ಕಾಂತಾರ ನಂತರ ಸಪ್ತಮಿ ಗೌಡ ಹೊಸ ಸಿನಿಮಾಗೆ ಓಕೆ ಎಂದಿದ್ದಾರೆ. ಪೈಲ್ವಾನ್ ಕೃಷ್ಣ ನಿರ್ದೇಶನದ ಕಾಳಿ. ಅಭಿಷೇಕ್ ಅಂಬರೀಷ್ ಹೀರೋ ಆಗಿರುವ ಚಿತ್ರದ ಮುಹೂರ್ತವೂ ನೆರವೇರಿದೆ. ಬೆಂಗಳೂರಿನ ಬಂಡಿ ಮಾಂಕಾಳಮ್ಮ ದೇವಸ್ಥಾನದಲ್ಲಿ ಮುಹೂರ್ತವಾಗಿದೆ. ಅಭಿಷೇಕ್ ಅಂಬರೀಷ್ ಎದುರು ನಟಿಸುತ್ತಿರುವ ಸಪ್ತಮಿ ಗೌಡಗೆ ಚಿತ್ರದಲ್ಲಿ ಕರ್ನಾಟಕದಲ್ಲಿರುವ ತಮಿಳು ಹುಡುಗಿಯ ಪಾತ್ರ ಇದೆಯಂತೆ.
ಕಾಂತಾರ ಮುಗಿದ ಮೇಲೆ ನಾನು ಕೇಳಿದ ಹಲವು ಕಥೆಗಳಲ್ಲಿ ಬೆಸ್ಟ್ ಎನಿಸಿದ್ದು ಇದು. ನನ್ನ ಪ್ರತಿ ಪಾತ್ರವೂ ವಿಭಿನ್ನವಾಗಿರಬೇಕು ಎಂದು ನಾನು ಬಯಸುತ್ತೇನೆ. ಒಂದೊಂದು ಪಾತ್ರ ಮಾಡುತ್ತ ಒಂದೊಂದು ಪಾಠ ಕಲಿಯಬೇಕು. ಸಿನಿಮಾ ನೋಡಿದವರು ಈ ಹುಡುಗಿ ಹೊಸ ಪಾತ್ರವನ್ನೇ ಮಾಡಿದ್ದಾಳೆ ಎನ್ನಬೇಕು. ಕಾಳಿಯಲ್ಲಿ ಅಂತಹ ಪಾತ್ರವಿದೆ ಎಂದಿದ್ದಾರೆ ಸಪ್ತಮಿ ಗೌಡ.
ಹಿಂದಿಯಲ್ಲೂ ಒಂದು ಆಫರ್ ಬಂದಿದ್ದು ದೊಡ್ಡ ಬ್ಯಾನರ್ ಆಗಿದ್ದರೂ ಕಥೆ ಇಷ್ಟವಾಗದೆ ಒಪ್ಪಿಕೊಂಡಿಲ್ಲ ಎಂದೂ ಗೊತ್ತಾಗಿದೆ. ಆ ವಿಷಯದ ಬಗ್ಗೆ ಮಾತನ್ನೇ ಆಡದ ಸಪ್ತಮಿ ಗೌಡ ಇನ್ನೂ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರಂತೆ. ಶೀಘ್ರದಲ್ಲೇ ಆ ಚಿತ್ರದ ಘೋಷಣೆಯೂ ಹೊರಬೀಳಲಿದೆ. ಇಷ್ಟಿದ್ದರೂ ಸಂಭಾವನೆ ಹೆಚ್ಚಾಗಿದ್ಯಾ ಎಂದರೆ.. ಆಗಿದೆ ಎಂದುಕೊಂಡರೆ ಆಗಿದೆ. ಆಗಿಲ್ಲ ಎಂದುಕೊಂಡರೆ ಆಗಿಲ್ಲ ಎನ್ನುವ ಮಾರ್ಮಿಕ ಉತ್ತರ ಕೊಟ್ಟು ಮುಗುಳ್ನಗುತ್ತಾರೆ ಸಪ್ತಮಿ ಗೌಡ.