ಯಶ್ ಮುಂದಿನ ಚಿತ್ರ ಯಾವಾಗ? ಯಾರು ನಿರ್ಮಾಪಕರು? ಯಾರು ನಿರ್ದೇಶಕರು..? ಹೀಗೆ ಹತ್ತು ಹಲವು ಪ್ರಶ್ನೆಗಳಿವೆ. ಕೆಜಿಎಫ್ ಚಾಪ್ಟರ್ 2 ನಂತರ ಯಶ್ ಎಲ್ಲಿಗೇ ಹೋಗಲಿ, ಯಾರನ್ನೇ ಭೇಟಿಯಾಗಲಿ ಈ ನಿರೀಕ್ಷೆಗಳು ಕುತೂಹಲ ಸಾಮಾನ್ಯವಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ನಲ್ಲಿ ನರ್ತನ್ ಸಿನಿಮಾ ಮಾಡ್ತಾರಂತೆ ಅನ್ನೋ ಸುದ್ದಿಯಿತ್ತು. ಶಂಕರ್, ಕರಣ್ ಜೋಹರ್ ಹೀಗೆ.. ಖ್ಯಾತ ನಿರ್ದೇಶಕರ ಸಿನಿಮಾ ಮಾಡುವ ಸುದ್ದಿಯಿತ್ತು. ಆದರೆ.. ಯಾವುದೂ ಇನ್ನೂ ಕನ್ಫರ್ಮ್ ಆಗಿಲ್ಲ. ಈ ನಡುವೆಯೇ ಐರಾ ಪ್ರೊಡಕ್ಷನ್ಸ್ ತಲೆಯೆತ್ತಿದೆ.
ಈಗ ಇದ್ದಕ್ಕಿದ್ದಂತೆ ಐರಾ ಪ್ರೊಡಕ್ಷನ್ಸ್ ಹೆಸರಲ್ಲಿ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಆ ಸಂಸ್ಥೆಯ ಮೂಲಕವೇ ಯಶ್ ಹೊಸ ಸಿನಿಮಾ ಘೋಷಿಸುವ ಸಾಧ್ಯತೆ ಇದೆ. ಡೈರೆಕ್ಟರ್ ಯಾರು? ಗೊತ್ತಿಲ್ಲ. ಕಥೆ ಏನು, ಅದು ಯಶ್ ಅವರಿಗೇ ಗೊತ್ತು.
ಅಂದಹಾಗೆ ಈ ಸಂಸ್ಥೆಯ ಉಸ್ತುವಾರಿ ನೋಡಿಕೊಳ್ಳೋದು ರಾಧಿಕಾ ಪಂಡಿತ್. ಯಶ್ ಅವರ ಸಕ್ಸಸ್ಸಿನಲ್ಲಿ ರಾಧಿಕಾ ಅವರ ಪಾತ್ರವೂ ದೊಡ್ಡದು. ಈಗ ತಮ್ಮ ಪತಿಯ ಸಿನಿಮಾಗೆ ತಾವೇ ನಿರ್ಮಾಪಕಿಯಾಗಲಿದ್ದಾರೆ. ಅದೃಷ್ಟಲಕ್ಷ್ಮಿ ಐರಾ ಹೆಸರಲ್ಲಿ ಪ್ರೊಡಕ್ಷನ್ಸ್ ಹೌಸ್ ಆರಂಭ ಮಾಡುತ್ತಿದ್ದಾರೆ. ಹಾಗಾದರೆ ಯಶ್ ಅವರು ಹೊಂಬಾಳೆ ಜೊತೆ ಕೆಜಿಎಫ್ ಚಾಪ್ಟರ್ 3 ಮಾಡುವ ಸುದ್ದಿಯೂ ನೆನೆಗುದಿಗೆ ಬೀಳಲಿದೆ. ಆದರೆ.. ಒಬ್ಬ ಹೀರೋನ ಮುಂದಿನ ಚಿತ್ರ ಯಾವುದು ಅನ್ನೋ ವಿಷಯವೇ ಇಷ್ಟು ಚರ್ಚಿತವಾಗುತ್ತಿರುವುದು ಇದೇ ಮೊದಲು.