ವರಾಹರೂಪಂ.. ಕಾಂತಾರದ ಸಿಗ್ನೇಚರ್ ಟ್ಯೂನ್ ಸಾಂಗ್ ಎನ್ನಬಹುದು. ಚಿತ್ರದ ಯಶಸ್ಸಿನಲ್ಲಿ ರಿಷಬ್ ಶೆಟ್ಟಿ ನಟನೆ, ನಿರ್ದೇಶನ, ಸಪ್ತಮಿ ಗೌಡ ಅಭಿನಯ, ಚಿತ್ರದ ಎಲ್ಲ ಕಲಾವಿದರು ಮತ್ತು ತಂತ್ರಜ್ಞರ ಒಟ್ಟಾರೆ ಶ್ರಮ ಹೇಗೆ ಕಾರಣವೋ.. ಅಷ್ಟೇ ದೊಡ್ಡ ಕಾರಣ ಅಜನೀಶ್ ಲೋಕನಾಥ್ ಅವರ ಸಂಗೀತ. ಈ ಹಾಡು ಪ್ರೇಕ್ಷಕರ ಹೃದಯಕ್ಕೇ ಇಳಿದಿತ್ತು. ಆದರೆ ಸಿನಿಮಾ ಬಿಡುಗಡೆಯ ನಂತರ ಈ ಹಾಡು ತಮ್ಮದು ತೈಕ್ಕುಡಂ ಬ್ರಿಡ್ಜ್ ಎಂಬ ಕೇರಳದ ಮ್ಯೂಸಿಕ್ ತಂಡದವರು ಕೇಸು ಹಾಕಿದರು. ವರಾಹರೂಪಂ.. ರಾಗ..ತಾಳವನ್ನೇ ಹೋಲುವ ತೈಕ್ಕುಡಂ ಬ್ರಿಡ್ಜ್ನವರ ನವರಸನ್.. ಅಲ್ಬಂ, 2017ರಿಂದಲೇ ಯೂಟ್ಯೂಬ್ನಲ್ಲಿತ್ತು. ಇಲ್ಲ ಇದು ತಮ್ಮದು ಎಂದು ವಾದಿಸಿದವರು ರಿಷಬ್ ಶೆಟ್ಟಿ ಮತ್ತು ಅಜನೀಶ್ ಲೋಕನಾಥ್. ವಿವಾದ ಕೋರ್ಟ್ ಮೆಟ್ಟಿಲೇರಿತು. ಕೋರ್ಟಿನಲ್ಲಿ ವರಾಹರೂಪಂ.. ಹಾಡು ಮತ್ತು ಸಂಗೀತದ ಬಳಕೆಗೆ ತಡೆಯಾಜ್ಞೆ ನೀಡಿತು. ತಡೆಯಾಜ್ಞೆ ತೆರವುಗೊಳಿಸುವ ಕುರಿತಂತೆ ಕೇರಳ ಹೈಕೋರ್ಟ್ನಲ್ಲಿ ಕೂಡಾ ಹೊಂಬಾಳೆ ಸಂಸ್ಥೆಗೆ ಹಿನ್ನಡೆಯಾಗಿತ್ತು. ಕೆಳಹಂತದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಕಾರಣ, ತಡೆಯಾಜ್ಞೆ ತೆರವು ಸಾಧ್ಯವಿಲ್ಲ ಎಂದಿತ್ತು ಹೈಕೋರ್ಟ್. ಇದರ ಮಧ್ಯೆ ನಿನ್ನೆ ಇದ್ದಕ್ಕಿದ್ದಂತೆ ಸಂಚಲನ.
ಕೇರಳದ ಕೋಝಿಕ್ಕೋಡ್ ನ್ಯಾಯಾಲಯದಲ್ಲಿ ಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವಾಯ್ತು. ಅದೇ ಕೋರ್ಟಿನಲ್ಲಿ ತೈಕ್ಕುಡಂ ಬ್ರಿಡ್ಜ್ ತಂಡದವರು ಅರ್ಜಿ ಸಲ್ಲಿಸಿದ್ದರು. ತೈಕ್ಕುಡಂ ತಂಡದ ಅರ್ಜಿಯನ್ನೇ ವಜಾ ಮಾಡಿತು ಕೋಝಿಕ್ಕೋಡ್ ನ್ಯಾಯಾಲಯ. ತಡೆಯಾಜ್ಞೆ ತೆರವು ಎಂದೇ ಎಲ್ಲ ಭಾವಿಸಿದರು. ಆದರೆ ಅದು ಕೋಝಿಕ್ಕೋಡ್ ನ್ಯಾಯಾಲಯದ ತೀರ್ಪಿಗೆ ಮಾತ್ರವೇ ಸೀಮಿತವಾಗಿತ್ತು.
ಏಕೆಂದರೆ ತೈಕ್ಕುಡಂ ತಂಡದವರು ಪಾಲಕ್ಕಾಡ್ ಕೋರ್ಟಿನಲ್ಲಿಯೂ ಅರ್ಜಿ ಸಲ್ಲಿಸಿದ್ದರು. ಪಾಲಕ್ಕಾಡ್ ಕೋರ್ಟ್ ತಡೆಯಾಜ್ಞೆ ಜಾರಿ ಮಾಡಿದೆ.
ಹಾಗಾದರೆ ಕಾಂತಾರದಲ್ಲಿ ಈ ಮೊದಲು ಇದ್ದ ವರಾಹರೂಪಂ.. ಹಾಡನ್ನೇ ಕೇಳಬಹುದಾ? ಇಲ್ಲ. ಸದ್ಯಕ್ಕೆ ಸಾಧ್ಯವಿಲ್ಲ. ಏಕೆಂದರೆ ಪಾಲಕ್ಕಾಡ್ ಕೋರ್ಟ್ ಇನ್ನೂ ತಡೆ ನೀಡಿಲ್ಲ. ಕೋರ್ಟ್ ಅದೇಶವನ್ನು ಹೀಗೆಯೇ ಬರಲಿದೆ ಎಂದು ಹೇಳೋಕೆ ಸಾಧ್ಯವಿಲ್ಲ. ತಡೆಯಾಜ್ಞೆ ಜಾರಿಯಲ್ಲಿದೆ.