ಗೋಲ್ಡನ್ ಸ್ಟಾರ್ ಗಣೇಶ್, ಆದಿತಿ ಪ್ರಭುದೇವ, ರಚನಾ ಇಂದರ್, ಮೇಘಾ ಶೆಟ್ಟಿ ನಟಿಸಿರುವ ತ್ರಿಬ್ಬಲ್ ರೈಡಿಂಗ್ ಚಿತ್ರದ ಸಕ್ಸಸ್ ಟೂರ್ ಭರ್ಜರಿಯಾಗಿ ನಡೆಯುತ್ತಿದೆ. ಆದಿತಿ ಪ್ರಭುದೇವ ಮದುವೆಯ ಸಂಭ್ರಮದಲ್ಲಿದ್ದಾರೆ. ಗಣೇಶ್ ಮತ್ತೊಂದು ಚಿತ್ರದ ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದು ನಾಯಕಿಯರಾದ ಮೇಘಾ ಶೆಟ್ಟಿ ಮತ್ತು ರಚನಾ ಇಂದರ್ ಹಾಗೂ ನಿರ್ದೇಶಕ ಮಹೇಶ್ ಗೌಡ ಚಿತ್ರತಂಡದ ಯಾತ್ರೆಯ ನೇತೃತ್ವ ವಹಿಸಿ ಮುನ್ನಡೆಯುತ್ತಿದ್ದಾರೆ. ನಿರ್ಮಾಪಕ ರಾಮ್ ಗೋಪಾಲ್ ಇಡೀ ತಂಡದ ಜೊತೆಯಲ್ಲಿಯೇ ಸಾಗುತ್ತಿದ್ದಾರೆ.
ಬಿಡುಗಡೆಗೂ ಮೊದಲೇ ಲಾಭದಲ್ಲಿದ್ದ ತ್ರಿಬ್ಬಲ್ ರೈಡಿಂಗ್ ಕಲೆಕ್ಷನ್ ಸಮಾಧಾನಕರವಾಗಿದೆ. ಮೌತಿಂಗ್ ಪಬ್ಲಿಸಿಟಿಯೂ ಚೆನ್ನಾಗಿದ್ದು ಕಾಮಿಡಿಗಾಗಿಯೇ ಜನ ಥಿಯೇಟರಿಗೆ ಬರುತ್ತಿದ್ದಾರೆ. ಮೂವರು ಚೆಲುವೆಯರ ಜೊತೆ ಸಕ್ಕತ್ ರೊಮ್ಯಾನ್ಸ್ ಮಾಡಿರುವ ಗಣೇಶ್ ಅವರ ಕಾಮಿಡಿ ಟೈಮಿಂಗ್ ಮತ್ತೊಮ್ಮೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಜೊತೆಗೆ ಡಬ್ಬಲ್ ಮೀನಿಂಗ್ ಇಲ್ಲದ ಹಾಸ್ಯ ಕುಟುಂಬಗಳಿಗೆ ಇಷ್ಟವಾಗಿದೆ. ಸಂಸಾರ ಸಮೇತ ಮಕ್ಕಳೊಂದಿಗೆ ನೋಡಬಹುದಾದ ಕಾಮಿಡಿ ಚಿತ್ರ ತ್ರಿಬ್ಬಲ್ ರೈಡಿಂಗ್. ಮೈಸೂರು, ದಾವಣಗೆರೆ ಸೇರಿದಂತೆ ವಿವಿಧೆಡೆ ಚಿತ್ರತಂಡ ಯಾತ್ರೆ ಹೊರಟಿದೆ.