ವಲ್ಮೀಕ. ಇದರ ಅರ್ಥ ಹಾವಿನ ಹುತ್ತ. ವಾಲ್ಮೀಕಿಗೆ ವಾಲ್ಮೀಕಿ ಎಂಬ ಹೆಸರು ಬಂದಿದ್ದೇ ವಲ್ಮೀಕ ಅಂದರೆ ಹಾವಿನ ಹುತ್ತದಲ್ಲಿ ಕುಳಿತು ತಪಸ್ಸು ಮಾಡಿದ್ದರಿಂದ. ಆದರೆ ನಮ್ಮ ವಿಷ್ಣುವರ್ಧನ್ ಅವರ ಕನಸಿನ ಮನೆ ವಲ್ಮೀಕಕ್ಕೆ ಈ ಆರ್ಥ ಬಂದಿರುವ ಕಾರಣವೇ ಬೇರೆ. ವಿಷ್ಣುವರ್ಧನ್ ಅವರ ಮೊದಲ ಸಿನಿಮಾ. ನಾಗರಹಾವಿನ ಮನೆ ಹಾವಿನ ಹುತ್ತ ಅರ್ಥಾತ್ ವಲ್ಮೀಕ. ಹೀಗಾಗಿ ವಿಷ್ಣುವರ್ಧನ್ ಅವರ ಕನಸಿನ ಮನೆಗೆ ವಲ್ಮೀಕ ಎಂದೇ ಹೆಸರಿಟ್ಟಿದ್ದಾರೆ ಭಾರತಿ ವಿಷ್ಣುವರ್ಧನ್.
ನಾಗರಹಾವು ಚಿತ್ರದ ಯಶಸ್ಸಿನ ನಂತರ ಇಲ್ಲೆ ಇದ್ದ ವಿಷ್ಣುವರ್ಧನ್ ಹಳೆಮನೆಗೆ ವಲ್ಮೀಕ ಎಂದು ಹೆಸರಿಟ್ಟಿದ್ದರು. 1976 ರಲ್ಲಿ ಜಾಗ ಖರೀದಿ ಮಾಡಿದ್ದ ಜಾಗ ಇದು. ವಿಷ್ಣುವರ್ಧನ್ ಇಷ್ಟ ಪಟ್ಟ ಜಾಗ ಎಂದು ಮಾಲೀಕರು ಬಿಟ್ಟುಕೊಟ್ಟಿದ್ದ ಜಾಗವಿದು. ಅದೇ ಜಾಗದಲ್ಲೀಗ 6 ಬೆಡ್ ರೂಂನ ಮನೆ ಕಟ್ಟಲಾಗಿದೆ.
ಮನೆ ಮುಂಭಾಗದಲ್ಲೊಂದು ಕೃಷ್ಣನ ವಿಗ್ರಹವಿದೆ. ಅದೂ ಕೂಡಾ ವಿಷ್ಣು ಅವರೇ ಇಷ್ಟ ಪಟ್ಟು ಸ್ಥಾಪಿಸಿದ್ದ ವಿಗ್ರಹ. ಅದಕ್ಕೊಂದು ಕಲ್ಲು ಮಂಟಪ ಕಟ್ಟಿಸಲಾಗಿದೆ.
ಜಯನಗರದ ಟಿ ಬ್ಲಾಕ್ ನಲ್ಲಿ 90/90 ಚದರಡಿಯಲ್ಲಿ ಭವ್ಯವಾಗಿ ಈ ಮನೆ ನಿರ್ಮಾಣ ಮಾಡಲಾಗಿದೆ. ‘ವಲ್ಮೀಕ’ ಹೆಸರಿನಲ್ಲಿ ಗೇಟ್ ಮೇಲೆ ಸಿಂಹದ ಮುಖದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಸುಮಲತಾ ಅಂಬರೀಷ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.