣ್ಣ ಘಟನೆಗಳೂ ಹಲವರಿಗೆ ಸ್ಫೂರ್ತಿಯಾಗಬಲ್ಲದು. ಪ್ರೇರಣೆಯಾಗಬಲ್ಲದು. ಗೆಲ್ಲಲೇಬೇಕೆಂಬ ಹುಮ್ಮಸ್ಸು ಹುಟ್ಟಿಸಬಲ್ಲದು. ಅನುಮಾನವೇ ಇಲ್ಲ, ಇದು ಮಿಸ್ ಮಾಡದೇ ನೋಡಬೇಕಾದ ಸಿನಿಮಾ.